ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಡೆಯಾಗಲಿರುವ 5 ಹಳ್ಳಿಗೆ ಇದು ಕೊನೆ ಚುನಾವಣೆ?

ಮುಳುಗಡೆ ಕಾರಣಕ್ಕೆ ಅಭಿವೃದ್ಧಿಯಿಂದ ವಂಚಿತವಾಗಿರುವ ಗ್ರಾಮಗಳು
Last Updated 18 ಡಿಸೆಂಬರ್ 2020, 2:15 IST
ಅಕ್ಷರ ಗಾತ್ರ

ತುಮಕೂರು: ಕೊರಟಗೆರೆ ತಾಲ್ಲೂಕಿನ ವೀರಸಾಗರ, ಲಕ್ಕಮುತ್ತನಹಳ್ಳಿ, ಬೆಲ್ಲದಹಳ್ಳಿ, ಗಜಮೇನಹಳ್ಳಿ, ಸುಂಕದಹಳ್ಳಿ ಗ್ರಾಮಗಳ ಜನರಿಗೆ ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯೇ ಅಂತಿಮ ಪಂಚಾಯಿತಿ ಚುನಾವಣೆ. ಎತ್ತಿನಹೊಳೆ ಯೋಜನೆಯಡಿ ಉದ್ದೇಶಿತ ಭೈರಗೊಂಡ್ಲು ಜಲಾಶಯಕ್ಕಾಗಿ ಈ ಐದು ಗ್ರಾಮಗಳು ಸಂಪೂರ್ಣ ಮುಳುಗಡೆ ಆಗಲಿವೆ.

ಸರ್ಕಾರ ಅಂದುಕೊಂಡಂತೆ ಆದರೆ ಮುಂದಿನ ಐದು ವರ್ಷದ ಒಳಗೆ ಇಲ್ಲಿ ಜಲಾಶಯ ನಿರ್ಮಾಣವಾಗುವ ಸಾಧ್ಯತೆ ಇದೆ. ಆದ್ದರಿಂದ ಚಿನ್ನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮಗಳಿಗೆ ಇದೇ ಕೊನೆ ಚುನಾವಣೆ ಆಗುವ ಸಾಧ್ಯತೆ ಇದೆ.

ಭೈರಗೊಂಡ್ಲು, ಬೂಚೇನಹಳ್ಳಿ, ಚಿನ್ನಹಳ್ಳಿ, ವಡೇರಹಳ್ಳಿ, ಕಾಟೇನಹಳ್ಳಿ, ಕರೇಕಲ್ಲೇನಹಳ್ಳಿ, ಕಾಲುವೇನಹಳ್ಳಿ, ಕೊಳಾಲ, ಪುರದಹಳ್ಳಿ, ಗೊಲ್ಲಚಿನ್ನಹಳ್ಳಿ, ಲಕ್ಕಯ್ಯನಹಳ್ಳಿ, ಮೋಟಗಾನಹಳ್ಳಿಗಳು ಭಾಗಶಃ ಮುಳುಗಡೆಯಾಗಲಿವೆ. ಐದು ಹಳ್ಳಿಗಳ 1,573 ಎಕರೆ ಹಾಗೂ ಉಳಿದ ಗ್ರಾಮಗಳ 1,100 ಎಕರೆ ಮುಳುಗಡೆಯಾಗಲಿದೆ.

ಇವು ಜಿಲ್ಲೆಯ ಕೊನೆಯ ಹಳ್ಳಿಗಳಾಗಿವೆ. ಮುಳುಗಡೆ ಆಗುತ್ತವೆ ಎನ್ನುವ ಕಾರಣದಿಂದ ಅಭಿವೃದ್ಧಿಯಿಂದ ಮತ್ತಷ್ಟು ವಂಚಿತವಾಗಿವೆ. ಗ್ರಾಮಗಳು ಅಭಿವೃದ್ಧಿಯಿಂದ ದೂರ ಉಳಿದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಇಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸುವರು. ಎಲ್ಲಕ್ಕಿಂತ ಮುಖ್ಯವಾಗಿ ಪಂಚಾಯಿತಿ ಚುನಾವಣೆ ಜತೆಗೆ ರೈತರ ಜಮೀನುಗಳಿಗೆ ಸಮರ್ಪಕ ಪರಿಹಾರ ನೀಡಬೇಕು ಎನ್ನುವ ಕೂಗು ಸಹ
ಬಲವಾಗುತ್ತಿದೆ.

ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಸೇರುವ ಜಾಗದಲ್ಲಿ 5.87 ಟಿಎಂಸಿ ಅಡಿ ನೀರು ಸಂಗ್ರಹಿಸಲು ಭೈರಗೊಂಡ್ಲು ಜಲಾಶಯ ನಿರ್ಮಾಣವಾಗುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ 11 ಗ್ರಾಮಗಳು ಹಾಗೂ ಕೊರಟಗೆರೆ ತಾಲ್ಲೂಕಿನ 17 ಗ್ರಾಮಗಳ ಒಟ್ಟು 5,078 ಎಕರೆ ಭೂಮಿ ಈ ಡ್ಯಾಂ ನಿರ್ಮಾಣಕ್ಕೆ ಬಳಕೆಯಾಗಲಿದೆ.

ಜಲಾಶಯ ನಿರ್ಮಾಣಕ್ಕೆ ಬೇಕಿರುವ ಜಮೀನು ಹಾಗೂ ಮುಳುಗಡೆಯಾಗಲಿರುವ ಜಮೀನಿನ ಮಾಲೀಕರಿಗೆ ನೀಡಬೇಕಾದ ಪರಿಹಾರ ಮೊತ್ತದ ಗೊಂದಲ ಈಗ ಯೋಜನೆಯ ಪಾಲಿಗೆ ಅಡ್ಡಿಯಾಗಿ‌ದೆ. ಈಗಿನ ಪಂಚಾಯಿತಿ ಚುನಾವಣೆಯಲ್ಲಿಯೂ ಈ ವಿಚಾರ ‌ಸದ್ದು ಮಾಡುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭೂಮಿಯ ಬೆಲೆ ಹೆಚ್ಚಿದೆ. ಮಾರ್ಗಸೂಚಿ ದರದ (ಎಕರೆಗೆ ₹8 ಲಕ್ಷ) ನಾಲ್ಕು ಪಟ್ಟು ಮೊತ್ತದ ಪರಿಹಾರದ ಲೆಕ್ಕದಲ್ಲಿ ಇಲ್ಲಿ ಎಕರೆಗೆ ₹32 ಲಕ್ಷ ನಿಗದಿ ಮಾಡಲಾಗಿದೆ. ಆದರೆ ಕೊರಟಗೆರೆ ತಾಲ್ಲೂಕಿನಲ್ಲಿ ಮಾರ್ಗಸೂಚಿ ದರ ದೊಡ್ಡಬಳ್ಳಾಪುರಕ್ಕಿಂತ ಕಡಿಮೆ ಇದೆ. ದೊಡ್ಡಬಳ್ಳಾಪುರ ರೈತರಿಗೆ ನಿಗದಿಗೊಳಿಸಿರುವ ಪರಿಹಾರದ ಮೊತ್ತವನ್ನೇ ಕೊರಟಗೆರೆ ರೈತರಿಗೂ ನೀಡಬೇಕು ಎಂದು ಈ ಗ್ರಾಮಗಳ ರೈತರು ಹೋರಾಟ ನಡೆಸುತ್ತಿದ್ದಾರೆ.

ಈ ಹೋರಾಟವನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಗ್ರಾಮದ ಹಿರಿಯರು ಪಂಚಾಯಿತಿ ಚುನಾವಣೆಯಲ್ಲಿ ವಿದ್ಯಾವಂತ ಯುವಕರನ್ನು ಕಣಕ್ಕೆ ಇಳಿಸಿದ್ದಾರೆ. ಮುಂದಿನ ಹೋರಾಟಗಳಿಗೆ ಈ ಯುವ ಸಮೂಹ ಬಲತುಂಬಲಿದೆ ಎನ್ನುವುದು ಹಿರಿಯ ವಿಶ್ವಾಸ.

ಸಮರ್ಪಕ ಪರಿಹಾರವೇ ಆದ್ಯತೆ

ಪಂಚಾಯಿತಿ ಚುನಾವಣೆ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ದೊಡ್ಡಬಳ್ಳಾಪುರ ರೈತರಿಗೆ ನಿಗದಿಗೊಳಿಸಿರುವ ಪರಿಹಾರದಷ್ಟೇ ಹಣ ನೀಡಿ ಎನ್ನುವುದಷ್ಟೇ ನಮ್ಮ ಆಗ್ರಹ‌. ಸರ್ಕಾರಗಳ ನಡೆಗಳನ್ನು ನೋಡಿದರೆ ಈ ಯೋಜನೆ ಇನ್ನೂ ಐದು ವರ್ಷದೊಳಗೆ ಪೂರ್ಣವಾಗುತ್ತದೆ ಎನ್ನುವುದೇ ಅನುಮಾನ ಎಂದು ಎತ್ತಿನಹೊಳೆ ಯೋಜನೆ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಆರ್.ಶಿವರಾಮಯ್ಯ ತಿಳಿಸಿದರು.

ಯಾವಾಗಬೇಕಾದರೂ ಜಮೀನು ಕೊಡುವುದಕ್ಕೆ ಸಿದ್ಧವಾಗಿದ್ದೇವೆ. ಆದರೆ ಸೂಕ್ತ ಪರಿಹಾರ ನೀಡಬೇಕು. ಪಂಚಾಯಿತಿ ಚುನಾವಣೆಗಳು ಅದರಷ್ಟಕ್ಕೆ ನಡೆಯುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT