ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ ಕುರುಬರ ಸಮಾವೇಶ

ಮೈತ್ರಿ ಅಭ್ಯರ್ಥಿಗೆ ಬೆಂಬಲ; ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಸಿ.ಬಿ.ಸುರೇಶ್ ಬಾಬು
Last Updated 11 ಏಪ್ರಿಲ್ 2019, 17:49 IST
ಅಕ್ಷರ ಗಾತ್ರ

ತುಮಕೂರು: ‘ಕುರುಬ ಸಮುದಾಯ ಸಂಘಟನೆ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಸಮುದಾಯದ ಬೆಂಬಲ ಸೂಚಿಸಲು ಏಪ್ರಿಲ್ 13ರಂದು ನಗರದ ಗ್ರಂಥಾಲಯ ಆವರಣದಲ್ಲಿ ಸಂಜೆ 4 ಗಂಟೆಗೆ ಕುರುಬ ಸಮುದಾಯದ ಸಮಾವೇಶ ಆಯೋಜಿಸಲಾಗಿದೆ' ಎಂದು ಮಾಜಿ ಶಾಸಕ, ಜೆಡಿಎಸ್ ಹಾಗೂ ಕುರುಬ ಸಮುದಾಯದ ಮುಖಂಡ ಸಿ.ಬಿ.ಸುರೇಶ್‌ ಬಾಬು ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕುರುಬ ಸಮುದಾಯದ ಮುಖಂಡರ ನೇತೃತ್ವದಲ್ಲಿ ಸಮುದಾಯದ ಶಕ್ತಿ ಪ್ರದರ್ಶನ ನಡೆಯಲಿದೆ’ ಎಂದು ಹೇಳಿದರು.

'ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ವಿಶ್ವನಾಥ್,ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವರು. ಸಿದ್ದರಾಮಯ್ಯ ಅವರೇ ಈ ಸಮಾವೇಶಕ್ಕೆ ಬೆಂಬಲವಾಗಿ ನಿಂತಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನೇತೃತ್ವ ವಹಿಸಲಿದ್ದಾರೆ' ಎಂದು ಹೇಳಿದರು.

'ಬಿಜೆಪಿ ಪಕ್ಷದವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರಿಗೆ ಒಂದು ಕಡೆಗೂ ಟಿಕೆಟ್ ಕೊಟ್ಟಿಲ್ಲ. ಎಲ್ಲ ಸಮುದಾಯಗಳ ಬಗ್ಗೆ ಎಷ್ಟು ಕಾಳಜಿ ಆ ಪಕ್ಷಕ್ಕೆ ಇದೆ ಎಂಬುದನ್ನು ತೋರಿಸಿಕೊಡುತ್ತದೆ. ಆ ಪಕ್ಷದ ಮುಖಂಡರಾದ ಕುರುಬ ಸಮುದಾಯದ ಕೆ.ಎಸ್. ಈಶ್ವರಪ್ಪ ಅವರೇ ಈ ಕುರಿತು ಹಿಂದುಳಿದ ವರ್ಗದವರಿಗೆ ಅದರಲ್ಲೂ ಕುರುಬ ಸಮುದಾಯಕ್ಕೆ ಸ್ಪಷ್ಟೀಕರಣ ನೀಡಬೇಕಾಗುತ್ತದೆ' ಎಂದು ಹೇಳಿದರು.

‘ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರು ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿಲ್ಲ. ಈ ಕುರಿತು ಈಗಾಗಲೇ ಅವರೂ ಸ್ಪಷ್ಟಪಡಿಸಿದ್ದಾರೆ. ಏನೇನು ಪ್ರಯತ್ನ ಆಗಿತ್ತು ಎಂಬುದೂ ಗಮನಕ್ಕೆ ಇದೆ’ ಎಂದು ತಿಳಿಸಿದರು.

’ಲಿಂಕ್ ಕೆನಾಲ್ ನಿರ್ಮಾಣ ಕುರಿತು ಈಗಾಗಲೇ ನಾವೂ ಕೂಡಾ ವಿರೋಧ ವ್ಯಕ್ತಪಡಿಸಿದ್ದೇವೆ. ತುಮಕೂರು ಜಿಲ್ಲೆಗೆ ನಿಗದಿಪಡಿಸಿದ ನೀರನ್ನು ನಾವೂ ಕೂಡಾ ಬೇರೆಯವರಿಗೆ ಕೊಡುವುದಿಲ್ಲ. ಯಾವ ಹಂತದಲ್ಲಿ, ಯಾರ ಮುಂದೆ ಗಮನಕ್ಕೆ ಈ ವಿಷಯ ತರಬೇಕಿತ್ತೋ ಅದನ್ನು ತಂದು ಮನವರಿಕೆ ಮಾಡಿಕೊಟ್ಟಿದ್ದೇವೆ' ಎಂದು ಸುರೇಶ್‌ ಬಾಬು ತಿಳಿಸಿದರು.

'ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಸಹಜವಾದುದು. ಆದರೆ, ಕೀಳುಮಟ್ಟದ ರಾಜಕೀಯ ಮಾಡುವುದು, ತೀರಾ ವೈಯಕ್ತಿಕ ನೆಲೆಗಟ್ಟಿನ ವಿಚಾರಗಳನ್ನು ಮಾತನಾಡುವುದು ಯಾರಿಗೂ ಶೋಭೆ ತರುವಂಥದ್ದಲ್ಲ' ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಿವಮೂರ್ತಿ, ಮೈಲಾರಪ್ಪ, ಲಕ್ಷ್ಮೀ ನರಸಿಂಹರಾಜು, ಮಂಜುನಾಥ್, ಚಿಕ್ಕವೆಂಟಕಯ್ಯ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT