ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಳೆ: ಒಣಗುತ್ತಿದೆ ಬೆಳೆ

ಶಾಶ್ವತ ನೀರಾವರಿ ಸೌಲಭ್ಯ ಮರೀಚಿಕೆ: ಬಯಲು ಸೀಮೆ ರೈತರ ಸಂಕಷ್ಟ
Last Updated 26 ಸೆಪ್ಟೆಂಬರ್ 2021, 3:52 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಕೃಷಿಗೆ ಪೂರಕ ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲದೆ, ಇತರೆ ಉದ್ಯೋಗಗಳಿಗೆ ತೆರಳಲು ಕೈಗಾರಿಕೆಗಳು ಇಲ್ಲದೆ ಹೋಬಳಿಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಶಕಗಳಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ಬಯಲುಸೀಮೆ ರೈತರ ಬದುಕು ಮಳೆಯೊಂದಿಗಿನ ಜೂಜಾಟದಂತಾಗಿದೆ. ಮೊದಲೆಲ್ಲ ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಈ ಭಾಗದಲ್ಲಿ ಕುಡಿಯುವ ನೀರು ಮತ್ತು ಜೀವನ ನಡೆಸಲು ಜನರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ, ಬೆಳೆ ಕಡಿಮೆಯಾಗಿ ಜನ, ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.‌

ಜನಪ್ರತಿನಿಧಿಗಳು ಕೇವಲ ಸುಳ್ಳು ಭರವಸೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಆದರೆ ಶಾಶ್ವತ ಪರಿಹಾರ ಕಲ್ಪಿಸಲು ಮನಸ್ಸು ಮಾಡದ ಕಾರಣ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಧುಗಿರಿ ತಾಲ್ಲೂಕಿನಲ್ಲಿ ಈ ಬಾರಿ 7 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 14.010 ಹೆಕ್ಟೇರ್‌ನಲ್ಲಿ ಶೇಂಗಾ, 2 ಸಾವಿರ ಹೆಕ್ಟೇರ್‌ನಲ್ಲಿ ರಾಗಿ, 1,225 ಹೆಕ್ಟೇರ್‌ನಲ್ಲಿ ತೊಗರಿ, 87 ಹೆಕ್ಟೇರ್‌ನಲ್ಲಿ ಅಲಸಂದಿ ಬೆಳೆದಿದ್ದರು. ಮೊದಲಿಗೆ ಉತ್ತಮ ಮಳೆ ಬಿದ್ದಿದ್ದರಿಂದ ಎಲ್ಲ ಕಡೆ ಬೆಳೆ ಹುಲುಸಾಗಿ ಕಂಗೊಳಿಸುತ್ತಿತ್ತು. ತೆನೆ ಬಿಟ್ಟು, ಕಾಳು ಕಟ್ಟುವ ಸಮಯದಲ್ಲಿ ಮಳೆ ಬಾರದಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

‘ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಈ ಬಾರಿ ಸುಮಾರು 3 ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಮತ್ತು ಶೇಂಗಾ ಹಾಕಿದ್ದೆ. ಆದರೆ ಕಡೆ ಹಂತದಲ್ಲಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಬೀಜದ ಕಾಲು ಭಾಗ ಖರ್ಚು ಸಹ ಸಿಗದಂತಾಗಿದೆ’ ಎನ್ನುತ್ತಾರೆ ಐಡಿಹಳ್ಳಿ ಹೋಬಳಿಯ ದಾಸಪ್ಪನಪಾಳ್ಯದ ಗ್ರಾಮದ ದೇವದಾಸ್.

‘ಜನಪ್ರತಿನಿಧಿಗಳು ರೈತರಿಗೆ ಶಾಶ್ವತ ಯೋಜನೆ ರೂಪಿಸದೆ ಅತಿವೃಷ್ಠಿ, ಅನಾವೃಷ್ಠಿಯಿಂದ ಬೆಳೆ ನಷ್ಟವಾದಾಗ ಪರಿಹಾರದ ಮಾತುಗಳನ್ನಾಡುತ್ತಾರೆ. ಆದರೆ ಸರ್ಕಾರ ನೀಡುವ ಪರಿಹಾರ ಬಿತ್ತನೆ ಬೀಜದ ಖರ್ಚಿಗೂ ಸಾಕಾಗುವುದಿಲ್ಲ. ವ್ಯವಸಾಯದ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬರುವಂತಾಗಿದೆ. ಜನಪ್ರತಿನಿಧಿಗಳು ಪೊಳ್ಳು ಭರವಸೆಗಳನ್ನು ಬಿಟ್ಟು ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿ ಕೊಡಬೇಕು’ ಎನ್ನುತ್ತಾರೆ ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ ಮುತ್ತರಾಯನಹಳ್ಳಿ ಚಿಕ್ಕಣ್ಣ.

ಆಕಾಶವೇ ಕಳಚಿದಂತಾಗಿದೆ

ಸ್ವಂತ ಜಮೀನಿಲ್ಲದೆ ಇತರೆ ರೈತರಿಂದ ಜಮೀನು ಕೋರಿಕೆ ಪಡೆದು 20 ಎಕರೆ ಪ್ರದೇಶದಲ್ಲಿ ಸಾಲ ಮಾಡಿ ಮುಸುಕಿನ ಜೋಳ ಹಾಕಿದ್ದೆ. ಮೊದಲಿಗೆ ಬೆಳೆ ಚನ್ನಾಗಿ ಬಂದಿದ್ದರಿಂದ ಬಂಪರ್‌ ಬೆಳೆಯ ನಿರೀಕ್ಷೆಯೊಂದಿಗೆ ಸಂತಸವಾಗಿದ್ದೆ. ಆದರೆ ಈಗ ಕಾಳು ಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟಿರುವುದು ಆಕಾಶವೇ ಕಳಚಿ ಬಿದ್ದಂತಾಗಿದೆ ಎಂದು ರೆಡ್ಡಿಹಳ್ಳಿಯ ಸೀತಾಂಬರರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಗಮನಕ್ಕೆ ತರಲಾಗುವುದು

ಈ ವರ್ಷ ಸಕಾಲಕ್ಕೆ ಉತ್ತಮ ಮಳೆ ಆಗಿದ್ದರಿಂದ ರೈತರಿಗೆ ಅಗತ್ಯ ಬಿತ್ತನೆ ಬೀಜದ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಲಾಗಿತ್ತು. ಅದಕ್ಕೆ ತಕ್ಕಂತೆ ಮಧುಗಿರಿ ತಾಲ್ಲೂಕಿನಾದ್ಯಂತ ಉತ್ತಮ ಬೆಳೆಯು ಬಂದಿತ್ತು. ಆದರೆ 25 ದಿನಗಳಿಂದ ಮಳೆ ಬಾರದೆ ಬೆಳೆ ಒಣಗಿ ರೈತರಿಗೆ ನಷ್ಟವಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದುಸಹಾಯಕ ಕೃಷಿ ನಿರ್ದೇಶಕ ಡಿ. ಹನುಮಂತರಾಯಪ್ಪ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT