ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡ್ಲಾಪುರ ‘ಶಂಕರ’ನ ಘಮ

ಅಂತರರಾಷ್ಟ್ರೀಯ ಮಾರುಕಟ್ಟೆಗೆ ತುಮಕೂರು ಜಿಲ್ಲೆಯ ಮತ್ತೊಂದು ಹಲಸು
Last Updated 13 ಜುಲೈ 2019, 20:00 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ತಿಪಟೂರು ತಾಲ್ಲೂಕಿನ ಚೌಡ್ಲಾಪುರದ ಶಂಕರಯ್ಯ ಅವರ ಹಲಸಿನ ಮರದ ಹಣ್ಣು ದೇಶದ ಅತ್ಯುತ್ತಮ ಹಲಸಿನ ತಳಿಗಳಲ್ಲಿ ಒಂದು ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಈಗಾಗಲೇ ಗುಬ್ಬಿ ತಾಲ್ಲೂಕಿನ ಚೇಳೂರು ‘ಸಿದ್ಧು ಹಲಸು’ ಗುಣಮಟ್ಟ ಮತ್ತು ಕೆಂಪು ತೊಳೆಯ ಕಾರಣಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ. ಈ ತಳಿಯ ಸಸಿಗಳಿಗೆ ರಾಜ್ಯದ ವಿವಿಧ ಭಾಗಗಳು, ಕೇರಳ, ತಮಿಳುನಾಡು ಹಾಗೂ ದುಬೈನಲ್ಲಿರುವ ಅನಿವಾಸಿ ಭಾರತೀಯರಿಂದಲೂ ಬೇಡಿಕೆ ಇದೆ.

ಅಂತರರಾಷ್ಟ್ರೀಯ ಹಲಸು ಮಾರುಕಟ್ಟೆಯಲ್ಲಿ ಕನಿಷ್ಠ 4 ತಳಿ ಜಿಲ್ಲೆಯನ್ನು ಪ್ರತಿನಿಧಿಸಬೇಕು ಎನ್ನುವ ಗುರಿಯಡಿ ತುಮಕೂರು ಹೊರವಲಯದ ಹಿರೇಹಳ್ಳಿಯ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (ಸಿಎಚ್‌ಇಎಸ್‌) ಯೋಜನೆ ಹಮ್ಮಿಕೊಂಡಿದೆ. ‘ಸಿದ್ಧು ಹಲಸು’ ಈ ಯೋಜನೆಯ ಮೊದಲ ತಳಿಯಾದರೆ, ‘ಶಂಕರ’ ಎರಡನೇ ಫಲ. ಬಣ್ಣ, ವೈವಿಧ್ಯ, ಗುಣಮಟ್ಟ, ಗಾತ್ರ, ರುಚಿ, ಜೀವಸತ್ವ ಹೀಗೆ ನಾನಾ ವರ್ಗೀಕರಣ ಆಧರಿಸಿ ತಳಿಗಳನ್ನು ಗುರುತಿಸಲಾಗುತ್ತದೆ.

2014ರಿಂದ 18ರ ವರೆಗೆ ‘ಶಂಕರ’ ತಳಿಯ ಕುರಿತು ಸಿಎಚ್‌ಇಎಸ್‌ ಸಂಶೋಧನೆ ನಡೆಸಿದೆ. ಇದರಲ್ಲಿ ಸಿದ್ಧು ಹಲಸಿಗಿಂತಲೂ ಲೈಕೋಪಿನ್ ಹೆಚ್ಚಿದೆ. ಈ ಕಾರಣಕ್ಕೆ ತೊಳೆ ತಾಮ್ರ ಕೆಂಪು ಬಣ್ಣ ಹೊಂದಿದೆ. ಮೂಲ ಮರಕ್ಕೆ 25 ವರ್ಷ ಪ್ರಾಯವಾಗಿದೆ. ಪ್ರತಿವರ್ಷ ಏಪ್ರಿಲ್‌– ಜೂನ್ ನಡುವೆ 460 ಕೆ.ಜಿ ಫಲಸು ಕೊಡುತ್ತದೆ. ಒಂದು ಹಣ್ಣು ಸರಾಸರಿ 2.7 ಕೆ.ಜಿ ತೂಗುತ್ತದೆ. ಒಂದು ತೊಳೆ 17.95 ಗ್ರಾಂ ಇರುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.

ಮರದ ಮಾಲೀಕ ಶಂಕರಯ್ಯ ಅವರ ಹೆಸರಿನಲ್ಲಿ ‘ಶಂಕರ’ ತಳಿ ಎಂದು ಹೆಸರಿಡಲಾಗಿದೆ. ಮಾಲೀಕರಿಗೆ ‘ತಳಿ ಸಂರಕ್ಷಕ’ ಪ್ರಶಸ್ತಿಯನ್ನು ನೀಡಲಾಗಿದೆ. ತಳಿ ಅಭಿವೃದ್ಧಿಗೆ ಶಂಕರಯ್ಯ ಅವರ ಜತೆ ಸಿಎಚ್‌ಇಎಸ್‌ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಒಂದು ಸಸಿಯನ್ನು ₹ 150ಕ್ಕೆ ಗ್ರಾಹಕರಿಗೆ ಮಾರಾಟ ಮಾಡಲಿದ್ದು, ಶೇ 75ರಷ್ಟು ಹಣ ರೈತರಿಗೆ ದೊರೆತರೆ ಶೇ 25 ಸಿಎಚ್‌ಇಎಸ್‌ ಪಾಲಾಗಲಿದೆ.ಮೂರು ತಿಂಗಳ ನಂತರ ‘ಶಂಕರ’ ತಳಿಯ ಸಸಿಗಳು ಮಾರಾಟಕ್ಕೆ ದೊರೆಯುತ್ತವೆ.

‘ದೇಶದಲ್ಲಿಯೇ ಕೆಂಪು ಹಲಸು (ಚಂದ್ರ ಹಲಸು) ಅಪರೂಪ. ಆದರೆ, ತುಮಕೂರು ಜಿಲ್ಲೆಯಲ್ಲಿ ಕೆಂಪು ಹಲಸು ಉತ್ಕೃಷ್ಟವಾಗಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಿಎಚ್‌ಇಎಸ್‌ ಅಧಿಕಾರಿಗಳ ಸಭೆಯಲ್ಲಿ ‘ಸಿದ್ಧು’ ಮತ್ತು ‘ಶಂಕರ’ ಹಲಸನ್ನು ಪ್ರದರ್ಶಿಸಿದ್ದೆವು. ಗುಣಮಟ್ಟ ಮತ್ತು ರುಚಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು’ ಎಂದು ಮಾಹಿತಿ ನೀಡುವರು ಸಿಎಚ್‌ಇಎಸ್‌ ಹಿರಿಯ ವಿಜ್ಞಾನಿ ಡಾ.ಕರುಣಾಕರನ್.

ಮನೆಮಂದಿಗೆ ಖುಷಿ

ಶಂಕರಯ್ಯ
ಶಂಕರಯ್ಯ

ಹಲಸಿನ ಮರ ಅದರಷ್ಟಕ್ಕೆ ಅದೇ ಬೆಳೆದಿದೆ. ರುಚಿಯಾಗಿದೆ ಎಂದು ಸುತ್ತಮುತ್ತಲಿನ ಹಳ್ಳಿಗಳ ಜನರೂ ಬಂದು ಹಣ್ಣು ಪಡೆದು ಹೋಗುತ್ತಿದ್ದರು. ಹಣ್ಣನ್ನು ಮಾರಾಟ ಮಾಡಿಲ್ಲ. ಸಂಬಂಧಿಕರು, ಪರಿಚಯಸ್ಥರಿಗೆ ನೀಡುತ್ತಿದ್ದೆವು. ಸಿಎಚ್‌ಇಎಸ್‌ನವರು ಒಪ್ಪಂದ ಮಾಡಿಕೊಂಡಿರುವುದರಿಂದ ನಮಗೂ ಆರ್ಥಿಕವಾಗಿ ಅನುಕೂಲವಾಗುತ್ತದೆ. ಮನೆ ಮಂದಿಗೆಲ್ಲ ಖುಷಿ ಆಗಿದೆ ಎನ್ನುವರು ಶಂಕರಯ್ಯ.

*ಹಲಸಿನ ಮರ ಅದರಷ್ಟಕ್ಕೆ ಅದೇ ಬೆಳೆದಿದೆ. ಸಿಎಚ್‌ಇಎಸ್‌ನವರು ಒಪ್ಪಂದ ಮಾಡಿಕೊಂಡಿರುವುದರಿಂದ ನಮಗೂ ಆರ್ಥಿಕವಾಗಿ ಅನುಕೂಲವಾಗುತ್ತದೆ

ಶಂಕರಯ್ಯ,ಮರದ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT