ಮಂಗಳವಾರ, ಜುಲೈ 14, 2020
28 °C
ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ

ದೊರೆಗೆ ಕೇಳದ ಅಲೆಮಾರಿಗಳ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಲಾಕ್‌ಡೌನ್ ಪರಿಣಾಮ ಅಲೆಮಾರಿ ಸಮುದಾಯದ ಬದುಕು ಮೂರಾಬಟ್ಟೆಯಾಗಿದ್ದು, ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಜಿಲ್ಲೆಯ ಅಲೆಮಾರಿ ಸಮುದಾಯಗಳು ಆಗ್ರಹಿಸಿವೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಅಲೆಮಾರಿಗಳು ಒಂದೆಡೆ ನೆಲೆನಿಂತಿರುವ ಜಿಲ್ಲೆಗಳಲ್ಲಿ ತುಮಕೂರು ಪ್ರಮುಖವಾದುದು. ರಾಜ್ಯದ ಅಲೆಮಾರಿ ಸಮುದಾಯಗಳ ಹೋರಾಟದಲ್ಲಿ ಚಿಕ್ಕನಾಯಕನಹಳ್ಳಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಅಲೆಮಾರಿ ಬುಡಕಟ್ಟು ಮಹಾಸಭಾ ಹುಟ್ಟಿಗೆ ಕಾರಣವಾದುದು ಈ ನೆಲದಲ್ಲಿಯೇ.

ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಲೆಮಾರಿ ಸಮುದಾಯದ ಜನರು ಇದ್ದಾರೆ. ಲಾಕ್‌ಡೌನ್ ಪರಿಣಾಮ ಈ ಸಮುದಾಯ ಕಷ್ಟಕ್ಕೆ ಸಿಲುಕಿದೆ.

ತಲೆ ಕೂದಲು ಸಂಗ್ರಹ, ಬಾಚಣಿಗೆ ಮಾರಾಟ ಹೀಗೆ ಸಣ್ಣಪುಟ್ಟ ಕಸುಬುಗಳನ್ನು ಮಾಡುತ್ತ ಊರೂರು ಅಲೆಯುವ ಈ ಜನರು ಬೆಳಿಗ್ಗೆ ಮತ್ತು ಮಧ್ಯಾಹ್ನ ಹಳ್ಳಿಗಳಲ್ಲಿ ಬೇಡಿ ತಿನ್ನುತ್ತಾರೆ. ರಾತ್ರಿ ಮಾತ್ರ ಊಟಕ್ಕೆ ಮನೆ ಸೇರುತ್ತಾರೆ. ಲಾಕ್‌ಡೌನ್
ಪರಿಣಾಮ ಮೂರು ಹೊತ್ತಿನ ಊಟವನ್ನೂ ಈಗ ಮನೆಗಳಲ್ಲಿಯೇ ಉಣ್ಣಬೇಕಿದೆ.

ಲಾಕ್‌ಡೌನ್ ಆರಂಭದಲ್ಲಿ ಅಕ್ಕಿ, ಬೇಳೆಗಳನ್ನು ಸ್ವಯಂಸೇವಾ ಸಂಸ್ಥೆಗಳು ಸೇರಿದಂತೆ ಕೆಲವರು ತಂದುಕೊಟ್ಟರು. ಆದರೆ ಮನೆತುಂಬಾ ಮಕ್ಕಳನ್ನು ಹೊಂದಿರುವ ಈ ಸಮುದಾಯಕ್ಕೆ ಇದು ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಆಯಿತು. ಅಕ್ಕಿ ಮಾತ್ರ ಮನೆಗಳಲ್ಲಿ ಸಂಗ್ರಹವಾಯಿತು. ಆದರೆ ಅಡುಗೆಗೆ ಅಗತ್ಯ ಸಾಮಗ್ರಿಗಳನ್ನು ಕೊಳ್ಳುವ ಶಕ್ತಿ ಇಲ್ಲವಾಯಿತು.

ತಮ್ಮ ಸಂಕಷ್ಟಗಳನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂದಿಜೋಗಿ ರಾಜಪ್ಪ ಪತ್ರ ಬರೆದಿದ್ದಾರೆ.

‘ಹಳ್ಳಿಗಳಿಂದ ಹಳ್ಳಿಗೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ತಿರುಗಾಡುತ್ತಿದ್ದೆವು. ಈಗ ಹಳ್ಳಿಗಳೇ ಮುಚ್ಚಿವೆ. ಭಿಕ್ಷೆ ಬೇಡಿ ಬದುಕುವುದಕ್ಕೂ ಅವಕಾಶವಿಲ್ಲ. ನಮ್ಮಲ್ಲಿ ಇನ್ನೂ ಅನೇಕರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲ. ನಮ್ಮ ಮನವಿ ಪರಿಗಣಿಸಿ ಅಲೆಮಾರಿ ಸಮುದಾಯದ ಪ್ರತಿ ವ್ಯಕ್ತಿಗೆ ಕನಿಷ್ಠ ₹ 10 ಸಾವಿರ ಪರಿಹಾರ ಧನ ನೀಡಿ’ ಎಂದು ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು