ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಪ್ರಮಾಣ ವಚನಕ್ಕೆ ವಿಧಾನಸೌಧ ಸಜ್ಜು

Last Updated 21 ಮೇ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲು ವಿಧಾನಸೌಧದ ಮುಂಭಾಗ ಭರದ ಸಿದ್ಧತೆ ನಡೆದಿದೆ.

ಮೆಟ್ಟಿಲುಗಳ ಮೇಲೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಕುಮಾರಸ್ವಾಮಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸುಮಾರು 1 ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ. 300 ಗಣ್ಯರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಜೆಡಿಎಸ್‌ ವಕ್ತಾರ ಟಿ.ಎ.ಶರವಣ ತಿಳಿಸಿದ್ದಾರೆ.

ಅಂದು ಸಂಜೆ 4.30ಕ್ಕೆ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದ್ದು, ಜ್ಯೋತಿಷಿಗಳ ಸಲಹೆಯಂತೆ ರೇಷ್ಮೆ ಅಂಗಿ ಮತ್ತು ಪಂಚೆ ತೊಟ್ಟು ಬರಿಗಾಲಿನಲ್ಲಿ ಬರಲಿದ್ದಾರೆ. ಒಬ್ಬರೇ ಪ್ರಮಾಣ ಸ್ವೀಕರಿಸಲಿದ್ದು, ಬಹುಮತ ಸಾಬೀತಾದ ಬಳಿಕ ಸಂಪುಟಕ್ಕೆ ಉಳಿದವರನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಕುಮಾರಸ್ವಾಮಿಯವರೇ ಆಹ್ವಾನ ನೀಡಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ, ಡಿಎಂಕೆ ಮುಖಂಡ ಸ್ಟಾಲಿನ್‌, ಟಿ.ಆರ್‌.ಬಾಲು, ಕನಿಮೋಳಿ ಅವರಿಗೆ ದೇವೇಗೌಡ ಆಹ್ವಾನ ನೀಡಿದ್ದಾರೆ ಎಂದು ಶರವಣ ತಿಳಿಸಿದರು.

ವಿಧಾನಸೌಧದ ಸುತ್ತಮುತ್ತ ಬಿಗಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ.

ಮಳೆಯ ಭೀತಿ: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸಂಜೆ ವೇಳೆ ಭಾರಿ ಮಳೆ ಸುರಿಯುತ್ತಿರುವುದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. ಪ್ರಮಾಣ ವಚನದ ಸಮಯಲ್ಲಿ ಮಳೆ ಬಂದರೆ, ದೂರದ ಊರಿನಿಂದ ಬರುವ ಕಾರ್ಯಕರ್ತರಿಗೆ ತೊಂದರೆ ಆಗುತ್ತದೆ. ಮಳೆಯಲ್ಲಿ ತೊಯ್ದುಕೊಂಡು ಕಾರ್ಯಕ್ರಮ ವೀಕ್ಷಿಸುವುದು ಕಷ್ಟವಾಗಬಹುದು ಎಂದು ಜೆಡಿಎಸ್‌ ಮುಖಂಡರೊಬ್ಬರು ಹೇಳಿದರು.

ಕಾರ್ಯಕ್ರಮ ನಡೆಯುವಾಗ ಸ್ವಲ್ಪ ಹೊತ್ತು ಮಳೆ ಬಿಟ್ಟರೆ ಸಾಕು. ಕಾರ್ಯಕರ್ತರು ಪ್ರಮಾಣ ವಚನ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಹೋಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT