ತುಮಕೂರು: ಗ್ರಂಥಾಲಯ ವಿಶ್ವವಿದ್ಯಾಲಯ ಇದ್ದಂತೆ, ಇಲ್ಲಿ ಶಿಕ್ಷಕರು ಇರಲ್ಲ ಅಷ್ಟೇ. ಗ್ರಂಥಾಲಯ ಇಲಾಖೆಗೆ ಐಎಎಸ್ ಅಧಿಕಾರಿಯನ್ನು ಉಸ್ತುವಾರಿಯನ್ನಾಗಿ ನೇಮಿಸಿ, ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಭರವಸೆ ನೀಡಿದರು.
ನಗರದಲ್ಲಿ ಸೋಮವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನ ಆಚರಣೆ ಮತ್ತು ರಾಜ್ಯ ಮಟ್ಟದ ‘ಉತ್ತಮ ಗ್ರಂಥಪಾಲಕ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಡೀ ದೇಶದಲ್ಲಿ ಹೆಚ್ಚು ಗ್ರಂಥಾಲಯ ಇರುವ ರಾಜ್ಯ ಕರ್ನಾಟಕ. ಇಲಾಖೆ ವ್ಯಾಪ್ತಿಯಲ್ಲಿ 1,312 ಗ್ರಂಥಾಲಯಗಳಿವೆ. ಬಡತನದಿಂದ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದವರಿಗೆ ಗ್ರಂಥಾಲಯಗಳು ಆಶ್ರಯ ನೀಡುತ್ತಿವೆ. ನಗರ ಪ್ರದೇಶದಲ್ಲಿ ಗ್ರಂಥಾಲಯದ ಸ್ಥಿತಿ ಸುಧಾರಿಸಿದೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಓದಲು ಪುಸ್ತಕ ಸಿಗುತ್ತಿಲ್ಲ. ಕೊರತೆ ತುಂಬಾ ಇದ್ದು, ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದರು.
ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಒಟ್ಟು 75 ಸಾವಿರ ಶಾಲೆಗಳಿವೆ. ಒಟ್ಟು 1.10 ಕೋಟಿ ಮಕ್ಕಳು ಕಲಿಯುತ್ತಿದ್ದಾರೆ. ಈ ಹಿಂದೆ ವಾರ್ಷಿಕ ಪರೀಕ್ಷೆಗಳಲ್ಲಿ ನಕಲು ಮಾಡುವುದು ಜಾಸ್ತಿ ಇತ್ತು. ಮಕ್ಕಳಿಂದ ನಕಲು ಮಾಡಿಸುವುದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಇದನ್ನು ತಪ್ಪಿಸಲು ಈ ಬಾರಿ ಪರೀಕ್ಷೆಗಳನ್ನು ಕಠಿಣವಾಗಿ ನಡೆಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪೋಷಕರು ಮಕ್ಕಳನ್ನು ಮೂರು ದಿನ ಶಾಲೆಗೆ ಕಳುಹಿಸುತ್ತಾರೆ, ಇನ್ನು ಮೂರು ದಿನ ಚಕ್ಕರ್ ಹೊಡೆಸುತ್ತಾರೆ. ಇದರಿಂದ ಅವರ ಕಲಿಕೆ ಕುಂಠಿತವಾಗುತ್ತದೆ. ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಆದರೆ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಅಗತ್ಯ ಇರುವ ಶಾಲೆಗಳಲ್ಲಿ ವಾರಕ್ಕೊಮ್ಮೆ ಟ್ಯೂಷನ್ ನಡೆಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತೆ ಎಂ.ಕನಗವಲ್ಲಿ, ವಿ.ವಿ ಪ್ರಾಧ್ಯಾಪಕ ಕೇಶವ, ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ದಿವಾಕರ, ಎನ್.ಸರಸ್ವತಿ ಇತರರು ಹಾಜರಿದ್ದರು.
ಬಹುಮಾನ ವಿತರಣೆ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂಪ್ರೆಸ್ ಶಾಲೆಯ ಎಚ್.ಆರ್.ಉಮಾ ಪ್ರಥಮ ಪ್ರಬಂಧ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದರು. ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಡೆದವರು. ಪ್ರಬಂಧ: ಆರ್ಯನ್ ಪ್ರೌಢಶಾಲೆಯ ಬಿ.ಜಿ.ಯಶಸ್ವಿನಿ ಮುಸ್ಕಾನ್. ರಸಪ್ರಶ್ನೆ: ಭಾರತ್ ಮಾತಾ ಶಾಲೆಯ ಟಿ.ಡಿ.ದಿವ್ಯಾ ಬಾಪೂಜಿ ಹೈಸ್ಕೂಲ್‌ನ ಕೆ.ಎನ್.ಬಸವರಾಜು. ಗಾಯನ: ವಾಲ್ಮೀಕಿ ಸನಿವಾಸ ಪ್ರೌಢಶಾಲೆಯ ಗಂಗೋತ್ರಿ ಭಾರತ್ ಮಾತಾ ಶಾಲೆಯ ಟಿ.ಡಿ.ದಿವ್ಯಾ ಬಾಪೂಜಿ ಹೈಸ್ಕೂಲ್‌ನ ಯದುನಂದನ. ಚಿತ್ರಕಲೆ: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಫೈಸಲ್ ಖಾನ್ ಗುರುಕುಲ ಶಾಲೆಯ ಕೆ.ಎಂ.ವೇದಾಂತ್ ಮಾರುತಿ ವಿದ್ಯಾ ಕೇಂದ್ರದ ಎಚ್.ಆರ್.ಅನುಷ್ಕಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.