ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏನು ಮಾಡಲ್ಲ, ಎಲ್ಲ ಮಾಡ್ತಾರೆ ಅಂದ್ಕೊಬೇಡಿ’

ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಉದ್ಯಮಿಗಳೊಂದಿಗೆ ಸಚಿವ ಮಾಧುಸ್ವಾಮಿ ಸಂವಾದ
Last Updated 27 ಸೆಪ್ಟೆಂಬರ್ 2019, 12:30 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಶುಕ್ರವಾರ ಉದ್ಯಮಿಗಳೊಂದಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸಂವಾದ ನಡೆಸಿದರು. ಜಿಲ್ಲೆಯ ಕೈಗಾರಿಕಾ ವಲಯದಲ್ಲಿನ ಸಮಸ್ಯೆಗಳು ಮತ್ತು ಯೋಜನೆಗಳ ಕುರಿತು ಸಚಿವರ ಜತೆ ಉದ್ಯಮಿಗಳು ಸಂವಾದ ನಡೆಸಿದರು. ಸಮಸ್ಯೆಗಳ ಪಟ್ಟಿ ನೀಡಿದರು.

ಸಂವಾದ ಪೂರ್ಣಗೊಳಿಸಿ ತಮ್ಮ ಮಾತಿನ ಸರದಿ ಬಂದಾಗ ಸಚಿವರು, ‘ನಿಮ್ಮ ಸಮಸ್ಯೆಗಳನ್ನೆಲ್ಲ ಕೇಳಿಸಿಕೊಂಡಿದ್ದೇನೆ. ಸಾಧ್ಯವಾದಷ್ಟು ಅನುಕೂಲ ಮಾಡಿಕೊಡಲು ಪ್ರಯತ್ನಿಸುವೆ. ಆದರೆ ಎಲ್ಲ ಮಾಡುತ್ತಾರೆ, ಇಲ್ಲ ಏನು ಮಾಡಲ್ಲ ಅಂದ್ಕೊಬಾರದು’ ಎಂದು ಉದ್ಯಮಿಗಳಿಗೆ ಹೇಳಿದರು.

‘ನಮಗೆ ಎಪಿಎಂಸಿ ಆವರಣದಲ್ಲಿ ಎಪಿಎಂಸಿಯವರು ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾರೆ. ಕುಂದುಕೊರತೆಗಳನ್ನು ಅವರೇ ಪರಿಹರಿಸುತ್ತಾರೆ. ಆದರೆ ಮಹಾನಗರ ಪಾಲಿಕೆಯಿಂದ ಕಂದಾಯ ಮಾತ್ರ ಪಡೆಯುತ್ತಿದ್ದಾರೆ. ಯಾವುದೇ ಸೌಲಭ್ಯವನ್ನು ಕಲ್ಪಿಸುತ್ತಿಲ್ಲ’ ಎಂದು ಸಂಸ್ಥೆ ಪದಾಧಿಕಾರಿಗಳು ತಿಳಿಸಿದರು.

ಜಿಲ್ಲೆಯ ಹುಣಸೆ ಹಣ್ಣು ದೇಶದಲ್ಲಿಯೇ ಪ್ರಸಿದ್ಧಿ. ಅದರ ಸಂರಕ್ಷಣೆಗೆ ಶೀತಲೀಕರಣ ಘಟಕ ಆರಂಭಿಸಬೇಕು ಎಂದು ಮನವಿ ಮಾಡಿದರು.

ಸಂಸ್ಥೆ ಮಾಜಿ ಅಧ್ಯಕ್ಷ ಸುಜ್ಞಾನ ಹಿರೇಮಠ, ‘ಸತ್ಯಮಂಗಲ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪಾಲಿಕೆಯಿಂದ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಕಮರ್ಷಿಯಲ್ ಮತ್ತು ಕೈಗಾರಿಕೆ ಎರಡೂ ತೆರಿಗೆ ಪಾವತಿಸುತ್ತಿದ್ದೇವೆ. ರಾಜ್ಯದಲ್ಲಿಯೇ ತುಮಕೂರು ನಗರದಲ್ಲಿ ಉದ್ಯಮಿಗಳು ಹೆಚ್ಚು ತೆರಿಗೆ ಪಾವತಿಸಬೇಕಾಗಿದೆ. ₹ 60 ಲಕ್ಷದಿಂದ ₹ 1 ಕೋಟಿಯವರೆಗೂ ತೆರಿಗೆ ವಿಧಿಸಲಾಗುತ್ತಿದೆ. ಇದು ಸಣ್ಣ ಕೈಗಾರಿಕೆಗಳಿಗೂ ಅನ್ವಯವಾಗುತ್ತಿದೆ. ಇದರಿಂದ ಕೈಗಾರಿಕೆಗಳ ಅಭಿವೃದ್ಧಿ ಕಷ್ಟ’ ಎಂದು ಸಮಸ್ಯೆ ಹೇಳಿಕೊಂಡರು.

ಎರಡರಿಂದ ನಾಲ್ಕು ತಾಸು ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಕೈಗಾರಿಕೆಗಳಿಗೆ ತೊಂದರೆ ಆಗುತ್ತಿದೆ. ಅಲ್ಲದೆ ಯುನಿಟ್ ವಿದ್ಯುತ್‌ಅನ್ನು 20ರಿಂದ 50 ಪೈಸೆಗೆ ಹೆಚ್ಚಿಸಲಾಗಿದೆ. ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಮೈದಾಳ ಕೆರೆ ಹಾಗೂ ಸತ್ಯಮಂಗಳ ಕೈಗಾರಿಕಾ ಪ್ರದೇಶಕ್ಕೆ ಹೆಬ್ಬಾಕ ಕೆರೆಯ ನೀರನ್ನು ಹರಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಕೋರಿದರು.

ಜಿಲ್ಲೆಯಲ್ಲಿ ಕಾರ್ಮಿಕ ಭವಿಷ್ಯ ನಿಧಿ ಆಸ್ಪತ್ರೆ ಮಂಜೂರು, ನಗರದಲ್ಲಿನ ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮ ಸೇರಿದಂತೆ ಹಲವು ವಿಷಯಗಳನ್ನು ಪದಾಧಿಕಾರಿಗಳು ಸಚಿವರಲ್ಲಿ ಪ್ರಸ್ತಾಪಿಸಿದರು. ತೆಂಗು ಅಭಿವೃದ್ಧಿಗೆ ತೆಂಗು ಪಾರ್ಕ್ ಹಾಗೂ ಹಲಸು ಮೌಲ್ಯವರ್ಧನೆ ಕ್ರಮಕೈಗೊಳ್ಳುವಂತೆ ಕೋರಿದರು.

ಶೀತಲೀಕರಣ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಎಪಿಎಂಸಿಯಿಂದ ಪ್ರಸ್ತಾವ ಸಲ್ಲಿಸುವಂತೆ ಎಪಿಎಂಸಿ ಕಾರ್ಯದರ್ಶಿ ಪುಷ್ಪಾ ಅವರಿಗೆ ಸಚಿವರು ಸೂಚಿಸಿದರು. ನಗರದ ಹೊರವರ್ತುಲ ರಸ್ತೆಗಳು ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣವಾಗಲು ಐದು ವರ್ಷ ಬೇಕು ಎಂದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಾಜಿ ಅಧ್ಯಕ್ಷ ಪ್ರಭು, ಕಾರ್ಯದರ್ಶಿ ಲೋಕೇಶ್ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT