ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಅಂತರರಾಷ್ಟ್ರೀಯ ಮಹಿಳಾ ದಿನ; ಸಾವಿರಾರು ಮರ ಬೆಳೆಸಿದ ಧೀಮಂತೆ

ಬರಡು ಭೂಮಿಯಲ್ಲಿ ಪರಿಸರ ಸಂರಕ್ಷಣೆಯ ಕಾಯಕ
Last Updated 8 ಮಾರ್ಚ್ 2022, 7:24 IST
ಅಕ್ಷರ ಗಾತ್ರ

ಮಧುಗಿರಿ: ಕಠಿಣ ಶ್ರಮ ಹಾಗೂ ಶ್ರದ್ಧೆ ಇದ್ದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು ಎಂಬುದಕ್ಕೆ ತಾಲ್ಲೂಕಿನ ಕಸಬಾ ಹೋಬಳಿ ಮಿಡತರಹಳ್ಳಿಯ ರೈತ ಮಹಿಳೆ ಮಂಗಳಗೌರಮ್ಮ ನಿದರ್ಶನವಾಗಿದ್ದಾರೆ.

ಎಲ್ಲಿ ನೋಡಿದರೂ ಬರಡು ಭೂಮಿ. ಸರಿಯಾಗಿ ಮಳೆಯಿಲ್ಲ, ಬೆಳೆಯಂತೂ ಮೊದಲೇ ಇಲ್ಲ . ಜೀವನ ನಡೆಸೋದಕ್ಕೂ ಕಷ್ಟ. ಏನಾದರೂ ಮಾಡಿ ಇರುವ ಜಮೀನಿನಲ್ಲಿ ಉತ್ತಮ ಬೆಳೆ ತೆಗೆದು ಇತರೇ ರೈತರಿಗೂ ಮಾದರಿಯಾಗಬೇಕೆಂದು ಕೃಷಿ ಚಟುವಟಿಕೆಗೆ ಮುಂದಾಗಿ ಅವರು ಯಶಸ್ವಿಯಾಗಿದ್ದಾರೆ.

ಅವರು ಏಳನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರೂ ಸಾಧನೆ ಬಹಳ ದೊಡ್ಡದಾಗಿದೆ. ಮಿಡತರಹಳ್ಳಿಯಲ್ಲಿ 12 ಎಕರೆ ಜಮೀನು ಹೊಂದಿದ್ದಾರೆ. ಮೂರು ಕೊಳವೆಬಾವಿಗಳನ್ನು ಕೊರೆಯಿಸಿ 300 ಮಾವು, 400 ನೇರಳೆ, 300 ಸೀಬೆ, 2 ಸಾವಿರ ಬೇವು, 80 ಹುಣಸೆ, 4 ಸಾವಿರ ಶ್ರೀಗಂಧ, 500 ರಕ್ತಚಂದನ, ಬಾಳೆ, ತೆಂಗು, ನಿಂಬೆ, ಗುಲಾಬಿ ಸೇರಿದಂತೆ ಹಲವಾರು ಹೂವಿನ ತೋಟಗಳನ್ನು ಮಾಡಿಕೊಂಡಿದ್ದಾರೆ.

ಅಲ್ಲದೇ, ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಈಗಾಗಲೇ, ಹಣ್ಣಿನ ಗಿಡಗಳನ್ನು ನೆಟ್ಟು ಐದು ವರ್ಷಗಳು ಕಳೆದಿವೆ. ಈಗ ಫಸಲು ಆರಂಭವಾಗಿ ಕೈತುಂಬಾ ಹಣಗಳಿಸುತ್ತಿದ್ದಾರೆ. ಪ್ರತಿನಿತ್ಯ ಹಸು ಹಾಲನ್ನು ಕರೆದು ಡೇರಿ ಹಾಕುವುದು, ಗಿಡಗಳ ಸಂರಕ್ಷಣೆ, ಹಸು ಮತ್ತು ಕೋಳಿಗಳನ್ನು ಹಾರೈಕೆ ಮಾಡುವುದು ನಿತ್ಯದ ಕಾಯಕವಾಗಿದೆ.

ಮಂಗಳಗೌರಮ್ಮ ಅವರು ಬೆಳೆದಿರುವ ಜಮೀನಿನಲ್ಲಿ ಗಿಡ ಮತ್ತು ಮರಗಳನ್ನು ನೋಡಲು ದೂರದ ಊರುಗಳಿಂದ ರೈತರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಜಮೀನಿನಲ್ಲಿ ಹನಿ ನೀರಾವರಿ:ಜಮೀನಿನಲ್ಲಿ ಸಾವಿರಾರು ಮರಗಳು ಇರುವುದರಿಂದ ಪ್ರತಿಯೊಂದಕ್ಕೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರನ್ನು ಉಳಿಸುವ ಕಾರ್ಯ ಮಾಡಿದ್ದಾರೆ. ಇದಲ್ಲದೇ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಹೂವಿನ ತೋಟಗಳಿಗೆ ನೀರು ಕಟ್ಟುವ ಜೊತೆಗೆ ಮಳೆ ನೀರನ್ನು ಸಂಗ್ರಹಿಸುವ ಕಾರ್ಯ ಕೂಡ ಮಾಡಿರುವುದರಿಂದ ಭೂಮಿ ತಂಪಾಗಿದ್ದು, ಗಿಡ ಮತ್ತು ಮರಗಳು ಸಮೃದ್ಧವಾಗಿ ಬೆಳೆಯುತ್ತಿವೆ.

‘ಜಮೀನಿನಲ್ಲಿ ಬೆಳೆದಿರುವ ಗಿಡಗಳು ಈಗಾಗಲೇ ಉತ್ತಮ ಫಸಲು ನೀಡುತ್ತಿರುವುದರಿಂದ ಆದಾಯ ಕೂಡ ಬರುತ್ತಿದೆ. ಭೂಮಿ ನಂಬಿದರೆ ಮೋಸ ಆಗುವುದಿಲ್ಲ. ಕಠಿಣ ಶ್ರಮ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪತಿ ಮಂಜುನಾಥ್ ಹಾಗೂ ಇಂಗ್ಲೆಂಡ್‌ನಲ್ಲಿರುವ ನನ್ನ ಅಣ್ಣ ಪ್ರೊ.ಮಾರುತಿ ಎನ್. ಗೌಡ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಮಂಗಳಗೌರಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT