ತುಮಕೂರು: ಜಿಲ್ಲೆಯಲ್ಲಿ ಕಾಡಲಿದೆಯೇ ಮತ್ತಷ್ಟು ಬರ?

7
ಬೆಳೆ ನಷ್ಟಕ್ಕೆ ರೈತರ ತತ್ತರ; ಕೃಷಿ ಇಲಾಖೆಯ ಅನೌಪಚಾರಿಕ ಸಮೀಕ್ಷೆಯ ಪ್ರಕಾರವೇ 77,426 ಹೆಕ್ಟೇರ್ ಬೆಳೆ ನಷ್ಟ

ತುಮಕೂರು: ಜಿಲ್ಲೆಯಲ್ಲಿ ಕಾಡಲಿದೆಯೇ ಮತ್ತಷ್ಟು ಬರ?

Published:
Updated:
Deccan Herald

ತುಮಕೂರು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಈ ಬೆಳೆ ನಷ್ಟದ ಜತೆಯಲ್ಲಿಯೇ ಬರದ ಛಾಯೆ ದಟ್ಟವಾಗಿಯೇ ಆವರಿಸುತ್ತಿದೆ. ಎರಡು ವರ್ಷಗಳ ಹಿಂದೆ ರಾಜ್ಯ ಬರದಿಂದ ತತ್ತರಿಸಿದ್ದಾಗ ಜಿಲ್ಲೆಯೂ ಇದಕ್ಕೆ ತತ್ತರಿಸಿತ್ತು. ಜಿಲ್ಲಾಡಳಿತದಿಂದ ಗೋಶಾಲೆಗಳು ಆರಂಭವಾಗಿದ್ದವು.

ಬರುವ ದಿನಗಳಲ್ಲಿ ಮಳೆಯಾಗದಿದ್ದರೆ ಇಂತಹದ್ದೇ ಸ್ಥಿತಿಯನ್ನು ಮತ್ತೆ ಎದುರಿಸಬೇಕಾಗುತ್ತದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ ಭಾಗಗಳಲ್ಲಿ ರಾಗಿ ಪೂರ್ಣವಾಗಿ ನೆಲಕಚ್ಚಿದೆ. ಪಾವಗಡ, ಮಧುಗಿರಿ, ಶಿರಾ ಭಾಗದಲ್ಲಿ ಶೇಂಗಾ ಬಿತ್ತಿದ್ದ ರೈತರಿಗೆ ಕನಿಷ್ಠ ಬಂಡವಾಳವೂ ವಾಪಸ್ ಬಾರದ ಸ್ಥಿತಿ ಇದೆ. ಬೆಳೆಗಳು ಪೂರ್ಣವಾಗಿ ನಾಶವಾಗುವಷ್ಟರಲ್ಲಿ ಸ್ವಲ್ಪ ಮಳೆ ಸುರಿದರೂ ಯಾವುದೇ ಉಪಯೋಗವಾಗದ ಸ್ಥಿತಿ ಇದೆ.

ಈ ವರ್ಷ ಸದ್ಯದ ಮಟ್ಟಿಗೆ ಜಾನುವಾರುಗಳ ಮೇವಿಗೆ ತೊಂದರೆ ಕಾಣುತ್ತಿಲ್ಲ ಎನಿಸಿದರೂ ಇದೇ ರೀತಿಯಲ್ಲಿ ಮಳೆ ಕೈಕೊಟ್ಟರೆ ಡಿಸೆಂಬರ್ ನಂತರ ಮೇವಿನ ಸಮಸ್ಯೆಯೂ ಉಲ್ಬಣಿಸಲಿದೆ. ಕೃಷಿ ಇಲಾಖೆಯ ಅನೌಪಚಾರಿಕ ಸಮೀಕ್ಷೆಯ ಪ್ರಕಾರವೇ 77,426 ಹೆಕ್ಟೇರ್ ಬೆಳೆ ನಷ್ಟವಾಗಿದೆ. ವಾಸ್ತವವಾಗಿ ಸಮೀಕ್ಷೆ ಕೈಗೊಂಡರೆ ಈ ಪ್ರಮಾಣ ದುಪ್ಪಟ್ಟಾಗುವ ಸಾಧ್ಯತೆ ಹೆಚ್ಚಿದೆ.

ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 4,17,843 ಹೆಕ್ಟೇರ್‌ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಸಾಧ್ಯವಾಗಿದ್ದು 2,18,572 ಹೆಕ್ಟೇರ್. 41,338 ಹೆಕ್ಟೇರ್ ಪ್ರದೇಶದಲ್ಲಿ ಶೇ 50ಕ್ಕಿಂತಲೂ ಹೆಚ್ಚಿನ ಬೆಳೆ ಹಾನಿಯಾಗಿದೆ. ಇದು ಕೃಷಿ ಇಲಾಖೆಯ ಸದ್ಯದ ಅಂಕಿ ಅಂಶಗಳ ಮಾಹಿತಿ. ರೈತರ ಜಮೀನುಗಳಿಗೆ ತೆರಳಿ ವಾಸ್ತವವಾಗಿ ಸಮೀಕ್ಷೆ ನಡೆಸಿದರೆ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಸಮೀಕ್ಷೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದರು. ಜಿಲ್ಲಾಡಳಿತದ ಮೂಲಗಳ ಪ್ರಕಾರ ಮುಂದಿನ ವಾರದಿಂದಲೇ ಅಧಿಕಾರಿಗಳು ಸಮೀಕ್ಷೆ ನಡೆಸುವರು.

ಈಗಾಗಲೇ ಬೆಳೆ ಪರಿಹಾರಕ್ಕೆ ₹ 46 ಕೋಟಿ ಇನ್‌ಪುಟ್ ಸಬ್ಸಿಡಿ ನೀಡುವಂತೆ ಜಿಲ್ಲಾ ಕೃಷಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗಿದೆ. 28,368 ಹೆಕ್ಟೇರ್ ರಾಗಿ, 33,991 ಹೆಕ್ಟೇರ್ ಶೇಂಗಾ ನೆಲಕಚ್ಚಿದೆ.

ಸದ್ಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 18 ಸಾವಿರ, ಶಿರಾ 15 ಸಾವಿರ, ಪಾವಗಡ 17 ಸಾವಿರ, ಮಧುಗಿರಿ 8 ಸಾವಿರ, ತಿಪಟೂರು 2.5 ಸಾವಿರ ಹೆಕ್ಟೇರ್ ಬೆಳೆಹಾನಿ ಸಂಭವಿಸಿದೆ. ಈ ಚಿತ್ರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹೇಮಾವತಿ ನೀರನ್ನು ಪ್ರಮುಖವಾಗಿ ಆಶ್ರಯಿಸಿರುವ ಗುಬ್ಬಿ, ತುರುವೇಕೆರೆ, ಕುಣಿಗಲ್ ಮತ್ತು ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿ ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಬರದ ಛಾಯೆ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !