ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡಾಧಿಕಾರಿಯಾದ ರೈತನ ಮಗ

Last Updated 26 ಡಿಸೆಂಬರ್ 2019, 9:58 IST
ಅಕ್ಷರ ಗಾತ್ರ

ತಿಪಟೂರು: ಗ್ರಾಮೀಣ ಪ್ರದೇಶದ ಕುಗ್ರಾಮ ಕೊಬ್ಬರಿದೊಡ್ಡಯ್ಯನ ಪಾಳ್ಯದ (ತಾಂಡ್ಯ) ಕೃಷಿಕ ಕುಟುಂಬದ ನಾಗರಾಜು, ನಾಗರತ್ನ ದಂಪತಿ ಪುತ್ರ ಲೋಕೇಶ್.ಕೆ.ಎನ್. ಬಡತನದ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ನಗರದ ಠಾಗೂರು ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ , ಪದವಿಪೂರ್ವ ಶಿಕ್ಷಣ ಎಸ್.ವಿ.ಪಿ.ಕಾಲೇಜಿನಲ್ಲಿ ಪಡೆದು, ಇಂಜಿನಿಯರಿಂಗ್ ಶಿಕ್ಷಣವನ್ನು ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಪಡೆದಿದ್ದಾರೆ.

ಸಾಧಿಸುವ ಹಂಬಲದಿಂದ ಭಾರತೀಯ ಆಡಳಿತ ಸೇವೆ (ಐಎಎಸ್) ಪರೀಕ್ಷೆ ಬರೆಯಲು ದೆಹಲಿಯಲ್ಲಿ ತರಬೇತಿ ಪಡೆದು ಸತತವಾಗಿ 4 ಬಾರಿ ಮುಖ್ಯಪರೀಕ್ಷೆಯನ್ನು ಬರೆದು ಕಡಿಮೆ ಅಂಕಗಳ ಅಂತರದಲ್ಲಿ ಅವಕಾಶ ವಂಚಿತರಾಗಿದ್ದರು. ನಂತರದಲ್ಲಿ ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯನ್ನು ತೆಗೆದುಕೊಂಡು ತಮ್ಮ ದೃಢ ಸಂಕಲ್ಪದಿಂದ ಅಧ್ಯಯನ ಮಾಡಿ ಎರಡನೆಯ ಯತ್ನದಲ್ಲಿ ಸಫಲರಾಗಿದ್ದಾರೆ. ಪ್ರಸ್ತುತ ತಹಶೀಲ್ದಾರರಾಗಿ ನೇಮಕಗೊಂಡಿದ್ದಾರೆ.

ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಛಲದಿಂದ ಸ್ಫರ್ಧಾತ್ಮಕ ಮನೋಭಾವನೆ ಮೈಗೂಡಿಸಿಕೊಂಡು ಸೋಲನ್ನು ಸವಾಲನ್ನಾಗಿ ಸ್ವೀಕರಿಸಿ ಧೈರ್ಯಗುಂದದೇ ಮುನ್ನುಗ್ಗಿದಲ್ಲಿ ಸಾಧನೆ ಸುಲಭ ಎನ್ನುತ್ತಾರೆ ಲೋಕೇಶ್‌.

ಗುರುವಿಲ್ಲದೆ ಗುರಿ ಮುಟ್ಟಿದ ಪ್ರತಿಭೆ


ತಿಪಟೂರು: ತಾಲ್ಲೂಕಿನ ಹುಚ್ಚಗೊಂಡನಹಳ್ಳಿಯ ಬಸವಲಿಂಗಯ್ಯನವರ ಪುತ್ರ ವಿವೇಕ್.ಎಚ್.ಬಿ. ಪ್ರೌಢಶಿಕ್ಷಣವನ್ನು ನಳಂದ ಪ್ರೌಢಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ಕಲ್ಪತರು ಕಾಲೇಜಿನಲ್ಲಿ ಪಡೆದು ಅನಂತರ ಬೆಂಗಳೂರಿನ ಪಿ.ಇ.ಎಸ್. ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ್ದಾರೆ.

ನಂತರ ಸ್ಫರ್ಧಾತ್ಮಕ ಪರೀಕ್ಷೆಗಳ ಕನಸು ಹೊತ್ತ ಇವರು ಐ.ಎ.ಎಸ್. ಮತ್ತು ಕೆ.ಎ.ಎಸ್. ಪರೀಕ್ಷೆ ಬರೆಯಲು ತರಬೇತಿ ಕೇಂದ್ರಗಳಿಗೆ ತೆರಳದೆ ಮನೆಯಲ್ಲಿಯೇ ಪುಸ್ತಕಗಳನ್ನು ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಐಎಎಸ್‍ನಲ್ಲಿ ತೇರ್ಗಡೆ ಹೊಂದಿದ್ದ ಇವರು ಯೂನಿಯನ್ ಪಬ್ಲಕ್ ಸರ್ವಿಸ್‌ ಕಮಿಷನ್ ಇಲಾಖೆಯಲ್ಲಿ ಕಾರ್ಯ ನಿರ್ವಯಿಸುತ್ತಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ಅಂತರ್ಜಾಲ ಹಾಗೂ ಇತರೆ ಮೂಲಗಳಿಂದ ಲಭಿಸುವ ಎಲ್ಲ ಮಾಹಿತಿ ಸಂಗ್ರಹಿಸಿ ಶ್ರದ್ಧೆಯಿಂದ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡರೆ ಉತ್ತಮ ಪ್ರತಿಫಲ ಗಳಿಸಬಹುದು ಎನ್ನುತ್ತಾರೆ ವಿವೇಕ್‌.

ಮೊದಲ ಪ್ರಯತ್ನದಲ್ಲೆ ಗೆಲುವು

ತಿಪಟೂರು: ಕೆಪಿಎಸ್‍ಸಿ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಯಾದ ಅನನ್ಯ ಉಪೇಂದ್ ಅವರು ಉಪೇಂದ್ರ ಹಾಗೂ ಪೂರ್ಣಾದೇವಿ ಪುತ್ರಿ.

ಪ್ರಾಥಮಿಕ ಶಿಕ್ಷಣವನ್ನು ಡಫೋಡಿಲ್ಸ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣ ಕಲ್ಪತರು ಕಾಲೇಜು, ಎಂಜನಿಯರಿಂಗ್ ಪದವಿಯನ್ನು ದಾವಣಗೆರೆಯ ಬಿ.ಐ.ಇ.ಟಿ.ಕಾಲೇಜಿನಲ್ಲಿ, ಎಂ.ಟೆಕ್ ಪದವಿಯನ್ನು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಲ್ಲಿ ಪಡೆದು ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ನನ್ನ ಸಾಧನೆಗೆ ಪೋಷಕರ ಸಹಕಾರವೇ ಕಾರಣ. ಅವರಿಂದ ಸಾಹಿತ್ಯ ಸ್ಪೂರ್ತಿ ಪಡೆದೆ. ನಿತ್ಯದ ವಿದ್ಯಮಾನಗಳ ಅರಿವಿನ ಜೊತೆಗೆ ಆಯೋಗವು ಪರೀಕ್ಷೆಗೆ ನಿಗಧಿ ಪಡಿಸಿದ ಪಠ್ಯಕ್ರಮದ ಅಧ್ಯಯನವನ್ನು ಕ್ರಮ ಬದ್ಧವಾಗಿ ನಡೆಸಿದ್ದರಿಂದ ನನಗೆ ಯಶಸ್ಸನ್ನು ಗಳಿಸಲು ಸಾಧ್ಯವಾಯಿತು. ನಿತ್ಯದ ಸುದ್ದಿ ಪತ್ರಿಕೆಗಳನ್ನು ತಪ್ಪದೇ ಓದುವ, ಅಧ್ಯಯನಕ್ಕೆ ಅವಶ್ಯಕವಾದ ಸಕಾರಾತ್ಮಕ ವಿಚಾರಗಳ ಕಡೆ ಚಿತ್ತ ಹರಿಸಿದರೆ ಜಯವನ್ನು ಸುಲಭವಾಗಿ ಸಾಧಿಸಬಹುದು’ ಎನ್ನುವುದು ಅನನ್ಯ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT