ಮಂಗಳವಾರ, ನವೆಂಬರ್ 12, 2019
20 °C

ಸೋಪಿನ ಮುಂದೆ ಸೋತ ಜನರ ಮಾನವೀಯತೆ!

Published:
Updated:
Prajavani

ಕೋರ (ತುಮಕೂರು): ರಾಷ್ಟೀಯ ಹೆದ್ದಾರಿ 48ರ ರಂಗಾಪುರ ಬಳಿ ಭಾನುವಾರ ನಸುಕಿನಲ್ಲಿ ಖಾಸಗಿ ಬಸ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಜವರಾಯ ಅಟ್ಟಹಾಸ ಮೆರೆದು ಮೂವರನ್ನು ಬಲಿಪಡೆದಿದ್ದಾನೆ.

ಅಪಘಾತದಿಂದ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆಯುವುದು ಹೇಗೆ ಎಂದು ಕೆಲ ಸ್ಥಳೀಯರು ಹಾಗೂ ಪೊಲೀಸರು ಶ್ರಮ ಹಾಕುತ್ತಿದ್ದರೆ, ಪೊಲೀಸರಿಗೆ ಸಹಾಯ ಮಾಡುವ ಸೋಗಿನಲ್ಲಿ ಬಂದವರು ಲಕ್ಸ್ ಸೋಪಿಗೆ ಕನ್ನ ಹಾಕಿ ಪರಾರಿಯಾಗುತ್ತಿದ್ದರು.

ಲಕ್ಸ್ ಸೋಪು ತುಂಬಿಕೊಂಡು ಹೊರಟಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಲಾರಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಸರ್ವೀಸ್ ರಸ್ತೆಗೆ ಬಿದ್ದಿತ್ತು. ಲಾರಿಯಲ್ಲಿದ್ದ ಲಕ್ಸ್ ಸೋಪು ರಸ್ತೆಯಲ್ಲೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಸೋಪಿನ ಲಾರಿ ಬಿದ್ದಿರುವುದು ಗೊತ್ತಾಗಿದ್ದೇ ತಡ ಸ್ಥಳೀಯರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಕ್ಷಣಮಾತ್ರದಲ್ಲಿ ಜಮಾಯಿಸಿ ಸೋಪುಗಳನ್ನು ಲೂಟಿ ಮಾಡತೊಡಗಿದರು. ಪಂಚೆ, ಸೀರೆ, ಚಡ್ಡಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸೋಪುಗಳನ್ನು ಪೇರಿಸಿಕೊಂಡು ಪರಾರಿಯಾಗತೊಡಗಿದರು.

ಗಾಯಗೊಂಡ ಪ್ರಯಾಣಿಕರು ನೋವಿನಿಂದ ಅರಚುತ್ತಿದ್ದರೆ ಆ ಕಡೆ ಕಿವಿಗೊಡದೆ ಸಿಕ್ಕಷ್ಟು ಸೋಪು ಬಾಚುತ್ತಿದ್ದರು. ಕೆಲವರಂತೂ ಸೋಪಿನ ಬಾಕ್ಸ್‌ಗಳನ್ನು ಸರ್ವೀಸ್ ರಸ್ತೆ ಆಚೆಗೆ ಎಸೆದು ಕೊಂಡೊಯ್ದರು. ಬಸ್‌ನಲ್ಲಿರುವವರನ್ನು ರಕ್ಷಿಸುವುದಾ, ಸೋಪ್‌ಗೆ ಮುಗಿ ಬೀಳುವವರನ್ನು ನಿಯಂತ್ರಿಸುವುದಾ ಎಂಬುದು ಪೊಲೀಸರಿಗೆ ತೋಚದಂತಾಯಿತು.

ಪೊಲೀಸರು ಏನೇ ಹರಸಾಹಸ ಪಟ್ಟರೂ ಸೋಪಿಗೆ ಮುಗಿಬೀಳುವವರ ಸಂಖ್ಯೆ ಕಡಿಮೆಯಾಗಲಿಲ್ಲ. ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ ಬಳಿಕ ಸೋಪು ಕದಿಯುವವರ ಸಂಖ್ಯೆ ಕಡಿಮೆಯಾಯಿತು. ಕೆಲವರು ತಿಂಗಳಿಗಾಗುವಷ್ಟು ಕೆಲವರು ವರ್ಷಕ್ಕಾಗುವಷ್ಟು ಸೋಪು ಕದ್ದು ಪರಾರಿಯಾಗಿದ್ದಾರೆ.

ಲಕ್ಸ್ ಸೋಪಿನ ಘಮಲಿಗೆ ಇರುವ ಬೆಲೆ ಮನುಷ್ಯರ ಜೀವಕ್ಕಿಲ್ಲದಾಗಿದೆ. ಮಾನವೀಯತೆ ಕಣ್ಮರೆಯಾಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿಯಾಗಿದೆ.

ಸ್ಥಳೀಯರು ಸೋಪುಗಳನ್ನು ಬಾಚಿ ಒಯ್ಯುತ್ತಿರುವ ವಿಡಿಯೊ ಸಾಮಾಜಿಕ ಜಾಲಲತಾಣದಲ್ಲಿ ವೈರಲ್‌ ಆಗಿದೆ.

ಪ್ರತಿಕ್ರಿಯಿಸಿ (+)