ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಕ್ಕೆ ಸ್ಥಳ ನಿಗದಿ: ಶಾಸಕರ ಮುಂದೆ ಗುಜ್ಜನಡು ಗ್ರಾಮಸ್ಥರ ಅಳಲು

Last Updated 22 ಜನವರಿ 2023, 5:27 IST
ಅಕ್ಷರ ಗಾತ್ರ

ಪಾವಗಡ: ಗ್ರಾಮದಲ್ಲಿ ಸ್ಮಶಾನ ಇಲ್ಲ. ಸಮರ್ಪಕ ರಸ್ತೆ ಸಂಪರ್ಕ ಇಲ್ಲದ ಕಾರಣ ಓಡಾಡುವುದು ಕಷ್ಟವಾಗಿದೆ ಎಂದು ತಾಲ್ಲೂಕಿನ ಗುಜ್ಜನಡು ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆ ತೋಡಿಕೊಂಡರು

ಹಲವು ವರ್ಷಗಳಿಂದ ಸ್ಮಶಾನ ಇಲ್ಲದ ಕಾರಣ ಯಾರಾದರೂ ಮೃತಪಟ್ಟರೆ ಎಲ್ಲಿ ಅಂತ್ಯಕ್ರಿಯೆ ಮಾಡಬೇಕು ಎಂದು ಹುಡುಕಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ದವಡಬೆಟ್ಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗಾಲದಲ್ಲಿ ಹಾಳಾಗಿದೆ. ರಸ್ತೆ ಬದಿ ಬೃಹತ್ ಬಾವಿ ಇದೆ. ಕೆರೆ, ಕಟ್ಟೆ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಲಾಗುತ್ತಿದೆ. ರಸ್ತೆ ಹಾಳಾಗಿ ತಿಂಗಳುಗಳು ಕಳೆದರೂ ದುರಸ್ತಿ ಮಾಡುವತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಶಾಲಾ, ಕಾಲೇಜುಗಳಿಗೆ ಮಕ್ಕಳು ಹೋಗಲು, ನೌಕರರು ಗ್ರಾಮಕ್ಕೆ ಬರಲೂ ಸಾಧ್ಯವಾಗದೆ ಜೀವನ ಅಸ್ತವ್ಯಸ್ತವಾಗಿದೆ. ಬಸ್ ಸಂಚಾರವೂ ಸ್ಥಗಿತಗೊಂಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಶಾಸಕ ವೆಂಕಟರವಣಪ್ಪ ಮಾತನಾಡಿ, ಎರಡು ತಿಂಗಳೊಳಗೆ ಮನೆ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಮಾರ್ಚ್ ವೇಳೆಗೆ ಆಂಧ್ರ ಕಡೆಯಿಂದ ತಾಲ್ಲೂಕಿನ ಕೆ. ರಾಂಪುರ ವರೆಗೆ ರೈಲು ಸಂಚರಿಸಲಿದೆ ಎಂದರು.

ಕೃಷಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಶೇಂಗಾ ಬೆಳೆಗೆ ಬಂದಿರುವ ಕೀಟ, ರೋಗಗಳ ನಿಯಂತ್ರಣದ ಬಗ್ಗೆ ರೈತರಿಗೆ ಸಲಹೆ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ರೈತರು, ಸಾರ್ವಜನಿಕರಿಗಾಗಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು
ತಿಳಿಸಿದರು.

ತಹಶೀಲ್ದಾರ್ ವರದರಾಜು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರಮೂರ್ತಿ, ಭೂ ಮಾಪನ ಇಲಾಖೆಯ ಮೇಲ್ವಿಚಾರಕ ಜಿ.ಸಿ. ಕೃಷ್ಣ, ಸಿಡಿಪಿಒ ನಾರಾಯಣ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ, ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಶಿವಪ್ಪ, ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ವೈದ್ಯಾಧಿಕಾರಿ ಡಾ.ಕಿರಣ್ ಕುಮಾರ್, ಅಶೋಕ್, ಸಹಾಯಕ ನಿರ್ದೇಶಕ ರಂಗನಾಥ್, ಮಲ್ಲಿಕಾರ್ಜುನ್, ಚೌಡಪ್ಪ, ಪಿಡಿಒ ಶ್ರೀನಿವಾಸುಲು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ರಾಜೇಶ್, ಉಪಾಧ್ಯಕ್ಷೆ ತಿಮ್ಮರಾಜಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT