ಗುರುವಾರ , ಡಿಸೆಂಬರ್ 3, 2020
23 °C
ರೈತ, ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ವಿರೋಧ

ತುಮಕೂರು: ದೇವೇಗೌಡ ನೇತೃತ್ವದಲ್ಲಿ ಧರಣಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ.

‘ರಿಯಲ್‍ ಎಸ್ಟೇಟ್ ಮಾಫಿಯಾ, ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಕಾಯ್ದೆಗಳಿಗೆ ತಿದ್ದುಪಡಿ ತಂದಿವೆ. ಇದು ರೈತರು, ಕೃಷಿ ಕಾರ್ಮಿಕರು ಹಾಗೂ ಇತರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಿದೆ. ಈ ತಿದ್ದುಪಡಿಗಳನ್ನು ಹಿಂಪಡೆಯುವವರೆಗೂ ಜೆಡಿಎಸ್ ನಿರಂತರ ಹೋರಾಟ ರೂಪಿಸಲಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

ಮಧ್ಯಾಹ್ನ 12.30ರಿಂದ 1.30ರ ವರೆಗೆ ಧರಣಿಗೆ ಜಿಲ್ಲಾಧಿಕಾರಿ ಅವಕಾಶ ನೀಡಿದ್ದಾರೆ. ಆ ಸಮಯದಲ್ಲಿ 200 ಜನ ಕಾರ್ಯಕರ್ತರು ಪ್ರಮುಖ ಮುಖಂಡರ ಜೊತೆ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಬಿಜಿಎಸ್ ವೃತ್ತದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ, ಪಾಲಿಕೆ ಆವರಣದ ಉದ್ಯಾನದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಪ್ರತಿಮೆ ಸ್ಥಾಪಿಸಬೇಕು ಎಂದು ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಈಗ ಮತ್ತೊಮ್ಮೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ, ಮಾಜಿ ಶಾಸಕ ತಿಮ್ಮರಾಯಪ್ಪ, ಎಸ್‌ಟಿ ಘಟಕದ ಅಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಯುವಘಟಕದ ಜಿಲ್ಲಾ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ನಗರ ಘಟಕದ ಅಧ್ಯಕ್ಷ ಪ್ರಸನ್ನ, ಮಹಿಳಾ ಘಟಕದ ಅಧ್ಯಕ್ಷೆ ತಾಹೀರಾಬೇಗಂ, ಮುಖಂಡರಾದ ಗಂಗಣ್ಣ, ದೇವರಾಜು ಗೋಷ್ಠಿಯಲ್ಲಿ ಇದ್ದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಕಳಪೆ

ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಬಹುತೇಕ ಕಳಪೆಯಾಗಿವೆ. ಇದನ್ನು ಪ್ರಶ್ನಿಸಬೇಕಾದ ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರಿಗೆ ಸ್ಮಾರ್ಟ್‍ಸಿಟಿ ಸಲಹಾ ಸಮಿತಿಯಲ್ಲಿ ಅವಕಾಶವೇ ಇಲ್ಲ. ಜನರ ತೆರಿಗೆ ಹಣದಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ದಪ್ಪಗಾಗುತ್ತಿದ್ದಾರೆ. ಸದ್ಯದಲ್ಲಿಯೇ ಸಾರ್ವಜನಿಕರ ದೂರಗಳನ್ನು ಆಧರಿಸಿ ಸ್ಥಳ ಪರಿಶೀಲಿಸಲಾಗುವುದು ಎಂದು ಗೌರಿಶಂಕರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು