ತುಮಕೂರು: ಜಂತ್‌ಕಲ್ ಗಣಿ ಗುತ್ತಿಗೆ ಆದೇಶ ಪತ್ರಕ್ಕೆ ತಮ್ಮ ಸಹಿ ನಕಲು ಮಾಡಲಾಗಿದೆ ಎಂದು ಹೇಳಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ತನಿಖೆ ಮಾಡಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪೊಲೀಸರಿಗೆ ದೂರು ಕೊಟ್ಟರೆ ತನಿಖೆ ಮಾಡುತ್ತಾರೆ. ನಂತರ ಸತ್ಯಾಂಶ ಹೊರ ಬರಲಿದೆ ಎಂದರು.
‘ರಾಜ್ಯಪಾಲರಿಗೆ ಬೆದರಿಕೆ ಇರುವ ಬಗ್ಗೆ ನನಗಾಗಲಿ ಇಲ್ಲವೇ ಡಿಜಿಪಿ ಅವರಿಗಾಗಲಿ ಮಾಹಿತಿ ಇಲ್ಲ. ಬುಲೆಟ್ ಪ್ರೂಫ್ ಕಾರು ಕೊಟ್ಟಿರುವುದು ಗಮನಕ್ಕೆ ಬಂದಿಲ್ಲ’ ಎಂದರು.
ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 25ಕ್ಕೂ ಹೆಚ್ಚು ಹಗರಣ ನಡೆದಿವೆ. ಕಾನೂನು ಚೌಕಟ್ಟಿನಲ್ಲಿ ತನಿಖೆ ಮಾಡಿಸಲಾಗುತ್ತಿದೆ. ವಿರೋಧ ಪಕ್ಷದವರೇ ರಾಜ್ಯಪಾಲರನ್ನು ಬಳಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.