ಬುಧವಾರ, ನವೆಂಬರ್ 20, 2019
25 °C

ಕೋಟಿಲಿಂಗ: ಹರಿದಾಡುತಿದೆ ಹಣ ವಸೂಲಿ ವಿಡಿಯೊ

Published:
Updated:

ಕೆಜಿಎಫ್‌: ಪ್ರಸ್ತುತ ಸರ್ಕಾರದ ವಶದಲ್ಲಿರುವ ಪ್ರಸಿದ್ಧ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಕಂದಾಯ ಅಧಿಕಾರಿ ಗಳು ಭಕ್ತರಿಗೆ ಟಿಕೆಟ್‌ ನೀಡದೆ ನೇರ ಹಣ ವಸೂಲಿ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಂದಾಯ ಅಧಿಕಾರಿಗಳಿಗೆ ಮುಜುಗರವನ್ನುಂಟು ಮಾಡಿದೆ.

ಅ. 1ರಂದು ನ್ಯಾಯಾಲಯದ ಆದೇಶದಂತೆ ಕೋಟಲಿಂಗೇಶ್ವರ ದೇವಾಲಯವನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಧರ್ಮಾಧಿಕಾರಿ ಶಿವಪ್ರಸಾದ್‌ ಮತ್ತು ಕೆ.ವಿ.ಕುಮಾರಿ ಅವರನ್ನು ದೇವಾಲಯ ವಿಚಾರದಲ್ಲಿ ಮಧ್ಯ ಪ್ರವೇಶಿಸದಂತೆ ಸೂಚಿಸಿತ್ತು.

ವಿಜಯದಶಮಿಯಂದು ದೇವಾಲಯಕ್ಕೆ ಹೆಚ್ಚು ಭಕ್ತರು ಬಂದಿದ್ದರು. ದೇವಾಲಯದ ಪ್ರವೇಶಕ್ಕೆ ಇಪ್ಪತ್ತು ರೂಪಾಯಿ ಟಿಕೆಟ್‌ ಪಡೆಯಲು ಸರತಿಯಲ್ಲಿ ಭಕ್ತರು ನಿಂತು ಸಾಗುತ್ತಿದ್ದರು. ಆ ಸಂದರ್ಭದಲ್ಲಿ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡ ಗ್ರಾಮಲೆಕ್ಕಿಗರಾದ ಕಾಸಿಂ ಆಲಿ ಮತ್ತು ಗೋವಿಂದಪ್ಪ ದೇವಾಲಯದ ಪ್ರವೇಶ ದ್ವಾರದಲ್ಲಿ ಟಿಕೆಟ್‌ ಇಲ್ಲದೆ ಭಕ್ತರನ್ನು ಒಳಗೆ ಬಿಟ್ಟರು. ಭಕ್ತರಿಗೆ ಟಿಕೆಟ್‌ ನೀಡದೆ ತಲಾ ಇಪ್ಪತ್ತು ರೂಪಾಯಿ ವಸೂಲಿ ಮಾಡಿಕೊಂಡು ಒಳಗೆ ಬಿಡುತ್ತಿರುವ ವಿಡಿಯೊ ವೈರಲ್ ಆಗಿದೆ.

ಸರತಿಯಲ್ಲಿ ನಿಂತವರಿಗೆ ಮೊದಲು ಬಿಡದೆ, ಅಡ್ಡದಾರಿಯಲ್ಲಿ ದೇವಾಲಯಕ್ಕೆ ಹೋಗುವವರಿಗೆ ಆದ್ಯತೆ ನೀಡುತ್ತಿರುವುದನ್ನು ಕೆಲವು ಭಕ್ತರು ಪ್ರಶ್ನಿಸಿದರು. ಕೂಡಲೇ ಅಲ್ಲಿ ಕಾವಲಿದ್ದ ಪೊಲೀಸರು ಸ್ಥಳಕ್ಕೆ ಬಂದು, ಗ್ರಾಮಲೆಕ್ಕಿಗರನ್ನು ತರಾಟೆಗೆ ತೆಗೆದುಕೊಂಡರು. ನಂತರ ಅವರಿಬ್ಬರೂ ನೇರ ವಸೂಲಿಯನ್ನು ಬಿಟ್ಟು ತೆರಳಿದರು.

ಹೊಸ ವರ್ಷದ ದಿನ ಮತ್ತು ಶಿವರಾತ್ರಿಯಂದು ದೇವಾಲಯಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಆಗ ಕೂಡ ವ್ಯವಸ್ಥಿತವಾಗಿ ಭಕ್ತರು ಸರತಿಯಲ್ಲಿ ನಿಂತು ಹೋಗುತ್ತಾರೆ. ಭಕ್ತರು ಜಾಸ್ತಿ ಇದ್ದಾರೆ ಎಂದು ತೋರಿಸಿ, ನೇರ ಹಣ ವಸೂಲಿಗೆ ಕಂದಾಯ ಅಧಿಕಾರಿಗಳು ಇಳಿದಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)