ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ ಸುತ್ತ ಮುತ್ತ ಉತ್ತಮ ಮಳೆ: ಬಿತ್ತನೆಗೆ ಸಿದ್ಧಗೊಂಡ ಭೂಮಿ

Last Updated 27 ಜೂನ್ 2021, 3:02 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಭರಣಿ ಮತ್ತು ಇತರೆ ಮಳೆಗಳಲ್ಲಿ ಉತ್ತಮ ಮಳೆ ಆಗಿದ್ದರಿಂದ ಈ ಭಾಗದ ರೈತರು ತಮ್ಮ ಜಮೀನುಗಳನ್ನು ಸಿದ್ಧಗೊಳಿಸುವುದರ ಜೊತೆಗೆ ಬಿತ್ತನೆಗೆ ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಮಧುಗಿರಿ ತಾಲ್ಲೂಕು ಮಳೆಯಾಶ್ರಿತ ಪ್ರದೇಶವಾಗಿರುವ ಕಾರಣ ಈ ಭಾಗದ ರೈತರು ಪ್ರತಿವರ್ಷ ಮುಂಗಾರಿನಲ್ಲಿ ಬೀಳುವ ಮಳೆಗೆ ಭೂಮಿ ಸ್ವಚ್ಛಗೊಳಿಸಿ, ಮೆಕ್ಕೆಜೋಳ, ರಾಗಿ, ಶೇಂಗಾ, ಅವರೆ, ಅಲಸಂದಿ, ತೊಗರಿ ಮತ್ತು ಹಲವು ಸಿರಿಧಾನ್ಯಗಳನ್ನು ಬಿತ್ತನೆ ಮಾಡುತ್ತಾರೆ. ಐದಾರು ವರ್ಷಗಳಿಂದ ಈ ಭಾಗದಲ್ಲಿ ಸರಿಯಾದ ಮಳೆ-ಬೆಳೆಯಿಲ್ಲದೆ ಜನರು ಕಂಗಾಲಾಗುವುದರ ಜೊತೆಗೆ ಕುಡಿಯುವ ನೀರಿಗೂ ಪರದಾಡಿದ್ದರು. ಆದರೆ ಹಿಂದಿನ ವರ್ಷ ಉತ್ತಮ ಮಳೆ ಬಿದ್ದಿದ್ದರಿಂದ ಬೆಳೆ ಜೊತೆಗೆ ಜಾನುವಾರಗಳಿಗೆ ಮೇವು ಸಿಕ್ಕಿದ್ದರಿಂದ ರೈತರು ಸಮಾಧಾನಪಟ್ಟಿದ್ದರು.

ಭರಣಿ ಮಳೆ ಸುರಿದರೆ ಶುಭ ಸೂಚನೆಯಂತೆ. ಹಾಗಾಗಿ ಈ ವರ್ಷವು ಭರಣಿ ಮಳೆಯಲ್ಲಿ ಮಳೆ ಸುರಿದಿರುವುದರಿಂದ ಮತ್ತು ಆ ಮಳೆಯ ಮೇಲಿನ ನಂಬಿಕೆಯಿಂದ ಬಹುತೇಕ ರೈತರು ತಮ್ಮ ಜಮೀನುಗಳನ್ನು ಅಚ್ಚುಕಟ್ಟು ಮಾಡಿಕೊಂಡಿದ್ದಾರೆ. ಈಗ ಬಿತ್ತನೆಗೆ ಒಳ್ಳೆಯ ಸಮಯವಾಗಿರುವ ಕಾರಣ ಹದ ಮಳೆಯಾದರೆ ಸಾಕು ಭೂಮಿಗೆ ಧೈರ್ಯವಾಗಿ ಬೀಜ ಹಾಕುತ್ತೇವೆ ಎನ್ನುತ್ತಾರೆ ಕಲಿದೇವಪುರದ ರೈತ ರಾಜಶೇಖರ್ ರೆಡ್ಡಿ.

ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ: ‘ಬಿತ್ತನೆ ಬೀಜಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನಮ್ಮ ಇಲಾಖೆಯಿಂದ ಈಗಾಗಲೇ ಅಗತ್ಯ ಬೀಜಗಳನ್ನು ತರಿಸಿದ್ದೇವೆ. ಕೆಲವು ರೈತರು ಈಗಾಗಲೇ ಕೆಲ ಬಿತ್ತನೆ ಬೀಜಗಳನ್ನು ತೆಗೆದುಕೊಂಡು ಹೋಗಿದ್ದರೆ, ಇನ್ನು ಕೆಲವರು ಮಳೆ ಬಂದಾಗ ಬರಬಹುದೆಂಬ ದೃಷ್ಟಿಯಿಂದ ಶೇಖರಿಸಿದ್ದೇವೆ’ ಎಂದುಪ್ರಭಾರ ಕೃಷಿ ಅಧಿಕಾರಿ ಮದನ್ ಮೋಹನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT