ಶುಕ್ರವಾರ, ಏಪ್ರಿಲ್ 3, 2020
19 °C
‘ಜನತಾ ಕರ್ಫ್ಯೂ’ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ; ತಾಲ್ಲೂಕು ಕೇಂದ್ರಗಳು ಸ್ತಬ್ಧ

ಮನೆಯಿಂದ ಹೊರಗೆ ಬಾರದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ‘ಜನತಾ ಕರ್ಫ್ಯೂ’ ಕರೆಗೆ ತುಮಕೂರು ನಗರ ಸೇರಿದಂತೆ ಜಿಲ್ಲೆಉ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ಬೆಂಬಲ ವ್ಯಕ್ತವಾಯಿತು.

ಸದಾ ವಾಹನ, ಜನಜಂಗುಳಿಯಿಂದ ಕೂಡಿರುತ್ತಿದ್ದ ತುಮಕೂರಿನ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ, ಎಸ್‌.ಎಸ್‌.ಪುರಂ ರಸ್ತೆ, ಕುಣಿಗಲ್ ರಸ್ತೆ, ಚಿಕ್ಕಪೇಟೆ, ಮಂಡಿಪೇಟೆ, ಉಪ್ಪಾರಹಳ್ಳಿ ಹೀಗೆ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ನಿರ್ಜನವಾಗಿದ್ದವು.

ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೆ ನಗರದ ಎಲ್ಲ ಭಾಗಗಳಲ್ಲೂ ಅಂಗಡಿಗಳು ಮುಚ್ಚಿದ್ದವು. ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳ ಸಂಚಾರ ಬಂದ್ ಆಗಿತ್ತು.

ಪ್ರಯಾಣಿಕರಿಗೆ ಕರ್ಫ್ಯೂ ಬಿಸಿ: ರೈಲು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್ ಮಾಲೀಕರು ಸಹ ಜನತಾ ಕರ್ಫ್ಯೂಗೆ ಬೆಂಬಲಿಸಿದ್ದರು. ಭಾನುವಾರದ ರಜೆ, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಭಾಗಗಳಿಂದ ತುಮಕೂರಿಗೆ ಬಂದಿದ್ದ ಪ್ರಯಾಣಿಕರಿಗೆ ಜನತಾ ಕರ್ಫ್ಯೂ ಬಿಸಿ ತಟ್ಟಿತು. ರೈಲು, ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ತಮ್ಮೂರಿಗೆ ತೆರಳಲು ಪರದಾಡಿದರು.

ಬಸ್‌, ರೈಲುಗಳಿಗೆ ಕಾದು ಕಾದು ಸುಸ್ತಾದ ಕೆಲವರು ಟೆಂಪೊ, ಗೂಡ್ಸ್ ಆಟೊದಲ್ಲೇ ಶಿರಾ, ಪಾವಗಡ, ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ಕುಣಿಗಲ್ ಕಡೆಗೆ ಪ್ರಯಾಣ ಬೆಳೆಸಿದರು. ಹಲವು ಪ್ರಯಾಣಿಕರು ಹತ್ತಿರದ ಊರುಗಳಿಗೆ ನಡೆದುಕೊಂಡೆ ಸಾಗಿದರು. ಮತ್ತೆ ಕೆಲವು ‌ಬಸ್, ರೈಲು ನಿಲ್ದಾಣದಲ್ಲೇ ಕಾದರು.

ಹಾಲು ಸಿಗದೆ ಪರದಾಟ:

ಹಾಲು, ಮೊಸರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ತುಮುಲ್ ತಿಳಿಸಿತ್ತು. ಆದರೆ, ಮುಖ್ಯ ರಸ್ತೆಗಳಲ್ಲಿರುವ ನಂದಿನಿ ಬೂತ್‌ಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದರಿಂದ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಯಿತು. ಮಕ್ಕಳು, ಮಹಿಳೆಯರು ಹಾಲು ಸಿಗದೆ ಪರಿದಾಡಿದರು. ಅಂಗಡಿ ಮುಚ್ಚುವುದನ್ನು ಅರಿತಿದ್ದ ಕೆಲವರು ಶನಿವಾರವೇ ಹಾಲು ಮೊಸರು ಖರೀದಿಸಿ ಶೇಖರಿಸಿಟ್ಟಿದ್ದರು.

ಜಿಲ್ಲಾ ಆಸ್ಪತ್ರೆ, ಪ್ರಮುಖ ರಸ್ತೆಗಳ ಔಷಧಿ ಅಂಗಡಿಗಳು, ಅಲ್ಲಲ್ಲಿ ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ತೆರೆದಿದ್ದವು. ಆದರೆ, ಗ್ರಾಹಕರು ಇಲ್ಲದ ಕಾರಣ ಇವೆಲ್ಲವೂ ಭಣಗುಡುತ್ತಿದ್ದವು. ದೇವಸ್ಥಾನಗಳಲ್ಲಿ ಭಕ್ತರಿರಲಿಲ್ಲ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತುಮಕೂರು ಸಂಪೂರ್ಣ ಸ್ತಬ್ಧವಾಗಿದೆ ಎಂದು ಹಲವರು  ನುಡಿಯುತ್ತಿದ್ದರು.

--

ಮನೆಯಿಂದ ಕದಲದ ಜನ

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಭಾನುವಾರ ಬೆಳಿಗ್ಗೆ 7 ರಿಂದ ಸಂಜೆಯವರೆಗೂ ಮನೆಗಳನ್ನು ಬಿಟ್ಟು ಕದಲಲಿಲ್ಲ.  ಮಕ್ಕಳು ಟಿ.ವಿ, ಮೊಬೈಲ್‌ಗಳನ್ನು ನೋಡುತ್ತ ಸಮಯ ಕಳೆದರೆ, ಮಹಿಳೆಯರು ಬಗೆ ಬಗೆಯ ತಿನಿಸುಗಳನ್ನು ಮಾಡಿಕೊಂಡು ಸವಿದರು. ಭಾನುವಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಶನಿವಾರವೇ ಖರೀದಿಸಿದ್ದರಿಂದ ಹಲವರಿಗೆ ಯಾವುದೇ ತೊಂದರೆ ಆಗಲಿಲ್ಲ.

--

ಬೆಳಿಗ್ಗೆ 7ರೊಳಗೆ ಪ್ರಾರ್ಥನೆ

ಚರ್ಚ್‌ಗಳಲ್ಲಿ ಬೆಳಿಗ್ಗೆ 8ರ ನಂತರ ನಡೆಯಬೇಕಾಗಿದ್ದ ಪ್ರಾರ್ಥನಾ ಸಭೆಗಳನ್ನು ಬೆಳಿಗ್ಗೆ 7ರೊಳಗೆ ಮುಗಿಸಿದರು. ಕೆಲವೆಡೆ ಚರ್ಚ್‌ಗಳನ್ನು ಮುಚ್ಚಿದ್ದರೆ, ಮತ್ತೆ ಕೆಲವೆಡೆ ಭಾನುವಾರ ನಡೆಯಬೇಕಾಗಿದ್ದ ಪ್ರಾರ್ಥನಾ ಕೂಟಗಳನ್ನು ಶನಿವಾರ ಸಂಜೆ ಮತ್ತು ರಾತ್ರಿಯೇ ಮುಗಿಸಿದರು. ಮುಸಲ್ಮಾನರು ಬೆಳಿಗ್ಗೆ 7ರೊಳಗೆ ಮಸೀದಿಗಳಲ್ಲಿ ನಮಾಜ್‌ ಮುಗಿಸಿ ಮನೆಗಳಿಗೆ ಮರಳಿದರು. ಕೆಲವರು ಮನೆಗಳಲ್ಲೇ ನಮಾಜ್ ಮಾಡಿದರು.

--

ಚಪ್ಪಾಳೆ ತಟ್ಟಿ ಗೌರವ

ಬೆಳಿಗ್ಗೆಯಿಂದ ಮನೆಯಲ್ಲಿದ್ದ ಸಾರ್ವಜನಿಕರು ಸಂಜೆ 5 ಗಂಟೆಯ ನಂತರ ಮನೆಗಳಿಂದ ಹೊರಗೆ ಬಂದು ತಮ್ಮ ಕುಟುಂಬಸ್ಥರು, ನೆರೆಹೊರೆಯವರ ಜತೆಗೂಡಿ, ದೇಶದಿಂದ ಕೊರೊನಾ ವೈರಸ್‌ ಹೋಗಲಾಡಿಸಲು ಶ್ರಮಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರಿಗೆ ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು. ಕೆಲವೆಡೆ ಗಂಟೆ, ಜಾಗಟೆಗಳು ಸದ್ದು, ಶಂಖ ನಿನಾದ ಮೊಳಗಿತು. ಕೆಲವೆಡೆ ತಟ್ಟೆಗಳ ಶಬ್ಧವೂ ಕೇಳಿ ಬಂದಿತು.

--

ಕರ್ಫ್ಯೂ ದಿನವೇ ಮಂತ್ರ ಮಾಂಗಲ್ಯ

ಜನತಾ ಕರ್ಫ್ಯೂ ದಿನವೇ ಕವಿ ದಿವಂಗತ ಕೆ.ಬಿ.ಸಿದ್ದಯ್ಯ ನವರ ಮಗಳು ಚೈತ್ರಾ ಹಾಗೂ ಉಪನ್ಯಾಸಕ ಕೊಟ್ಟ ಶಂಕರ್ ಮಂತ್ರ ಮಾಂಗಲ್ಯದ ಮೂಲಕ ಸತಿಪತಿಗಳಾದರು. ವಿವಾಹದ ದಿನಾಂಕ ಈ ಮೊದಲೇ ನಿಶ್ಚಯವಾಗಿದ್ದು ಹಾಗೂ ಎಲ್ಲರನ್ನೂ ಆಹ್ವಾನಿಸಿದ್ದರಿಂದ ಭಾನುವಾರವೇ ವಿವಾಹ ಕಾರ್ಯಕ್ರಮ ನಡೆಯಿತು. ಲೇಖಕಿ ಮಲ್ಲಿಕಾ ಬಸವರಾಜು ಕುವೆಂಪು ಅವರ ಮಂತ್ರ ಮಾಂಗಲ್ಯ ಮಂತ್ರ ಬೋಧಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು