ಮಂಗಳವಾರ, ಜೂನ್ 22, 2021
27 °C

ಶಿರಾ: ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಕೊರೊನಾ ಸೋಂಕಿತರ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾದರೆ ಚಿಕಿತ್ಸೆ ನೀಡಲು ಪ್ರಸ್ತುತ ಇರುವ ಆಸ್ಪತ್ರೆಯ ಜೊತೆಗೆ ಪರ್ಯಾಯ ಜಾಗ ಗುರ್ತಿಸುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಿರುವುದಾಗಿ ಶಾಸಕ ಡಾ.ಸಿ‌.ಎಂ.ರಾಜೇಶ್ ಗೌಡ ಹೇಳಿದರು.

ನಗರದ ವಿವಿಧೆಡೆ ಈಚೆಗೆ ಸುಮಾರು ₹45 ಲಕ್ಷ ವೆಚ್ಚದ ಶೌಚಾಲಯ, ಡಾಂಬರ್ ರಸ್ತೆ ಹಾಗೂ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸಬೇಕು.

ಕೊರೊನಾ ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ. 45 ವರ್ಷ ಮೀರಿದ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಬೇಕು. ಲಸಿಕೆಯ ಕೊರತೆಯಾದರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದರು.

ತುಮಕೂರಿನ ಸಿದ್ದಾರ್ಥ, ಶ್ರೀದೇವಿ ಹಾಗೂ ಸಿದ್ದಗಂಗಾ ಆಸ್ಪತ್ರೆಗಳಲ್ಲಿ ಕೊವಿಡ್‌ಗೆ ಉಚಿತ ಚಿಕಿತ್ಸೆ ನೀಡುವಂತೆ ಸಾರ್ವಜನಿಕರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಬಳಿ ಮನವಿ ಮಾಡಿದಾಗ ಅವರು ಆಸ್ಪತ್ರೆಯ ಮುಖ್ಯಸ್ಥರ ಜೊತೆ ಚರ್ಚಿಸಿ ಅತಿ ಶೀಘ್ರವಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಕಾಮಗಾರಿ ವಿವರ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪ ₹10 ಲಕ್ಷ ವೆಚ್ಚದ ಶೌಚಾಲಯ, ನಾಯಕರಹಟ್ಟಿಯಲ್ಲಿ ಸರ್ಕಾರಿ ಶಾಲೆ ಬಳಿ ₹5 ಲಕ್ಷ ವೆಚ್ಚದ ಶೌಚಾಲಯ, ಕೋಟೆ ಪಂಪ್‌ಹೌಸ್ ಸಮೀಪ ₹5 ಲಕ್ಷದ ಶೌಚಾಲಯ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ₹7.5 ಲಕ್ಷ ವೆಚ್ಚದಲ್ಲಿ ಉದ್ಯಾನದ ಅಭಿವೃದ್ದಿ ಮತ್ತು ₹10 ಲಕ್ಷ ವೆಚ್ಚದಲ್ಲಿ‌ ಶಾರದಾ ಆಸ್ಪತ್ರೆ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ಎಂಜಿನಿಯರ್‌ಗಳಾದ ಮಂಜುನಾಥ್, ಶಾರದಾ, ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು, ಮಾಲಿ ಸಿ.ಎಲ್.ಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಕೋಟೆ ರವಿ, ನಗರಸಭೆ ಮಾಜಿ ಸದಸ್ಯರಾದ ಸಂತೇಪೇಟೆ ನಟರಾಜು, ನಟರಾಜು, ಲಕ್ಷ್ಮಿನಾರಾಯಣ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು