ಸೋಮವಾರ, ಸೆಪ್ಟೆಂಬರ್ 16, 2019
29 °C
ತುಮಕೂರು ನಗರದಲ್ಲಿ ಸಾರ್ವಜನಿಕರಿಂದ ಸಂಚಾರ ನಿಯಮ ಉಲ್ಲಂಘನೆ ತಡೆಗೆ ಪೊಲೀಸರ ಕ್ರಮ

ಮಿಂಚಿನ ಕಾರ್ಯಾಚರಣೆ; ₹ 2.26 ಲಕ್ಷ ದಂಡ

Published:
Updated:
Prajavani

ತುಮಕೂರು: ಎಷ್ಟೇ ಎಚ್ಚರಿಕೆ ನೀಡಿ, ದಂಡ ಹಾಕುತ್ತಲೇ ಇದ್ದರೂ ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಾಹನ ಸವಾರರಿಗೆ ಸಂಚಾರ ಠಾಣೆ ವಿಭಾಗದ ಪೊಲೀಸರು ಮೇ 2 ಮತ್ತು 3ರಂದು ಮಿಂಚಿನ ಕಾರ್ಯಾಚರಣೆ ನಡೆಸಿ ₹ 2.26 ಲಕ್ಷ ದಂಡ ವಿಧಿಸಿದ್ದಾರೆ.

ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿದ ಬಗ್ಗೆ 12 ಪ್ರಕರಣ ದಾಖಲಿಸಿ ₹ 46 ಸಾವಿರ, ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 60 ಪ್ರಕರಣ ದಾಖಲಿಸಿ ₹ 56 ಸಾವಿರ ದಂಡ ವಿಧಿಸಿದ್ದಾರೆ.  ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವವರ ವಿರುದ್ಧ 367 ಪ್ರಕರಣಗಳನ್ನು ದಾಖಲಿಸಿ ₹ 36 ಸಾವಿರ ದಂಡ ವಿಧಿಸಿದ್ದಾರೆ.

ತುಮಕೂರು ನಗರದಲ್ಲಿ ಇತರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಒಟ್ಟು 1,262 ಪ್ರಕರಣ ದಾಖಲು ಮಾಡಿ ₹ 1.29 ಲಕ್ಷ ದಂಡ ವಿಧಿಸಿದ್ದಾರೆ. ಒಟ್ಟಾರೆಯಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಾರ್ವಜನಿಕರ ವಿರುದ್ಧ 1401 ಐ.ವಿ.ಎಂ.ವಿ ಪ್ರಕರಣಗಳನ್ನು ದಾಖಲಿಸಿ ₹ 2.26 ಲಕ್ಷ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ತಿಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ

ತುಮಕೂರು ನಗರದಲ್ಲಿ ವಾಹನ ಸವಾರರು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು, ಬೈಕ್ ಸವಾರರು ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವುದು, ಏಕಮುಖ ಸಂಚಾರ, ಕಾರುಗಳ ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದು, ನಿಷೇಧ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ಚಾಲನಾ ಪರವಾನಿಗೆ, ವಿಮೆ ಇಲ್ಲದೆ ವಾಹನ ಚಾಲನೆ ಮಾಡುವವರ ಸಂಖ್ಯೆ ಏರಿಕೆ ಆಗುತ್ತಿದೆ. ಹೀಗಾಗಿ ಇಂಥವರನ್ನು ಪತ್ತೆ ಮಾಡಿ ದಂಡ ಹಾಕುವ ಪ್ರಕ್ರಿಯೆ ನಡೆಸಲಾಗಿದೆ ಎಂದು ಡಾ.ಕೆ.ವಂಶಿಕೃಷ್ಣ ಹೇಳಿದ್ದಾರೆ.

Post Comments (+)