ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ನಮ್ಮ ಕ್ಲಿನಿಕ್‌’ನಲ್ಲಿ ಸೌಲಭ್ಯ ಕೊರತೆ

Last Updated 1 ಮಾರ್ಚ್ 2023, 14:28 IST
ಅಕ್ಷರ ಗಾತ್ರ

ತುಮಕೂರು: ಸಾರ್ವಜನಿಕರಿಗೆ ‘ವಿಶ್ವದರ್ಜೆ’ಯ ಚಿಕಿತ್ಸೆ ನೀಡುವ ಉದ್ದೇಶದಿಂದ ಆರಂಭಿಸಿರುವ ‘ನಮ್ಮ ಕ್ಲಿನಿಕ್‌’ಗಳಲ್ಲಿ ಅಗತ್ಯ ಔಷಧಿಯೇ ಸಿಗುತ್ತಿಲ್ಲ!

ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕರ ಹಣದ ಖರ್ಚು ಕಡಿಮೆ ಮಾಡಿ, ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳ ಮೇಲಿನ ಒತ್ತಡ ತಗ್ಗಿಸುವುದು. ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸಲಾಗಿದೆ. ಜನರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಭರವಸೆಯನ್ನು ನೀಡಲಾಗಿತ್ತು. ಇನ್ನೂ ಸಾಕಷ್ಟು ಕಡೆಗಳಲ್ಲಿ ಕ್ಲಿನಿಕ್‌ಗಳು ಆರಂಭವಾಗಿಲ್ಲ. ಪ್ರಾರಂಭ ಆಗಿರುವ ಕಡೆಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ.

ಜನರು ಕ್ಲಿನಿಕ್‌ಗಳತ್ತ ಬರುತ್ತಿದ್ದರೂ ಅಗತ್ಯ ಔಷಧಿಗಳು ಸಿಗುತ್ತಿಲ್ಲ. ಕ್ಲಿನಿಕ್‌ಗಳಲ್ಲಿ ಯೋಗ ಶಿಬಿರ ಮಾಡುವ ಉದ್ದೇಶ ಹೊಂದಿದ್ದು, ಈವರೆಗೂ ಯೋಗ ಶಿಕ್ಷಕರನ್ನು ನೇಮಿಸಿಲ್ಲ. ಅಗತ್ಯ ಸಿಬ್ಬಂದಿಯ ಕೊರತೆಯೂ ಇದೆ. ಯಾವ ರೋಗಗಳಿಗೆ ಚಿಕಿತ್ಸೆ ದೊರೆಯುತ್ತದೆ ಎಂಬ ಬಗ್ಗೆಯೂ ನಾಮಫಲಕ ಅಳವಡಿಸಿಲ್ಲ. ವೈದ್ಯರ ಹೆಸರು, ಲಭ್ಯವಿರುವ ಔಷಧಗಳ ವಿವರವೂ ಕ್ಲಿನಿಕ್‌ಗಳಲ್ಲಿ ಕಾಣಿಸುತ್ತಿಲ್ಲ.

ಮೇಳೆಕೋಟೆಯ ಕ್ಲಿನಿಕ್‌ ತುಂಬಾ ಚಿಕ್ಕದಾಗಿದ್ದು, ಔಷಧಿ ಸಂಗ್ರಹಕ್ಕೂ ಸಾಧ್ಯವಾಗುತ್ತಿಲ್ಲ. ಇಲ್ಲಿ ಕೆಲಸಕ್ಕೆ ನೇಮಕವಾಗಿದ್ದ ಲ್ಯಾಬ್‌ ಟೆಕ್ನೀಷಿಯನ್‌ ಕಳೆದ 20 ದಿನಗಳಿಂದ ಕರ್ತವ್ಯಕ್ಕೆ ಗೈರಾಗಿದ್ದು, ಆರೋಗ್ಯ ಸೇವೆ ಸಿಗುತ್ತಿಲ್ಲ. ರೋಗಿಗಳ ವಿಶ್ರಾಂತಿಗೆ ಯಾವುದೇ ವ್ಯವಸ್ಥೆಯೂ ಇಲ್ಲ.

ಪಾವಗಡ ಪಟ್ಟಣದ ಕ್ಲಿನಿಕ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ವೈದ್ಯರು ಕರ್ತವ್ಯಕ್ಕೆ ಬಂದಿಲ್ಲ. ಕ್ಲಿನಿಕ್‌ಗೆ ಬರುವ ಜನರು ವೈದ್ಯರಿಲ್ಲದೆ ವಾಪಸಾಗುತ್ತಿದ್ದಾರೆ. ಜ್ವರ, ಕೆಮ್ಮು, ಇತರೆ ಸಣ್ಣಪುಟ್ಟ ರೋಗಗಳಿಗೆ ಮಾತ್ರ ಮಾತ್ರೆ ನೀಡುತ್ತಿದ್ದಾರೆ. ಬಿ.ಪಿ, ಮಧುಮೇಹ ತಪಾಸಣೆ ನಡೆಯುತ್ತಿದ್ದು, ಔಷಧಿ ವಿತರಣೆಯಾಗುತ್ತಿಲ್ಲ. ಚೀಟಿ ಬರೆದುಕೊಟ್ಟು ಹೊರಗಡೆ ತೆಗೆದುಕೊಳ್ಳುವಂತೆ ಸೂಚಿಸುತ್ತಿದ್ದಾರೆ.

10 ಘೋಷಣೆ: 5 ಆರಂಭ

ಜಿಲ್ಲೆಯಲ್ಲಿ ಒಟ್ಟು 10 ಕಡೆಗಳಲ್ಲಿ ‘ನಮ್ಮ ಕ್ಲಿನಿಕ್‌’ ಆರಂಭಿಸುವ ಗುರಿ ಹೊಂದಿದ್ದು, ಈಗಾಗಲೇ 5 ಕಡೆಗಳಲ್ಲಿ ಪ್ರಾರಂಭವಾಗಿದೆ. ನಗರದ ಮರಳೂರುದಿಣ್ಣೆ, ಮೇಳೆಕೋಟೆ ಹಾಗೂ ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ 1 ಕ್ಲಿನಿಕ್‍ ತೆರೆಯಲಾಗಿದೆ.

ಜಯಪುರ ಅಂಗನವಾಡಿ, ದೇವರಾಯಪಟ್ಟಣ ಸಮುದಾಯ ಭವನ, ದಿಬ್ಬೂರು ಅಂಗನವಾಡಿ, ಸತ್ಯಮಂಗಲ ಸಮುದಾಯ ಭವನ, ಕೆ.ಆರ್. ಬಡಾವಣೆಯಲ್ಲಿ ಇನ್ನೂ ಕ್ಲಿನಿಕ್‌ಗಳು ಆರಂಭವಾಗಿಲ್ಲ.

ಅಗತ್ಯ ಸಿಬ್ಬಂದಿ ಇಲ್ಲ

ಔಷಧ ವಿತರಣಾ ಕೊಠಡಿ, ಶೌಚಾಲಯ, ಪ್ರಯೋಗಾಲಯ, ವೈದ್ಯಾಧಿಕಾರಿಗಳ ಕಚೇರಿ, ಆಡಳಿತ ಕಚೇರಿ, ಒಳಗೊಂಡಂತೆ ಸುಸಜ್ಜಿತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಅಗತ್ಯ ಸಿಬ್ಬಂದಿ ಇಲ್ಲವಾಗಿದೆ.

ಒಬ್ಬ ವೈದ್ಯ, ಶುಶ್ರೂಷಕಿ, ಲ್ಯಾಬ್‌ ಟೆಕ್ನೀಷಿಯನ್‌, ಗ್ರೂಪ್‌ ಡಿ ಸಿಬ್ಬಂದಿ ಕ್ಲಿನಿಕ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಜನರಿಂದ ಕ್ಲಿನಿಕ್‌ ನಡೆಯುತ್ತಿದೆ. ಪ್ರತಿ ದಿನ 50ರಿಂದ 60 ಜನ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದು, ಎಲ್ಲರ ಆರೋಗ್ಯ ತಪಾಸಣೆಯೂ ಕಷ್ಟವಾಗುತ್ತಿದೆ. ತಜ್ಞ ವೈದ್ಯರು ಒಳಗೊಂಡಂತೆ ಬೇಕಾದ ಸಿಬ್ಬಂದಿ ನಿಯೋಜನೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

**

ಅಗತ್ಯ ಔಷಧಿ ಪೂರೈಕೆ
ನಮ್ಮ ಕ್ಲಿನಿಕ್‌ಗಳಿಗೆ ಅಗತ್ಯ ಔಷಧಿ ಪೂರೈಸಲಾಗುತ್ತಿದೆ. ಜನರಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಆದ್ಯತೆ. ಶೀಘ್ರ ವೈದ್ಯರ ನೇಮಕವೂ ಆಗಲಿದೆ. ಉಳಿದ ಕ್ಲಿನಿಕ್‌ಗಳಿಗೆ ಆದಷ್ಟು ಬೇಗ ಚಾಲನೆ ನೀಡಲಾಗುತ್ತದೆ.
-ಡಾ.ಡಿ.ಎನ್‌.ಮಂಜುನಾಥ್‌, ಡಿಎಚ್‌ಒ

**

ದೊಡ್ಡಾಸ್ಪತ್ರೆಗೆ ಕಳುಹಿಸುತ್ತಾರೆ
ಕ್ಲಿನಿಕ್‌ನಲ್ಲಿ ಪರೀಕ್ಷೆ ನಡೆಸಿದರೂ ಔಷಧಿ ಕೊಡುವುದಿಲ್ಲ. ದೊಡ್ಡಾಸ್ಪತ್ರೆಗೆ ಹೋಗುವಂತೆ ಹೇಳುತ್ತಿದ್ದಾರೆ. ಅಲ್ಲಿಗೆ ಹೋಗುವ ಹಾಗಿದ್ದರೆ ಇಲ್ಲಿ ಕ್ಲಿನಿಕ್‌ ಏಕೆ ಆರಂಭಿಸಬೇಕಿತ್ತು. ಅಗತ್ಯ ಔಷಧಿಗಳು ಇಲ್ಲಿಯೇ ಸಿಗುವಂತಾಗಬೇಕು.
-ಕುಮಾರ್‌, ಮೇಳೆಕೋಟೆ

**

ರಾತ್ರಿ ತೆಗೆದರೆ ಉತ್ತಮ
ಬೆಳಿಗ್ಗೆ 9ರಿಂದ ಸಂಜೆ 4.30 ಗಂಟೆ ವರೆಗೆ ಮಾತ್ರ ಕ್ಲಿನಿಕ್‌ ತೆರೆದಿರುತ್ತದೆ. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಏನಾದರೂ ತುರ್ತಾಗಿ ಚಿಕಿತ್ಸೆ ಬೇಕಾದರೆ ಆಸ್ಪತ್ರೆಗಳಿಗೆ ಹೋಗಬೇಕು. ಇಂತಹ ಸಮಯದಲ್ಲಿ ಕನಿಷ್ಠ ಪ್ರಥಮ ಚಿಕಿತ್ಸೆ ನೀಡಲು ಕ್ಲಿನಿಕ್‌ ತೆಗೆದರೆ ಉತ್ತಮ.
-ಯೂಸಫ್‌, ಮರಳೂರುದಿಣ್ಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT