ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕನಕದಾಸರ ನಾಮಫಲಕ ಅಳವಡಿಕೆ: ವಿವಾದ ಅಂತ್ಯ

ಹುಳಿಯಾರು ಪಟ್ಟಣ ಬಂದ್‌ ಯಶಸ್ವಿ; ಎಂದಿನಂತೆ ಸಂಚರಿಸಿದ ಬಸ್‌ಗಳು
Last Updated 21 ನವೆಂಬರ್ 2019, 14:35 IST
ಅಕ್ಷರ ಗಾತ್ರ

ಹುಳಿಯಾರು: ಪಟ್ಟಣದ ಪೆಟ್ರೋಲ್‌ ಬಂಕ್‌ ಬಳಿ ಕನಕದಾಸರ ನಾಮಫಲಕ ಅಳವಡಿಕೆ ವೇಳೆ ಉಂಟಾದ ವಿವಾದ ತಾರಕ್ಕೇರಿ ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕುರುಬ ಸಮಾಜ ಗುರುವಾರ ಕರೆ ನೀಡಿದ್ದ ಹುಳಿಯಾರು ಬಂದ್ ಯಶಸ್ವಿಯಾಯಿತು.

ಮತ್ತೆ ವಿವಾದಿತ ವೃತ್ತದಲ್ಲಿ ನಾಮಫಲಕ ಅಳವಡಿಸುವ ಮೂಲಕ ವಿವಾದ ಸುಖಾಂತ್ಯ ಕಂಡಿತು.

ನ. 12ರಂದು ಹುಳಿಯಾರು ಪಟ್ಟಣದ ಯೂಸೂಫ್‌ ಖಾನ್‌ ಪೆಟ್ರೋಲ್‌ ಬಂಕ್‌ ವೃತ್ತದಲ್ಲಿ ಕನಕದಾಸರ ನಾಮಫಲಕವನ್ನು ಕುರುಬ ಸಮಾಜದ ಮುಖಂಡರು ಅಳವಡಿಸಿದ್ದರು. ಪಟ್ಟಣ ಪಂಚಾಯಿತಿ ಅನುಮತಿ ಪಡೆಯದೆ ನಾಮಫಲಕ ಅಳವಡಿಸಲಾಗಿದೆ ಎಂದು ಮುಖ್ಯಾಧಿಕಾರಿ ತೆರವಿಗೆ ಮುಂದಾಗಿದ್ದರು.

ತೆರವಿನ ವೇಳೆ ಅಧಿಕಾರಿ ಹಾಗೂ ಸಮಾಜದ ಮುಖಂಡರ ನಡುವೆ ವಿವಾದ ಏರ್ಪಟ್ಟು ಪರಿಸ್ಥಿತಿ ಬಿಗಾಡಾಯಿಸಿತ್ತು. ಇದೇ ದಿನ ರಾತ್ರಿ ಮತ್ತೊಂದು ಗುಂಪು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ನಾಮಫಲಕ ಅಳವಡಿಸಲು ಮುಂದಾಗಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದು ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು.

ನಂತರ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಶಾಂತಿಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕುರುಬ ಸಮಾಜದ ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ವಿಷಯ ತೀವ್ರ ಸ್ವರೂಪ ಪಡೆದು ಇಡೀ ರಾಜ್ಯದಲ್ಲಿನ ಕುರುಬ ಸಮಾಜ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಸಹ ನಡೆಸಿದ್ದರು.

ತುಮಕೂರು ಜಿಲ್ಲಾ ಹಾಗೂ ಸ್ಥಳೀಯ ಕುರುಬ ಸಂಘಗಳು ಗುರುವಾರ ಹುಳಿಯಾರು ಬಂದ್‌ಗೆ ಕರೆ ನೀಡಿದ್ದವು. ಪಟ್ಟಣದ ದುರ್ಗಾಪರಮೇಶ್ವರಿ ದೇಗುಲದ ಆವರಣದಲ್ಲಿ ಬೆಳಿಗ್ಗೆ ಸಮಾವೇಶಗೊಂಡರು. ನಂತರ ಪಟ್ಟಣದ ಬಿ.ಎಚ್.ರಸ್ತೆ ಮೂಲಕ ಮೆರವಣಿಗೆ ಸಾಗಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಲಹೊತ್ತು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಪೊಲೀಸ್‌ ಠಾಣೆ ಮುಂದೆ ಜಮಾವಣೆಗೊಂಡರು. ಕೂಡಲೇ ವಿವಾದಿತ ಪೆಟ್ರೋಲ್‌ ಬಂಕ್‌ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಸಬೇಕು. ಸ್ವಾಮೀಜಿ ಅವರೊಡನೆ ಹಗುರವಾಗಿ ನಡೆದುಕೊಂಡ ಸಚಿವ ಮಾಧುಸ್ವಾಮಿ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಬಿ.ತೇಜಸ್ವಿನಿ ಅವರನ್ನು ‘ನಾಮಫಲಕ ತೆರವು ಮಾಡುವುದಿಲ್ಲ ಎಂದು ಹೇಳಿ ರಾತ್ರೋರಾತ್ರಿ ಫಲಕ ತೆರವುಗೊಳಿಸಿದದ ಬಗ್ಗೆ ಸ್ಪಷ್ಟನೆ ನೀಡಬೇಕು. ನೀವೇ ಮುಂದೆ ನಿಂತು ಫಲಕ ಅಳವಡಿಸಬೇಕು’ ಎಂದು ಪಟ್ಟು ಹಿಡಿದರು.

ಇದಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತರು.

ಈ ವೇಳೆ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ‘ರಾಜಕಾರಣಿಗಳಾದವರಿಗೆ ಸಮಯದಲ್ಲಿ ಒಂದು ಹುಲ್ಲುಕಡ್ಡಿಯೂ ಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಅವರಿಗೆ ಎಲ್ಲ ಸಮಾಜದ ಜನರ ಮತ ನೀಡಿರುವುದರಿಂದ ಎಲ್ಲರನ್ನು ಸಮಾನವಾಗಿ ಕಾಣಬೇಕು. ಜಾತಿಗಳ ಮಧ್ಯೆ ಜಗಳವಾಡಿಸುವುದನ್ನು ಬಿಟ್ಟು ಕ್ಷೇತ್ರದಲ್ಲಿ ಜನರು ನೆಮ್ಮದಿಯಾಗಿ ಬಾಳಲು ಅನುವು ಮಾಡಿ ಕೊಡಬೇಕಾಗಿತ್ತು. ಎಲ್ಲರನ್ನು ಸಮಾಧಾನ ಪಡಿಸಿ ಸಾಮರಸ್ಯ ಮೂಡಿಸಬೇಕು. ಅದನ್ನು ಬಿಟ್ಟು ಸಚಿವರು ಕೇವಲ ಒಂದು ಸಮಾದವರ ಪರ ನಿಂತು ವಿವಾದಕ್ಕೆ ಕಾರಣಗಾಗಿದ್ದಾರೆ. ಇಂತಹ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ಕೊನೆಗೆ ಪ್ರತಿಭಟನೆಯ ತೀವ್ರತೆ ಅರಿತು ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಕೊನೆಗೆ ಪ್ರತಿಭಟನಾಕಾರರ ಒತ್ತಾಯದಂತೆ, ಪಟ್ಟಣದ 18 ಕೋಮಿನ ಮುಖ್ಯಸ್ಥರ ಸಭೆಯ ತೀರ್ಮಾನದಂತೆ ಮತ್ತೆ ನಾಮಫಲಕ ಅಳವಡಿಕೆಗೆ ಅನುಮತಿ ನೀಡಿದರು.

ನಂತರ ಪ್ರತಿಭಟನಾಕಾರರು 18 ಕೋಮಿನವರ ಬರುವಿಕೆಗೂ ಕಾಯದೆ ನಾಮಫಲಕ ಅಳವಡಿಸಿ ಜೈಕಾರ ಹಾಕಿದರು. ಕನಕದಾಸ ವೃತ್ತ ನಾಮಫಲಕವನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಿ ಕೆಲವರು ಹಾಲಿನ ಅಭಿಷೇಕ ಮಾಡಿದರು.

ವಿವಾದಿತ ಸ್ಥಳದಲ್ಲಿ ಕನಕದಾಸ ವೃತ್ತದ ನಾಮಫಲಕ ಅಳವಡಿಕೆ ನಂತರ 10 ದಿನಗಳ ವಿವಾದಕ್ಕೆ ತೆರೆ ಬಿದ್ದಿತು. ಪ್ರತಿಭಟನೆಯಲ್ಲಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಕುರುಬ ಸಮಾಜದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT