ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರರಾಜ್ಯಗಳಲ್ಲಿ ಕಂಪನಿಗಳು ಬಂದ್: ಹಲಸಿನ ಸ್ವಾದ ನುಂಗಿದ ಕೊರೊನಾ

ಸಂಗ್ರಹಕ್ಕೆ ಶೀತಲೀಕರಣ ಘಟಕಗಳೂ ಇಲ್ಲ
Last Updated 17 ಏಪ್ರಿಲ್ 2020, 2:19 IST
ಅಕ್ಷರ ಗಾತ್ರ

ತುಮಕೂರು: ದೇಶದಲ್ಲಿಯೇ ಉತ್ಕೃಷ್ಟ ಹಲಸಿನ ನಾಡುಗಳನ್ನು ಪಟ್ಟಿಮಾಡಿದರೆ ತುಮಕೂರು ಜಿಲ್ಲೆ ಪ್ರಮುಖ ಸ್ಥಾನ ಪಡೆಯುತ್ತದೆ.

ಹಿರೇಹಳ್ಳಿ ಕೇಂದ್ರೀಯ ತೋಟಗಾರಿಕಾ ಸಂಸ್ಥೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ತಳಿಯ ಹಲಸನ್ನು ಪಟ್ಟಿಮಾಡಿದೆ. ಈಗಾಗಲೇ ‘ಚೇಳೂರು ಸಿದ್ದು’ ಮತ್ತು ಚೌಡ್ಲಾಪುರದ ‘ಶಂಕರ’ ಹಲಸು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿವೆ. ಕೇರಳದಂತಹ ಸಮೃದ್ಧ ಹಲಸಿನ ಬೀಡಿನಲ್ಲಿಯೇ ತುಮಕೂರು ಹಲಸಿಗೆ ಬೇಡಿಕೆ ಇದೆ. ಹೀಗೆ ಹೊರರಾಜ್ಯಗಳಲ್ಲಿ ಕಂಪು ಬೀರುತ್ತಿದ್ದ ಹಲಸು ಈಗ ಮರಗಳಲ್ಲಿಯೇ ಹಣ್ಣಾಗಿ ನಿಂತಿದೆ.

ಹಲಸಿನ ಮರಗಳನ್ನು ಚೇಣಿಗೆ (ಗುತ್ತಿಗೆ) ಮಾಡಿಕೊಂಡವರು ಕೈ ಹಿಸುಕಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಹಲಸು ಮೌಲ್ಯವರ್ಧನೆ ಆಗುತ್ತಿಲ್ಲ, ನಿಜ. ಆದರೆ ಕಾಯಿಗಳನ್ನು ಮಾರಾಟಮಾಡಿ ರೈತರು ಹಣ ಗಳಿಸುತ್ತಿದ್ದಾರೆ. ಹಲಸು ಬೆಳೆಗಾರರ ಸಂಘಗಳ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 60ರಿಂದ 70 ಸಾವಿರ ಮರಗಳು ಇವೆ. ಈ ಮರಗಳನ್ನು ಚೇಣಿಗೆ ಪಡೆದು ಹೊರರಾಜ್ಯ, ಜಿಲ್ಲೆಗಳಿಗೆ ಕಳುಹಿಸುವ 3,000 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊರೊನಾ ಪರಿಣಾಮ ಹಲಸಿನ ವಹಿವಾಟು ಸ್ತಬ್ಧಗೊಂಡಿದೆ. ಒಂದು ಕಡೆ ಹಣ್ಣುಗಳು ಖರೀದಿ ಆಗುತ್ತಿಲ್ಲ. ಮನೆ ಮಂದಿಯೆಲ್ಲ ತಿಂದು, ಬಂಧು ಬಳಗಕ್ಕೆಲ್ಲ ಕೊಟ್ಟು ಉಳಿದದ್ದು ತಿಪ್ಪೆ ಪಾಲಾಗುತ್ತಿದೆ. ಮತ್ತೊಂದು ಕಡೆ ಈಗಾಗಲೇ ಮರಗಳನ್ನು ಚೇಣಿಗೆ ಪಡೆದವರು ಈ ಬಾರಿ ಎಷ್ಟು ನಷ್ಟ ಮಾಡಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ.

ಪೂನಾ, ಕೇರಳ, ಆಂಧ್ರಪ್ರದೇಶ, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ನಿತ್ಯ ಹತ್ತಾರು ಲೋಡ್ ಹಲಸಿನ ಕಾಯಿ, ಹಣ್ಣು ರವಾನೆಯಾಗುತ್ತದೆ. ಹೊರರಾಜ್ಯಗಳಿಗೆ ಚೇಳೂರು, ಮಧುಗಿರಿ ಮಾರುಕಟ್ಟೆಯಿಂದ ನಿತ್ಯವೂ ಕಾಯಿ ಕೊಂಡೊಯ್ಯಲಾಗುತ್ತದೆ. ಈಗ ಪೂನಾ, ಕೇರಳದಲ್ಲಿ ಹಲಸಿನ ಕಂಪನಿಗಳು ಬಂದ್ ಆಗಿವೆ. ಜಿಲ್ಲೆಯಲ್ಲಿಯೇ ಮೌಲ್ಯವರ್ಧನೆಗೆ ಅವಕಾಶ ಇಲ್ಲದೆ ಹಣ್ಣು ಮಾಗಿ ಕೊಳೆಯುತ್ತಿವೆ.

‘ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಎಲ್ಲರೂ ಕಲ್ಲಂಗಡಿ, ಟೊಮೆಟೊ ಇತ್ಯಾದಿ ಬೆಳೆಗಾರರ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ನಮ್ಮ ಬಗ್ಗೆ ಮಾತ್ರ ಒಬ್ಬರಿಂದಲೂ ಧ್ವನಿ ಕೇಳುತ್ತಿಲ್ಲ’ ಎನ್ನುತ್ತಾರೆ ಗುಬ್ಬಿ ಇಕೊ ಫ್ರೆಸ್ಟ್ ಹಲಸು ಸಂಸ್ಥೆಯ ಹೇಮಂತ್. ಇವರು ಹಲಸು ಬೆಳೆಯುವುದರ ಜತೆಗೆ ಹೊರರಾಜ್ಯಗಳಿಗೂ ಕಳುಹಿಸುತ್ತಾರೆ.

‘ವಾರಕ್ಕೆ ನಾಲ್ಕು ಲಾರಿ ಲೋಡ್ ಕಾಯಿಯನ್ನು ಕೇರಳಕ್ಕೆ ಕಳುಹಿಸುತ್ತಿದ್ದೆ. ಈಗ ಅಲ್ಲಿ ಕಂಪನಿಗಳನ್ನು ಮುಚ್ಚಿದ್ದಾರೆ. ಮಂಗಳೂರು, ಉಡುಪಿ, ಕುಂದಾಪುರಕ್ಕೆ ಒಂದು ವಾರಕ್ಕೆ 50ರಿಂದ 60 ಟನ್ ಕಳುಹಿಸುತ್ತಿದ್ದೆ. ಕನಿಷ್ಠ 25 ಟನ್ ಕಾಯಿ ಮರದಲ್ಲಿಯೇ ಹಣ್ಣಾಗಿ ಉದುರಿದೆ’ ಎಂದು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT