ಶುಕ್ರವಾರ, ನವೆಂಬರ್ 22, 2019
23 °C
ಸೆ.5ರಿಂದ 23ರವರೆಗೆ ನಡೆದಿದ್ದ ಅಭಿಯಾನ : ಲಕ್ಷಾಂತರ ಮನೆಗಳಿಗೆ ಭೇಟಿ

ತುಮಕೂರು: 1,059 ಶಂಕಿತ ಕುಷ್ಠರೋಗ ಪ್ರಕರಣ ಪತ್ತೆ

Published:
Updated:
Prajavani

ತುಮಕೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ನಡೆಸಿದ ‘ಕುಷ್ಠರೋಗ ಪತ್ತೆ ಅಭಿಯಾನ’ದಲ್ಲಿ 1,059 ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ.

ರಾಜ್ಯದ ಆಯ್ದ 9 ಜಿಲ್ಲೆಗಳಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ತುಮಕೂರು ಜಿಲ್ಲೆಯೂ ಸೇರಿತ್ತು.

ಅಭಿಯಾನದ ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ–ಮನೆಗೆ ತೆರಳಿ ಮಾಹಿತಿ ನೀಡಿದ್ದರು. ಕುಟುಂಬದ ಎಲ್ಲ ಸದಸ್ಯರ ಮನವಲಿಸಿ ದೈಹಿಕ ಪರೀಕ್ಷೆ ನಡೆಸಿದ್ದರು.

ಪರೀಕ್ಷೆಗೆ ಹಿಂಜರಿದ, ಒಪ್ಪದ ಸಾರ್ವಜನಿಕರಿಗೆ ತಿಳಿಹೇಳಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ದೈಹಿಕ ಪರೀಕ್ಷೆ ಮಾಡಿಸಲು ಸಲಹೆ ನೀಡಿದ್ದರು. ಖಾಸಗಿ ಕ್ಲಿನಿಕ್‌ ಮತ್ತು ಆಸ್ಪತ್ರೆಗಳಲ್ಲಿ ಪತ್ತೆಯಾದ ಶಂಕಿತ ಪ್ರಕರಣಗಳನ್ನು ಸಹ ಆರೋಗ್ಯ ಇಲಾಖೆ ಸಿಬ್ಬಂದಿ ಸಮೀಕ್ಷೆಯಲ್ಲಿ ದಾಖಲಿಸಿಕೊಂಡಿದ್ದರು.

ಶಂಕಿತ ಪ್ರಕರಣಗಳು ಕಂಡು ಬಂದರೆ ಅಂತವರ ಮನವೊಲಿಸಿ ಎಲ್ಲ ಪರೀಕ್ಷಾ ಸೌಲಭ್ಯ ಇರುವ ತಾಲ್ಲೂಕು ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಕರೆಸಿ, ಮತ್ತೊಮ್ಮೆ ಪರೀಕ್ಷೆ ಮಾಡಿಸಿ ಕಾಯಿಲೆ ಇರುವುದನ್ನು ದೃಢಪಡಿಸುತ್ತೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಬಿ.ಚಂದ್ರಿಕಾ ಅವರು ‘ಪ್ರಜಾವಾಣಿಗೆ ತಿಳಿಸಿದರು.

ಸಾಮಾನ್ಯವಾಗಿ ಶಂಕಿತ ಪ್ರಕರಣಗಲ್ಲಿ ಶೇ 5ರಿಂದ ಶೇ 10 ರಷ್ಟು ದೃಢಪಡುತ್ತವೆ ಎಂದು ಅವರು ಮಾಹಿತಿ ನೀಡಿದರು.

ರೋಗದ ಸಮೀಕ್ಷೆಗಾಗಿ ಜಿಲ್ಲೆಯಲ್ಲಿ 463 ತಂಡಗಳನ್ನು ರಚಿಸಲಾಗಿತ್ತು. ತಂಡದ ಸದಸ್ಯರು ರಜಾ ದಿನ ಹೊರತುಪಡಿಸಿ ಮನೆಗಳಿಗೆ ಬೆಳಿಗ್ಗೆ 7ರಿಂದ 11ರ ವರೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಿದ್ದರು.
*

ಶಂಕಿತ ಪ್ರಕರಣಗಳಲ್ಲಿ ರೋಗ ಬಾಧಿತರಿದ್ದರೆ ಅವರಿಗೆ ಪಾವಗಡದ ಆಸ್ಪತ್ರೆ ಮತ್ತು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತೇವೆ.

ಡಾ.ಬಿ.ಆರ್‌.ಚಂದ್ರಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
*

ರೋಗದ ಲಕ್ಷಣ

-ತಿಳಿ ಬಿಳಿ ತಾಮ್ರ ಬಣ್ಣದ ಸ್ಪರ್ಶ ಜ್ಞಾನ ವಿಲ್ಲದ ಮಚ್ಚೆಗಳು

-ಕೈಕಾಲುಗಳು ಜೋಮು ಹಿಡಿಯುವುದು

-ಮುಖ ಮತ್ತು ಕಿವಿಗಳ ಮೇಲೆ ಎಣ್ಣೆ ಸವರಿದಂತೆ ಹೊಳಪು, ಗಂಟುಗಳು
*

ಚಿಕಿತ್ಸೆ ಹೇಗೆ?

ಆರಂ‌ಭದಲ್ಲೇ ರೋಗ ಪತ್ತೆ ಹಚ್ಚುವುದು ಮುಖ್ಯ. ಹಾಗೆ ಬಿಟ್ಟರೆ, ನರಗಳ ಉರಿಯೂತ ಆರಂಭವಾಗುತ್ತದೆ. ಕೈ ಬೆರಳು, ಕಾಲುಗಳು ಮುರುಟುತ್ತವೆ. ಇದು ಅಂಗವಿಕಲತೆಗೆ ಕಾರಣವಾಗುತ್ತದೆ ಎಂಬುದು ವೈದ್ಯರ ಮಾತು.

ಕುಷ್ಠರೋಗವನ್ನು ಪಿಬಿ (ಪಾಸಿ ಪ್ಯಾಸಿಲರಿ– 1ರಿಂದ 5 ಮಚ್ಚೆ) ಮತ್ತು ಎಂಬಿ (ಮಲ್ಪಿ ಬ್ಯಾಸಿಲರಿ– 5ಕ್ಕಿಂದ ಹೆಚ್ಚು ಮಚ್ಚೆಗಳು) ಎಂಬ 2 ವಿಭಾಗ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಪಿಬಿಗೆ ಆರು ತಿಂಗಳು ಹಾಗೂ ಎಂಬಿಗೆ ಒಂದು ವರ್ಷದವರೆಗೆ ಚಿಕಿತ್ಸೆ ನೀಡಲಾಗುತ್ತದೆ.

ಪ್ರತಿಕ್ರಿಯಿಸಿ (+)