ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಪ್ರಗತಿಯ ಸಮಯ ನುಂಗಿದ ಅಕ್ರಮದ ಚರ್ಚೆ

ಅಕ್ಷರ ದಾಸೋಹ ಅವ್ಯವಹಾರ ಆರೋಪಕ್ಕೆ ಪ್ರಗತಿ ಪರಿಶೀಲನಾ ಸಭೆ ಬಲಿ
Last Updated 14 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆಅಕ್ಷರ ದಾಸೋಹ ಯೋಜನೆಯಡಿ ಹಂಚಿಕೆ ಮಾಡಲಾದ ಅನುದಾನದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯ ಕಲಾಪವನ್ನೆ ನುಂಗಿಹಾಕಿತು.

ಮಂಗಳವಾರ ನಡೆದ ಸಭೆಯಲ್ಲಿ ಸದಸ್ಯರೆಲ್ಲರೂ ಈ ಕುರಿತು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯಾನಿರ್ವಹಣಾ ಅಧಿಕಾರಿಯ(ಸಿಇಒ) ಗಮನ ಸೆಳೆದರು. ಅವ್ಯವಹಾರದ ಕುಲಂಕೂಷ ತನಿಖೆಗೆ ಪಟ್ಟು ಹಿಡಿದರು.

ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಣ ನುಂಗಿದ ಅಧಿಕಾರಿಗಳಿಂದ ಅನುದಾನ ವಸೂಲಿ ಮಾಡಬೇಕು. ಎಲ್ಲ ತಾಲ್ಲೂಕುಗಳಲ್ಲೂ ಈ ರೀತಿಯ ಅಕ್ರಮಗಳು ನಡೆದಿವೆ. ಅವುಗಳನ್ನೆಲ್ಲಾ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.

2015ರಿಂದ 2019ರ ಜನವರಿವರೆಗೆ ಬಿಡುಗಡೆಯಾದ ಅನುದಾನದಲ್ಲಿ ₹ 40 ಲಕ್ಷವನ್ನು ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು ಕಬಳಿಸಿದ್ದಾರೆ. ಡೆಟಾ ಎಂಟ್ರಿ ಆಪರೇಟರ್‌ ಆಗಿದ್ದ ಶ್ರುತಿ ಎಂಬುವವರ ಖಾತೆಗೆ ಮೊತ್ತ ಜಮೆ ಮಾಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗ ಅವ್ಯವಹಾರ ಹೊರಬಿದ್ದ ಬಳಿಕ ಶ್ರುತಿ ಅವರೇ ತಪ್ಪು ಮಾಡಿದ್ದಾರೆಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಆ ಹೆಣ್ಣು ಮಗಳು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅವರ ಪೋಷಕರು ಮರ್ಯಾದೆಗೆ ಅಂಜಿ ಇದ್ದ ನಿವೇಶನ ಮಾರಿ ₹ 16 ಲಕ್ಷ ಪಾವತಿಸಿದ್ದಾರೆ ಎಂದು ಸದಸ್ಯರು ದೂರಿದರು.

ಸಭೆಯಲ್ಲಿದ್ದ ಅಕ್ಷರ ದಾಸೋಹ ಅಧಿಕಾರಿ, ಅಕ್ರಮ ಆರೋಪ ಕೇಳಿಬಂದ ಬಳಿಕ ಸಿ.ಇ.ಒ. ಅವರ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ತನಿಖೆ ಕೈಗೊಳ್ಳಲಾಯಿತು. ಹಂಚಿಕೆಯಾದ ಅನುದಾನದಲ್ಲಿ ₹ 34.35 ಲಕ್ಷ ಅನಧಿಕೃತ ಖಾತೆಗಳಿಗೆ ಜಮೆ ಆಗಿರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ವರದಿಯನ್ನು ಸಿ.ಇ.ಒ.ಗೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಸಭೆಯ ಆರಂಭದಲ್ಲಿ ಮಾರ್ಚ್‌ನಲ್ಲಿ ನಡೆದ ಸಾಮಾನ್ಯ ಸಭೆಯ ನಿರ್ಣಯಗಳ ಅನುಪಾಲನ ವರದಿಯ ಪರಿಶೀಲನೆ ನಡೆಯಿತು.

ಈ ವೇಳೆ ವರದಿಯಲ್ಲಿ ಸಮಂಜಸವಾದ ವಿವರಣೆ ಇಲ್ಲ. ನಾವು ಕೇಳಿದ ಪ್ರಶ್ನೆಗಳಿಗೂ ಅಧಿಕಾರಿಗಳು ವರದಿಯಲ್ಲಿ ನೀಡಿರುವ ವಿವರಣೆಗೆ ಸಂಬಂಧವೇ ಇಲ್ಲ ಎಂದು ಸದಸ್ಯರಾದ ವೈ.ಎಚ್.ಹುಚ್ಚಯ್ಯ ಆಕ್ಷೇಪ ವ್ಯಕ್ತಪಡಿಸಿದರು.

ಕಾಮಗಾರಿಗಳ ಅನುದಾನಗಳು ಸಕಾಲಕ್ಕೆ ಬಿಡುಗಡೆ ಆಗುತ್ತಿಲ್ಲ. ಇದರಿಂದ ನಿರ್ಮಾಣ ವೆಚ್ಚ ಹೆಚ್ಚುತ್ತಿದೆ. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿ ಬಂದ ಅನುದಾನ ಅಭಿವೃದ್ಧಿಗೆ ವಿನಿಯೋಗವಾಗದೆ ಮರಳಿ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಕಳೆದ ಬಾರಿ ಬಹುತೇಕ ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ನವಂಬರ್‌ನಲ್ಲಿ ಅನುಮೋದನೆ ಸಿಕ್ಕಿತ್ತು. ಹಾಗಾಗಿ ವಿಳಂಬವಾಗಿತ್ತು. ಈ ಬಾರಿ ಹಾಗೆ ಆಗದಂತೆ ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಸದಸ್ಯರಾದ ಕೆಂಚಮಾರಯ್ಯ, ಪರಿಶಿಷ್ಟ ಜಾತಿ ಉಪಯೋಜನೆ(ಎಸ್‌ಸಿಪಿ) ಮತ್ತು ಗಿರಿಜನ ಉಪಯೋಜನೆಯಡಿ(ಟಿಎಸ್‌ಪಿ) ಪಶುಭಾಗ್ಯ ಯೋಜನೆಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಸಿಗುತ್ತಿಲ್ಲ. ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎಂದು ದೂರಿದರು.

ಸಾಲಸೌಲಭ್ಯ ನೀಡಲು ಜಿಲ್ಲಾ ಲೀಡ್‌ ಬ್ಯಾಂಕ್‌ನ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರಿರಮ್ಮ ಎಂದು ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸಿಇಒ ಅವರಿಗೆ ಸಲಹೆ ನೀಡಿದರು.

*

₹ 1.93 ಕೋಟಿ ವಾಪಸ್ಸು

ಪಂಚಾಯಿತಿ ರಾಜ್‌ ಎಂಜಿನಿಯರಿಂಗ್‌ ಇಲಾಖೆಯಿಂದ ರಸ್ತೆ, ಸಣ್ಣ ಸೇತುವೆಗಳ ನಿರ್ಮಾಣಕ್ಕೆಂದು ಬಿಡುಗಡೆಯಾಗಿ ಬಂದಿದ್ದ ₹ 1.93 ಕೋಟಿ ವಾಪಸ್ಸು ಹೋಗಿದೆ ಎಂದು ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ಮಾಹಿತಿ ನೀಡಿದರು.

ವರದಿ ಹಾಗೂ ಲೆಕ್ಕಪತ್ರಗಳನ್ನು ಸಕಾಲಕ್ಕೆ ಸಲ್ಲಿಸಿದ ಯಾವುದೇ ಕಾಮಗಾರಿಯ ಬಿಲ್‌ ಪಾವತಿಯಲ್ಲಿ ವಿಳಂಬ ಮಾಡಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT