ಕುಣಿಗಲ್: ತಾಲ್ಲೂಕಿನ ಹುತ್ತಿಬೆಟ್ಟ ಪ್ರವಾಸೋದ್ಯಮ ಕೇಂದ್ರವನ್ನಾಗಿ ಘೋಷಣೆ ಮಾಡಬೇಕಿದೆ. ಅಭಿವೃದ್ಧಿ ನೆಪದಲ್ಲಿ ಅವ್ಯವಹಾರ ನಡೆದಿದೆ. ಸಂಬಂದಪಟ್ಟವರ ವಿರುದ್ಧ ಕ್ರಮತೆಗೆದುಕೊಳ್ಳುವಂತೆ ಹುತ್ರಿದುರ್ಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಡಿ.ಮಲ್ಲೇಶ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಇತಿಹಾಸ ಪ್ರಸಿದ್ಧ ಕೆಂಪೇಗೌಡರ ಆಳ್ವಿಕೆಯ ಹುತ್ರಿಬೆಟ್ಟವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿದೆ. ಒಟ್ಟು ₹9.73ಕೋಟಿ ವೆಚ್ಚದಲ್ಲಿ 6 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಈ ಪೈಕಿ ವಡಾಘಟ್ಟ ರಸ್ತೆಯಿಂದ ಹುತ್ರಿಬೆಟ್ಟಕ್ಕೆ 2ಕಿಮೀ ರಸ್ತೆಯನ್ನು ₹2.50 ಕೋಟಿ ವೆಚ್ಚದ ಕಾಮಗಾರಿ ನಡಯದೆ ಹಣ ಪಾವತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಂದಿನ ಸಚಿವ ಆನಂದ್ ಸಿಂಗ್ ಅವರಿಗೆ ದೂರು ನೀಡಲಾಗಿತ್ತು. ಅವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ವರದಿಗೆ ಸೂಚನೆ ನೀಡಿದ್ದರು.
ಕಾಮಗಾರಿ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿ ಅಜೇಯ್, ಕಾರ್ಯಪಾಲಕ ಎಂಜಿನಿಯರ್ ರಘುನಂದನ್, ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಗೌರಿ ಮತ್ತು ಕಾಮಗಾರಿ ಮೇಲ್ವಿಚಾರಕ ಪ್ರವೀಣ್ ತಂಡ (21-3-22 ರಂದು) ಕಾಮಗಾರಿ ಮುಗಿದಿರುವ ಬಗ್ಗೆ ವರದಿ ನೀಡಿದ್ದಾರೆ. ಆದರೆ, ಕಾಮಗಾರಿ ನಡೆದೆ ಇಲ್ಲ.
ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ವರ್ಗವಾಗಿ ಬಂದ ಸಹಾಯಕ ನಿರ್ದೇಶಕ ಶಶಿಕುಮಾರ್ ಪರಿಶೀಲನೆ ನಡೆಸಿ ನೀಡಿರುವ ವರದಿಯಲ್ಲಿ ಶೇ50 ಕಾಮಗಾರಿ ನಡೆದಿದೆ. ಶೇ90ರಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.
₹2.50 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಮಾಡದೆ ಬಿಲ್ ಪಾವತಿ ಮಾಡಿರುವುದರ ಜತೆಗೆ ₹25 ಲಕ್ಷ ವೆಚ್ಚದ ಪಾರ್ಕಿಂಗ್ ನಿರ್ಮಾಣ, ₹45 ಲಕ್ಷ ವೆಚ್ಚದ ಬಸ್ ನಿಲ್ದಾಣದ ಕಾಮಗಾರಿ ಮತ್ತು ₹38 ಲಕ್ಷ ವೆಚ್ಚದ ಎರಡು ಕೊಳವೆ ಬಾವಿ, ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲೂ ಅವ್ಯವಹಾರವಾಗಿದೆ. ಸಂಪೂರ್ಣ ತನಿಖೆ ನಡೆಸಿ, ಸಂಬಂದಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್.ಡಿ.ಮಲ್ಲೇಶ್ ತಿಳಿಸಿದ್ದಾರೆ.
Cut-off box - ಕ್ರಮ ಕೈಗೊಳ್ಳುವಂತೆ ಮನವಿ ಹುತ್ರಿಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ (12-8-24) ನಡೆಸಿದಾಗ ಶೇ 50 ಕಾಮಗಾರಿ ನಡೆದಿದೆ. ಶೇ90 ರಷ್ಟು ಅನುದಾನ ಈಗಾಗಲೇ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಗೆ ಬಿಡುಗಡೆಯಾಗಿರುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಇಲಾಖಾ ಕೇಂದ್ರ ಕಚೇರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶಶಿಕುಮಾರ್ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.