ಮಂಗಳವಾರ, ಅಕ್ಟೋಬರ್ 15, 2019
28 °C

ಕಂದಾಯ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ

Published:
Updated:
Prajavani

ಕುಣಿಗಲ್: ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶದ ರೈತರು ತಮ್ಮ ಆಸ್ತಿ ದಾಖಲೆಗಳ ನಿರ್ವಹಣೆ ಕೊರತೆಯಿಂದಾಗಿ ತಲೆಮಾರುಗಳಿಂದ ಪರದಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕಂದಾಯ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯ ಹಮ್ಮಿಕೊಂಡಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.

ಅಮೃತೂರು ಹೋಬಳಿಯ ಸೆಣಬ ಕಂದಾಯ ವೃತ್ತದ ಕುಪ್ಪೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಬರುತ್ತಿದ್ದು, ರೈತರು ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ. ದಾಖಲೆಗಳು ಸರಿಯಾಗಿದ್ದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ಇಲಾಖೆ ಮತ್ತು ರೈತರ ನಡುವೆ ಅಂತರ ಹೆಚ್ಚಾಗಿದೆ. ರೈತರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಮಧ್ಯವರ್ತಿಗಳ ಮೂಲಕ ಬಾರದೆ ನೇರವಾಗಿ ಸಂಪರ್ಕಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.

ಈಗಾಗಲೇ ತಾವರೆಕೆರೆಯಲ್ಲಿ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಅಮೃತೂರು ಹೋಬಳಿಯಲ್ಲಿ ಜನನ ಮರಣ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ಪಡೆಯಲಾಗದೆ ಸಮಸ್ಯೆಗಳು ಹೆಚ್ಚಾಗಿದ್ದು, ವ್ಯವಸ್ಥಿತ ಕಾರ್ಯಕ್ರಮ ರೂಪಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕಂದಾಯ ಅದಾಲತ್‌ನಲ್ಲಿ 13 ಸಾಮಾನ್ಯ ಅರ್ಜಿ, ತಿದ್ದುಪಡಿಯ 23, ಖಾತೆ ಬದಲಾವಣೆ 25, ಪಿಂಚಣಿ 5 ಪಡಿತರ ಚೀಟಿಗಾಗಿ ಒಂದು ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ವಿನೋದ್ ತಿಳಿಸಿದ್ದಾರೆ.

Post Comments (+)