ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಮೇವ ಜಯತೆ ಧ್ಯೇಯವಾಗದಿರಲಿ

ಕನ್ನಡ ಅಧ್ಯಯನ ಕೇಂದ್ರದಿಂದ ‘ಜಿಜ್ಞಾಸೆಯ ಕಮ್ಮಟ’; ರಂಗಕರ್ಮಿ ರಘುನಂದನ ಅಭಿಮತ
Last Updated 26 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ತುಮಕೂರು: ಅದು ಕನ್ನಡ ಸ್ನಾತಕೋತ್ತರ ಪದವಿ ತರಗತಿಯ ಕೊಠಡಿ. ಡೆಸ್ಕು-ಬೆಂಚುಗಳು, ಚಪ್ಪಲಿಗಳು ಹೊರಗಿದ್ದವು. ಗಂಧದ ಕಡ್ಡಿಯ ಸುವಾಸನೆ ತರಗತಿಯೊಳಗೆ ಹರಡಿತ್ತು. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ನೆಲದ ಮೇಲೆ ಸುಖಾಸನದಲ್ಲಿ ಕುಳಿತಿದ್ದರು. ಧ್ಯಾನಕ್ಕೆ ಕುಳಿತವರಂತೆ!

ಬೆಳಿಗ್ಗೆ 9.30ಕ್ಕೆ ಆರಂಭವಾದ ಗೋಷ್ಠಿ ಸಂಜೆ 6ರವರೆಗೆ ನಡೆದಿತ್ತು. ಅಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆ. ಯೋಚನೆ-ನಗು-ಮೌನ-ಭಯ-ಆತಂಕಗಳ ವಿಭಿನ್ನ ಅನುಭವಗಳನ್ನು ಸೃಷ್ಟಿಸಿತ್ತು. ನಾವು ಯಾರು? ನಾವು ಏನು? ನಾವು ಬಂದದ್ದು ಎಲ್ಲಿಂದ? ನಾವು ಸಾಗುವುದಾದರೂ ಎಲ್ಲಿಗೆ? ಎನ್ನುವ ತತ್ವಜ್ಞಾನದ ಪ್ರಶ್ನೆಗಳನ್ನು, ಬದುಕಿನ ವಾಸ್ತವದ ಅನೇಕ ಕಷ್ಟಗಳ ಉದಾಹರಣೆಗಳನ್ನು ಎದುರಿಗಿಟ್ಟರು ಕವಿ, ಹಿರಿಯ ರಂಗಕರ್ಮಿ ರಘುನಂದನ.

ಇದು ತುಮಕೂರು ವಿಶ್ವವಿದ್ಯಾನಿಲಯದ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಹಮ್ಮಿಕೊಂಡಿದ್ದ ‘ಜಿಜ್ಞಾಸೆಯ ಕಮ್ಮಟ’ದಲ್ಲಿ ಕಂಡ ದೃಶ್ಯ.

ಪರದೆಯಲ್ಲಿ ಮೂಡಿಬಂದ ಛಾಯಾಚಿತ್ರಗಳು, ಸಾಕ್ಷ್ಯಚಿತ್ರಗಳು, ಹಾಡುಗಳು, ಸಿನಿಮಾದ ತುಣುಕುಗಳು ವಿದ್ಯಾರ್ಥಿಗಳಲ್ಲಿ ಕೌತುಕ ಮೂಡಿಸಿದ್ದವು. ಮೊದಲ ಬಾರಿಗೆ ಚಿತ್ರ ನೋಡಿದಾಗ ಭಾವ ಪರವಶರಾದವರು, ಎರಡನೇ ಬಾರಿ ನೋಡಿದಾಗ ಗಾಢ ಆಲೋಚನೆ ಮಾಡಿದರು. ಮೂರನೇ ಸಲ ವೀಕ್ಷಿಸಿದಾಗ ಮಾರುಕಟ್ಟೆಯ ಅಂತರ್‌ಸಂಬಂಧಗಳು, ಕಲೆ-ಸಂಸ್ಕೃತಿ-ಧರ್ಮ-ಪ್ರಭುತ್ವಗಳು ಕೈ ಜೋಡಿಸಿ ನಡೆಸುವ ರಾಜಕಾರಣದ ಹೆಜ್ಜೆ ಜಾಡುಗಳನ್ನು ಕಂಡರು.

‘ನಮ್ಮ ದೇಶ ನೈತಿಕವಾಗಿ ಶುಭ್ರವಾದ, ಆಚರಣೆಯಲ್ಲಿ ಸರಳವಾದ, ಯೋಚನೆಯಲ್ಲಿ ಗಹನವಾದ ಅಧ್ಯಾತ್ಮವನ್ನು ಕಂಡರಿಸಿದ ನಾಡು. ಇಲ್ಲಿ ಯಾವತ್ತೂ ಸತ್ಯಮೇವ ಜಯತೆ ಎನ್ನುವುದು ಧ್ಯೇಯವಾಕ್ಯವಾಗಬೇಕೇ ಹೊರತು ಶಕ್ತಿಮೇವ ಜಯತೆ ಆಗಬಾರದು’ ಎಂದು ರಘುನಂದನ ನುಡಿದರು.

‘ಶಕ್ತಿ ಇರುವವರು ಸತ್ಯವನ್ನು ಸೃಷ್ಟಿಸುವಷ್ಟು ಸಮರ್ಥರೂ ಆಗಿರುತ್ತಾರೆ ಎಂಬುದು ನಮ್ಮ ಗಮನದಲ್ಲಿ ಇರಬೇಕು’ ಎಂದರು.

ಶ್ರೇಷ್ಟತೆಯ ಉನ್ಮಾದದಲ್ಲಿ ಘಟಿಸಿದ ಎರಡು ಮಹಾಯುದ್ದಗಳ ಕಥನವನ್ನು ದೃಶ್ಯಸಹಿತವಾಗಿ ನಿರೂಪಿಸಿದರು.

ವಿಭಾಗದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ ಶೆಟ್ಟಿ, ಪ್ರಾಧ್ಯಾಪಕರಾದ ಪ್ರೊ.ಅಣ್ಣಮ್ಮ, ಡಾ.ಪಿ.ಎಂ.ಗಂಗಾಧರಯ್ಯ,
ಡಾ.ನಾಗಭೂಷಣ, ಸಂಪನ್ಮೂಲ ವ್ಯಕ್ತಿ ನಲ್ಮೆ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT