ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಅಂತರರಾಷ್ಟ್ರೀಯ ಮಹಿಳಾ ದಿನ; ಬಹುಮುಖ ಪ್ರತಿಭೆ ಶಿಕ್ಷಕಿ ಲತಾ

Last Updated 8 ಮಾರ್ಚ್ 2022, 7:38 IST
ಅಕ್ಷರ ಗಾತ್ರ

ತುರುವೇಕೆರೆ: ಸಾಧನೆಗೆ ವಯಸ್ಸು ಮತ್ತು ವೃತ್ತಿ ಎರಡೂ ಅಡ್ಡಿ ಬರುವುದಿಲ್ಲ ಎಂಬುದನ್ನು ಹೈಜಂಪ್‍ ಮತ್ತು ಲಾಂಗ್‌ಜಂಪ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲ್ಲೂಕಿನ ಬಹುಮುಖ ಪ್ರತಿಭೆ ಶಿಕ್ಷಕಿ ಲತಾ ಎ.ಆರ್. ತೋರಿಸಿಕೊಟ್ಟಿದ್ದಾರೆ.

ಪ್ರಸ್ತುತಅವರು ಕೊಟ್ಟೂರನಕೊಟ್ಟಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಹದಿನೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರೂ ಪ್ರವೃತ್ತಿಯಲ್ಲಿ ಕ್ರೀಡಾಪಟು. ಅವರು ಹೈಸ್ಕೂಲ್‍ ಹಂತದಿಂದಲೇ ಕ್ರೀಡೆಯ ಬಗೆಗೆ ಅಪಾರ ಒಲವು ಬೆಳೆಸಿಕೊಂಡು ಹೈಜಂಪ್‍ನಲ್ಲಿಯೇ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಹೆಸರುಗಳಿಸಿದರು.

ಮದುವೆಯಾಗಿ ಶಿಕ್ಷಕಿ ವೃತ್ತಿ ಆರಂಭಿಸಿದ ಮೇಲೆ ಕ್ರೀಡೆ ಬಗ್ಗೆ ಕೊಂಚವೂ ಹಿನ್ನೆಡೆ ಆಗದಂತೆ ಮನೆಯಲ್ಲಿ ಪತಿ, ಮಕ್ಕಳು, ಹಿರಿಯರ ಪ್ರೋತ್ಸಾಹದಿಂದ 2016ರಲ್ಲಿ ಜಿಲ್ಲಾ ಹಂತದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದರು.

2017ರಲ್ಲಿ ಮೈಸೂರಿನಲ್ಲಿ ನಡೆದ ಹೈಜಂಪ್‍ ಸ್ಪರ್ಧೆ, 2018ರ ಧಾರವಾಡದಲ್ಲಿ ಹೈಜಂಪ್‍ ಮತ್ತು ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. 2019-20ನೇ ಸಾಲಿನಲ್ಲಿ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಮತ್ತು 53 ಕೆ.ಜಿ ವಿಭಾಗದ ಮಹಿಳಾ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಮತ್ತೆ 35-40 ವರ್ಷದ ಮಹಿಳೆಯರ ವಿಭಾಗದ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಪುನರಾಯ್ಕೆಯಾದರು.

2020-2021ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಗೇಮ್ಸ್‌ನಲ್ಲಿ ಭಾಗವಹಿಸಿದರು. 2020–21ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ಪ್ರಥಮ, ಹರ್ಡಲ್ಸ್ ದ್ವಿತೀಯ, ಕಬಡ್ಡಿ ದ್ವಿತೀಯ ಮತ್ತು ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

2020-21ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟದ 53 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಮೊದಲ ಬಹುಮಾನ ಪಡೆದು ಹರಿಯಾಣ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ತಾಲ್ಲೂಕು ಮಟ್ಟದ ಸುಗ್ಗಿ ಸಂಭ್ರಮದ ಅಡುಗೆ ಕಾರ್ಯಕ್ರಮದಲ್ಲಿಯೂ ಪ್ರಥಮ ಬಹುಮಾನ ಪಡೆದಿದ್ದಾರೆ.

2020-21ರಲ್ಲಿ ಕ್ರಿಯೇಟಿವ್ 5 ಇವೆಂಟ್ಸ್‌ನಿಂದ ತುಮಕೂರಿನಲ್ಲಿ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಿಸೆಸ್ ಕ್ಯಾಟಗರಿಯಲ್ಲಿ ಬೆಸ್ಟ್ ರ‍್ಯಾಪ್‌ ವಾಕ್‍, ಬೆಸ್ಟ್ ಆಕ್ಟಿವ್ ಪಾರ್ಟಿಸಿಪೆಂಟ್ ಬಹುಮಾನ ಪಡೆದಿರುವುದು ಅವರ ಹೆಗ್ಗಳಿಕೆ.

2020-21ನೇ ಸಾಲಿನ ಗುರುಕುಲ ಕ್ರೀಡಾ ಕುಸುಮ ಪ್ರಶಸ್ತಿ, ಶಾರದಾ ಮಹಿಳಾ ಸಮಾಜದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಸಾಧಕಿ ಪ್ರಶಸ್ತಿ, ತುರುವೇಕೆರೆ ತಾಲ್ಲೂಕು ರೋಟರಿ ಕ್ಲಬ್‌ನಿಂದ ನ್ಯಾಷನಲ್ ಬಿಲ್ಡರ್ ಪ್ರಶಸ್ತಿ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ ಸುವರ್ಣ ಸೂಪರ್‌ ಸ್ಟಾರ್‌ ಕಾರ್ಯಕ್ರಮದಲ್ಲಿ ‘ಸೂಪರ್‌ ಸ್ಟಾರ್‌ ಆಫ್‌ ಡೇ’ ಮತ್ತು ‘ಸೂಪರ್ ಸ್ಟಾರ್‌ ಆಫ್‌ ದಿ ವೀಕ್’ ಪ್ರಶಸ್ತಿಗೆ ಭಾಜನರಾದರು.

ಕ್ರೀಡೆಯ ಜೊತೆಗೆ ಸೃಜನಶೀಲ ಸಾಹಿತ್ಯದಲ್ಲಿ ಕಾವ್ಯ ಕುಸುರಿ ಮಾಡಿ ಕವಿತೆ, ಮಕ್ಕಳ ಪದ್ಯ, ಬರವಣಿಗೆ, ಪ್ರಬಂಧ, ಚಿತ್ರಕಲೆ, ರಂಗೋಲಿ ಬಿಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದಾರೆ. ನವ ಪರ್ವ ಫೌಂಡೇಶನ್ ಪ್ರಕಾಶನದಿಂದ ಬಿಡುಗಡೆಯಾದ ಕೂಸುಮರಿ ಪುಸ್ತಕದಲ್ಲಿ ಅವರು ರಚಿಸಿದ ಎರಡು ಮಕ್ಕಳ ಪದ್ಯಗಳು ಪ್ರಕಟವಾಗಿವೆ. ಖಿದ್ಮಾ ಫೌಂಡೇಶನ್ ಕರ್ನಾಟಕ, ನವ ಪರ್ವ ಫೌಂಡೇಶನ್‌ನ ಬತ್ತದ ತೊರೆ ಸಾಹಿತ್ಯ ಘಟಕಗಳಲ್ಲಿ ‘ಉತ್ತಮ ಬರಹಗಾರರು’ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT