ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್‌ಕ್ರಾಸ್‌ನಲ್ಲಿ ಕೋವಿಡ್ ಸೆಂಟರ್

Last Updated 10 ಮೇ 2021, 3:46 IST
ಅಕ್ಷರ ಗಾತ್ರ

ತುಮಕೂರು: ಮಾತೃಛಾಯಾ ಹಾಲಪ್ಪ ಪ್ರತಿಷ್ಠಾನವು ರೆಡ್‍ಕ್ರಾಸ್ ಸೊಸೈಟಿ, ಸತ್ಯಸಾಯಿ ಸಂಸ್ಥೆ, ಸಾಯಿಗಂಗಾ ಟ್ರಸ್ಟ್, ಆದರ್ಶ ಫೌಂಡೇಷನ್, ಪೀಣ್ಯ ಕೈಗಾರಿಕಾ ಸಂಘ, ರೋಟರಿ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೆಳಗುಂಬದಲ್ಲಿರುವ ರೆಡ್‍ಕ್ರಾಸ್ ಕಟ್ಟಡದಲ್ಲಿ ಸುಸಜ್ಜಿತವಾದ 50 ಹಾಸಿಗೆಗಳ ಕೋವಿಡ್‍ ಕೇರ್ ಸೆಂಟರ್‌ ಆರಂಭಿಸಲಾಗಿದೆ.

ಸೋಮವಾರದಿಂದಲೇ ಇದು ಕಾರ್ಯಾರಂಭ ಮಾಡಲಿದ್ದು, ಆಮ್ಲಜನಕ ಸಂಪರ್ಕ ಹೊಂದಿದ 20 ಹಾಸಿಗೆ, ಸಾಮಾನ್ಯ ಸೌಲಭ್ಯ ಹೊಂದಿದ 30 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.

ಕೋವಿಡ್–19 ಎರಡನೇ ಅಲೆ ಜನರನ್ನು ಭಯಭೀತರನ್ನಾಗಿ ಮಾಡಿದೆ. ಅವರಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಸತ್ಯಸಾಯಿ ಸಂಸ್ಥೆ ವತಿಯಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

ರೆಡ್‍ಕ್ರಾಸ್ ಸಂಸ್ಥೆಯವರು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಕೌನ್ಸೆಲಿಂಗ್, ಪ್ರಾಣವಾಯುಗೆ ಬೇಕಾದಂತಹ ಆಮ್ಲಜನಕದ ಅನುಕೂಲತೆ ಮಾಡಿಕೊಡಲಾಗುವುದು. ಆರಂಭದಲ್ಲಿ 50 ಹಾಸಿಗೆ ತೆರೆದಿದ್ದು, ಮುಂದಿನ ದಿನಗಳಲ್ಲಿ 250 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರ ಕೊಟ್ಟಿದೆ ಎಂದರು.

ಸ್ವಯಂ ಪ್ರೇರಿತರಾಗಿ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ಯಾರಾ ಮೆಡಿಕಲ್ ಸಿಬ್ಬಂದಿ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕೆಲಸ ನಿರ್ವಹಿಸಲಿದ್ದಾರೆ. ಚಿಕಿತ್ಸೆಗೆ ಬರುವ ರೋಗಿಗಳಿಗೆ ಊಟ, ಪೌಷ್ಟಿಕ ಆಹಾರ, ಔಷಧೋಪಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ವೈದ್ಯರೂ ರೋಗಿಯ ಪ್ರಾಣ ಉಳಿಸಬೇಕೆಂದೇ ಚಿಕಿತ್ಸೆ ನೀಡುತ್ತಾರೆ. ಪ್ರಾರಂಭಿಕ ಹಂತದಲ್ಲೇ ರೋಗಿಯನ್ನು ಚಿಕಿತ್ಸೆಗೆ ದಾಖಲಿಸಿದರೆ ಗುಣಮುಖರಾಗುತ್ತಾರೆ. ಕೊನೆ ಹಂತದಲ್ಲಿ ದಾಖಲು ಮಾಡಿದರೆ ಚಿಕಿತ್ಸೆ ನೀಡುವುದು ಕಷ್ಟಕರವಾಗುತ್ತದೆ. ಆದ್ದರಿಂದ ಪ್ರಾರಂಭಿಕ ಹಂತದಲ್ಲೇ ರೋಗಿಯನ್ನು ದಾಖಲು ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಪರಿಶೀಲಿಸಿ ಅನುಮತಿ ನೀಡಿದರು.

ಸಾಯಿಗಂಗಾ ಟ್ರಸ್ಟ್ ಅಧ್ಯಕ್ಷ ಡಾ.ವಿಜಯ ರಾಘವೇಂದ್ರ, ಕಾರ್ಯದರ್ಶಿ ಟಿ.ರಾಧಾ, ಒನ್ ನೇಷನ್ ಒನ್ ಯೂತ್ ಫೌಂಡೇಷನ್ ಸದಸ್ಯ ಪೃಥ್ವಿ ಹಾಲಪ್ಪ, ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಎಸ್.ನಾಗಣ್ಣ, ಆದರ್ಶ ಪೌಂಡೇಷನ್ ಮತ್ತು ಪೀಣ್ಯ ಕೈಗಾರಿಕಾ ಸಂಘದ ಡಿ.ಟಿ.ವೆಂಕಟೇಶ್, ತುಮಕೂರು ಸೆಂಟ್ರಲ್ ರೋಟರಿ ನಿರ್ದೇಶಕ ಶಿವಕುಮಾರ್ ಬಿಳಿಗೆರೆ, ತಾಲ್ಲೂಕು ಆರೋಗ್ಯಾಧಿಕಾರಿ ಮೋಹನ್, ವಾಕ್, ಶ್ರವಣ ದೋಷವುಳ್ಳ ಮಕ್ಕಳ ವಸತಿಯುತ ಉಚಿತ ಪಾಠಶಾಲೆಯ ವ್ಯವಸ್ಥಾಪಕ ಕೃಷ್ಣಯ್ಯ, ರೆಡ್‍ಕ್ರಾಸ್ ಕೌಶಲಾಭಿವೃದ್ಧಿ ಸಮಿತಿಯ ಚೇತನ್, ರೆಡ್‍ಕ್ರಾಸ್ ಶಾಲೆ ಅಭಿವೃದ್ಧಿ ಸಮಿತಿ ಚಂದ್ರಣ್ಣ, ಪ್ರಭು ಸಾಗರನಹಳ್ಳಿ, ಡಾ.ಸನತ್, ಡಾ.ಚಂದ್ರಶೇಖರ್, ಡಾ.ಮಂಜುನಾಥ್, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ನಟರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT