ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕೆ ದುಡಿದವರಿಗೆ ಹೆಚ್ಚಿನ ಅಧಿಕಾರ

ತುಮಕೂರು ನಗರ ಘಟಕ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಅಭಿಮತ
Last Updated 11 ಜನವರಿ 2020, 14:34 IST
ಅಕ್ಷರ ಗಾತ್ರ

ತುಮಕೂರು: ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಬಲಿಷ್ಠವಾಗಿದ್ದು, ಪಕ್ಷಕ್ಕೆ ದುಡಿದವರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ತಿಳಿಸಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ತುಮಕೂರು ನಗರ ಘಟಕದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಿದೆಯೇ ಹೊರತು, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಅರಿತು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು’ ಎಂದು ಹೇಳಿದರು.

ಪಕ್ಷಕ್ಕಾಗಿ ದುಡಿದವರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಈಗಾಗಲೇ 21 ಘಟಕಗಳಲ್ಲಿ 16 ಘಟಕಗಳನ್ನು ಪುನರ್‌ರಚನೆ ಮಾಡಲಾಗಿದೆ. ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಿ ಅಧಿಕಾರ ನೀಡಲಾಗಿದೆ. ನಗರದ 35 ವಾರ್ಡುಗಳಲ್ಲಿಯೂ ಪಕ್ಷವನ್ನು ಸಮರ್ಥವಾಗಿ ಕಟ್ಟುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರ ಸಹಕಾರ ಪಡೆದುಕೊಳ್ಳಬೇಕು. ಆ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ಪಕ್ಷ ಅಧಿಕಾರಕ್ಕೆ ಬಂದಾಗ ಮೂರು ಬಾರಿ ಅಲ್ಪಸಂಖ್ಯಾತರನ್ನೇ ಟೂಡಾ ಅಧ್ಯಕ್ಷರನ್ನಾಗಿ ನೇಮಿಸಿದೆ. ಪಕ್ಷದಲ್ಲಿ ವರಿಷ್ಠರು, ಮುಖಂಡರ ತೀರ್ಮಾನಕ್ಕೆ ಕಾರ್ಯಕರ್ತರು ಬದ್ಧರಾಗಬೇಕು. ಪರಸ್ಪರ ಕಾಲೆಳೆಯುವುದನ್ನು ಬಿಟ್ಟು ಪಕ್ಷವನ್ನು ಸಂಘಟಿಸಬೇಕು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹೊಂದಾಣಿಕೆಯ ಕೊರತೆಯೇ ಕಾರಣ. ಹಿನ್ನಡೆಗೆ ಕಾರಣ ಏನು ಎನ್ನುವುದರ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಡಾ.ಶಿವಕುಮಾರ್ ಮಾತನಾಡಿ, ‘ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ರೀತಿಯಲ್ಲಿ ಎಲ್ಲ ಘಟಕಗಳು ಪಕ್ಷವನ್ನು ಸಂಘಟಿಸಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಜನರನ್ನು ವಿಶ್ವಾಸ ತೆಗೆದುಕೊಂಡು ಪಕ್ಷದ ಪರ ಒಲವು ಮೂಡುವಂತೆ ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ, ‘ಇದುವರೆಗೂ ಯಾವುದೇ ಗುಂಪುಗಾರಿಕೆ ಮಾಡದೇ ಎಲ್ಲರೊಟ್ಟಿಗೆ ಪಕ್ಷವನ್ನು ಮುನ್ನಡೆಸಿದ್ದೇನೆ. ಶಕ್ತಿ ಮೀರಿ ಪಕ್ಷ ಸಂಘಟನೆ ಮಾಡುತ್ತಿದ್ದು, ಸಹಕಾರ ನೀಡುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಪಾಲಿಕೆ ಸದಸ್ಯರಾದ ಧರಣೇಶ್, ಮಂಜುನಾಥ್, ನರಸಿಂಹರಾಜು, ಪ್ರೆಸ್ ರಾಜಣ್ಣ, ಯುವ ಘಟಕದ ಅಧ್ಯಕ್ಷ ಪ್ರಸನ್ನ, ಮಹಾಲಿಂಗಯ್ಯ, ಗಂಗಣ್ಣ, ದೇವರಾಜು, ಕೆಂಪರಾಜು, ರಂಗಣ್ಣ, ತಾಹೀರಾ ಬೇಗಂ, ಜಯಶ್ರೀ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT