ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಿಗರು ಸಂಘಟಿತರಾಗಿ ಅಧಿಕಾರ ಪಡಿಯಿರಿ

ಸಾಹಿತಿ ಕೆ.ಬಿ.ಸಿದ್ದಯ್ಯ ಸ್ಮರಣೋತ್ಸವ ಹಾಗೂ ಸಮುದಾಯದ ಮುಖಂಡರ ಸಭೆಯಲ್ಲಿ ನಾರಾಯಣಸ್ವಾಮಿ ಅಭಿಮತ
Last Updated 29 ಅಕ್ಟೋಬರ್ 2019, 12:26 IST
ಅಕ್ಷರ ಗಾತ್ರ

ತುಮಕೂರು: ಬೇರೆ ನಾಯಕರಿಗೆ ಜಿಂದಾಬಾದ್ ಹೇಳುತ್ತ ಯಾವುದೇ ಬದಲಾವಣೆ ಇಲ್ಲದೆ ಮಾದಿಗ ಸಮುದಾಯ ಕಳೆದು ಹೋಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಸಾಹಿತಿ ಕೆ.ಬಿ.ಸಿದ್ದಯ್ಯ ಸ್ಮರಣೋತ್ಸವ ಹಾಗೂ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಆರ್ಥಿಕ, ದೈಹಿಕ, ಸಾಮಾಜಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದೇವೆ. ಪಕ್ಷ ಮತ್ತು ಸಿದ್ಧಾಂತವನ್ನು ಬಿಟ್ಟು ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಬಂದಿದ್ದೇನೆ’ ಎಂದರು.

‘ನಮ್ಮ ಸ್ಥಾನಮಾನದ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ. ರಾಜಕಾರಣಿಗಳ ನಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಗೊತ್ತಾಗಬೇಕಿದೆ? ಯುವ ಮುಖಂಡರು ಯಾವುದೇ ಪಕ್ಷದಿಂದ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿ ಅವರನ್ನು ಆಯ್ಕೆ ಮಾಡಬೇಕು’ ಎಂದು ಹೇಳಿದರು.

ನಮ್ಮ ಸಮುದಾಯದ ಸಂಘಟನೆಗಳಿಗೆ ಭೂಮಿ ನೀಡಲು ಆಗದಂತಹ ವ್ಯವಸ್ಥೆ ಇದೆ. ಸರ್ಕಾರಿ ಸಂಪತ್ತು ಮಾದಿಗರಿಗೆ 0.5ರಷ್ಟು ಹಂಚಿಕೆ ಆಗಿಲ್ಲ. ಸಮುದಾಯ ಬದಲಾಗಬೇಕಿದೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಗ್ಗೂಡಬೇಕಿದೆ ಎಂದರು.

ಸಮುದಾಯದ ಇಂದಿನ ಸ್ಥಿತಿ ಬಗ್ಗೆ ಚರ್ಚಿಸಬೇಕಿದೆ. ಎಲ್ಲ ಸಮಾಜಗಳಿಗೂ ಸೌಲಭ್ಯ ಹಂಚಿಕೆಯಾದಂತೆ ನಮ್ಮ ಸಮುದಾಯಕ್ಕೂ ಹಂಚಿಕೆ ಆಗಬೇಕಾದರೆ ಹೋರಾಟ ಅಗತ್ಯವಾಗಿದೆ. ಸಮುದಾಯಕ್ಕೆ ಆರ್ಥಿಕ ಶಕ್ತಿ ಕೊಡುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳೊಂದಿಗೆ ರಾಜಕೀಯ ಮುಖಂಡರು ಸಹಕರಿಸಬೇಕಿದೆ ಎಂದು ಸಲಹೆ ನೀಡಿದರು.

ನರೇಗ ಯೋಜನೆಯಡಿ ಸಮುದಾಯದವರು ಎಷ್ಟು ಮಂದಿ ಅಡಿಕೆ, ತೆಂಗು ಹಾಕಿಸಿಕೊಂಡಿದ್ದೀರಿ, ಎಷ್ಟು ಸರ್ಕಾರಿ ಸವಲತ್ತು ಪಡೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಯೋಜನೆಯ ಬಳಸಿಕೊಳ್ಳದೆ ಮಾದಿಗರು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಮಾದಿಗ ಸಮುದಾಯವನ್ನು ಶಕ್ತಿಯುತಗೊಳಿಸುವ ಜವಾಬ್ದಾರಿಯನ್ನು ಸಂಸದರು ಹೊರಬೇಕು. ತುಮಕೂರು-ಚಿತ್ರದುರ್ಗ ಎರಡು ಜಿಲ್ಲೆಗಳಲ್ಲಿ ಸಮುದಾಯವನ್ನು ಸಂಘಟಿಸಿ ಮುನ್ನೆಡಸಬೇಕಾದ ಹೊಣೆಗಾರಿಕೆಯನ್ನು ಸಂಸದರು ವಹಿಸಬೇಕು ಎಂದು ಮನವಿ ಮಾಡಿದರು.

ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಮಾದಿಗ ಸಮುದಾಯದ ಸಹಕಾರ ಸಂಘಕ್ಕೆ ನಿವೇಶನ ಮಂಜೂರಾಗಿದೆ. ಅಲ್ಲಿ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪಂ.ಸದಸ್ಯರಾದ ವೈ.ಎಚ್.ಹುಚ್ಚಯ್ಯ, ಜಗನ್ನಾಥ್, ಕೆಂಚಮಾರಯ್ಯ, ಉಪ ಮೇಯರ್ ರೂಪಶ್ರೀ, ಡಾ.ಬಸವರಾಜು, ಡಾ.ಲಕ್ಷ್ಮೀಕಾಂತ್, ಉದ್ಯಮಿ ಡಿ.ಟಿ.ವೆಂಕಟೇಶ್, ಮುಖಂಡರಾದ ನರಸೀಯಪ್ಪ, ಕುಂದೂರು ತಿಮ್ಮಯ್ಯ, ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ, ಟೂಡಾ ಮಾಜಿ ಸದಸ್ಯ ಜಯಮೂರ್ತಿ, ಪಾವಗಡ ಶ್ರೀರಾಮ್ ಇದ್ದರು.

***

ರಾಜಕೀಯ ಸಲ್ಲದು
ರಾಜಕೀಯ ಮಾಡುವುದಾದರೆ ಗ್ರಾಮ ಪಂಚಾಯಿತಿಗಳಲ್ಲಿ ಮಾಡಿಕೊಳ್ಳಿ. ಸಮುದಾಯದ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಮಾದಿಗರ ಶಕ್ತಿ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಎ.ನಾರಾಯಣಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT