ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿಮುದ್ದನಹಳ್ಳಿಯಲ್ಲಿ ಕೋವಿಡ್ ಆಸ್ಪತ್ರೆ

Last Updated 15 ಮೇ 2021, 3:59 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಕೋಡಿಮುದ್ದನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೋವಿಡ್–19 ಚಿಕಿತ್ಸಾ ಕೇಂದ್ರವನ್ನು ಗುರುವಾರ ಪ್ರಾರಂಭಿಸಲಾಯಿತು. ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲಿದೆ.

ಶಾಸಕ ಡಿ.ಸಿ.ಗೌರಿಶಂಕರ್ ₹50 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕವಾಗಿ 180 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ‘ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದಲ್ಲೂ ಅದೇ ಸ್ಥಿತಿ ಇದೆ. ಜನರ ನೋವಿನಲ್ಲಿ ರಾಜಕಾರಣ ಬಿಟ್ಟು ಮಾನವೀಯ ನೆಲೆಯಲ್ಲಿ ಹೋರಾಟ ಮಾಡಬೇಕಿದೆ’ ಎಂದು ಹೇಳಿದರು.

ವೈಯಕ್ತಿಕವಾಗಿ ನೀಡಿರುವ ಅಂಬುಲೆನ್ಸ್‌ಗಳಲ್ಲಿ 200ಕ್ಕೂ ಹೆಚ್ಚು ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಂಬುಲೆನ್ಸ್ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಗೆ ಸರ್ಕಾರ ನೀಡಿರುವ ಸಿಬ್ಬಂದಿ ಜತೆಗೆ ವೈಯಕ್ತಿಕವಾಗಿ 6 ಮಂದಿ ನೇಮಿಸಿ ಅವರಿಗೆ ಸಂಬಳ ನೀಡಲಾಗುವುದು. ನಿರಂತರ ವಿದ್ಯುತ್ ಪೂರೈಕೆಗಾಗಿ ಜನರೇಟರ್ ಸಿದ್ಧಪಡಿಸಲಾಗಿದೆ. ಕೊಳವೆ ಬಾವಿ ಕೊರೆಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿಡಿಯೋ ಮೂಲಕ ಶುಭ ಹಾರೈಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಜೂಮ್ ಆಪ್ ಮೂಲಕ ಮಾತನಾಡಿ, ‘ಕೋವಿಡ್‍ನಿಂದ ಸತ್ತವರ ಸಂಖ್ಯೆ ಗೊತ್ತಿಲ್ಲ, ದೇಶದ ಜನರಿಗೆ ಆಮ್ಲಜನಕ, ಲಸಿಕೆ ನೀಡದೆ ಹೊರದೇಶಗಳಿಗೆ ರಫ್ತು ಮಾಡಲಾಯಿತು. ಆಡಳಿತ ವರ್ಗಕ್ಕೆ ದೂರ ದೃಷ್ಟಿ ಇದ್ದಿದ್ದರೆ ಜನರು ಸಾಯುತ್ತಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ದೇಶದ ಆರ್ಥಿಕ ನೀತಿ ಹೇಗಿರಬೇಕು ಎಂಬುದನ್ನು ಆಡಳಿತ ವರ್ಗ ನಿರ್ಧರಿಸಬೇಕಿದೆ. ಕಾರ್ಪೋರೇಟ್ ಕಂಪನಿಗಳು ತಾವಾಗಿಯೇ ಮುಂದೆ ಬಂದು ದೇಶದ ಜನರ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದರೆ ಕೋವಿಡ್ ಸೆಸ್ ವಿಧಿಸುವ ಮೂಲಕ ಸಂಪನ್ಮೂಲ ಸಂಗ್ರಹಿಸಿ ಜನರ ಪ್ರಾಣ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಬೃಹತ್ ಬಂಡವಾಳಗಾರರ ಮೇಲೆ ಸೆಸ್ ವಿಧಿಸಬೇಕು. ದೊಡ್ಡ ಯೋಜನೆ ಕೈಬಿಟ್ಟು ಕೋವಿಡ್ ನಿಯಂತ್ರಣಕ್ಕೆ ಬಳಸಬೇಕು ಎಂದು ಒತ್ತಾಯಿಸಿದರು.

ಕುಂಚಿಟಿಗರ ಮಹಾಸಂಸ್ಥಾನದ ಪೀಠಾಧಿಪತಿ ಹನುಮಂತನಾಥ ಸ್ವಾಮೀಜಿ, ‘ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಬೆಂಗಳೂರಿನಲ್ಲಿ ಸಚಿವರು ಆಸ್ಪತ್ರೆ ಬದಲು ಸ್ಮಶಾನ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ, ಇಒ ಜೈಪಾಲ್, ಟಿಎಚ್‍ಒ ಮೋಹನ್, ಜೆಡಿಎಸ್ ಮುಖಂಡರಾದ ರಾಮಚಂದ್ರಯ್ಯ, ಸಿರಾಕ್ ರವಿ, ಪಾಲನೇತ್ರಯ್ಯ, ತನ್ವೀರ್, ಬೆಳಗುಂಬ ವೆಂಕಟೇಶ್, ಹೆತ್ತೇನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT