ಗುರುವಾರ , ನವೆಂಬರ್ 21, 2019
20 °C

ವೈದ್ಯಕೀಯ ಕಾಲೇಜಿನಿಂದ ಐಟಿ ಅಧಿಕಾರಿಗಳು ವಾಪಸ್

Published:
Updated:
Prajavani

ತುಮಕೂರು: ಮೂರು ದಿನಗಳಿಂದ ಶಾಸಕ ಡಾ.ಜಿ.ಪರಮೇಶ್ವರ ಒಡೆತನದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಮಧ್ಯಾಹ್ನ 3.30ಕ್ಕೆ ಕಾಲೇಜಿನಿಂದ ವಾಪಸ್ ಬೆಂಗಳೂರಿಗೆ ತೆರಳಿದರು.

ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಐಟಿ ಅಧಿಕಾರಿಗಳಿದ್ದ ಕೊಠಡಿಗೆ, ವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಕಾಲೇಜಿನ ಮುಂಬಾಗಿಲಲ್ಲಿ ಒಬ್ಬ ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್, ಎಎಸ್‌ಐ ಅವರನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅವರೂ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿ ತೆರಳಿದ್ದರು.

ಎಎಸ್ಪಿಯವರು ತೆರಳಿದ ಸ್ವಲ್ಪ ಹೊತ್ತಿಗೆ ಅಂದರೆ ಮಧ್ಯಾಹ್ನ 3.30ಕ್ಕೆ ಐಟಿ ಅಧಿಕಾರಿಗಳು ಕಾಲೇಜಿನಿಂದ ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು.

ಪರಮೇಶ್ವರ ಬರಲಿಲ್ಲ: ವೈದ್ಯಕೀಯ ಕಾಲೇಜಿನಲ್ಲಿ ದಾಖಲಾತಿ ಪರಿಶೀಲನೆ ನಡೆಯುತ್ತಿದ್ದು, ಅಲ್ಲಿಗೆ ತೆರಳುವುದಾಗಿ ಬೆಳಿಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಡಾ.ಪರಮೇಶ್ವರ ಅವರು ಆಪ್ತ ಸಹಾಯಕನ ಆತ್ಮಹತ್ಯೆ ಹಿನ್ನೆಲೆಯಲ್ಲಿ ವೈದ್ಯಕೀಯ ಕಾಲೇಜಿಗೆ ಬರಲಿಲ್ಲ.

ಪ್ರತಿಕ್ರಿಯಿಸಿ (+)