ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಚೇತರಿಕೆ ಕಾಣದ ಹೋಟೆಲ್‌ ಉದ್ಯಮ

ಲಾಕ್‌ಡೌನ್ ತೆರವಾದರೂ ಹೋಟೆಲ್‌ಗಳತ್ತ ಬಾರದ ಗ್ರಾಹಕರು; ಕಾರ್ಮಿಕರಿಗೂ ಉದ್ಯೋಗವಿಲ್ಲ
Last Updated 28 ಆಗಸ್ಟ್ 2020, 6:56 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಕರಿಛಾಯೆ ಜಿಲ್ಲೆಯ ಹೋಟೆಲ್ ಉದ್ಯಮವನ್ನು ಇನ್ನೂ ಬಿಟ್ಟಿಲ್ಲ. ಗ್ರಾಹಕರ ಕೊರತೆ ಮತ್ತು ದುಬಾರಿ ವೆಚ್ಚಗಳ ಪರಿಣಾಮ ಹೋಟೆಲ್ ಮಾಲೀಕರು ಉದ್ಯಮವನ್ನು ನಡೆಸಲು ಕಷ್ಟಪಡುತ್ತಿದ್ದಾರೆ. ಮತ್ತೊಂದು ಕಡೆ ಕಾರ್ಮಿಕರು ಕಳೆದುಕೊಂಡಿರುವ ಉದ್ಯೋಗ ಮರಳಿ ಪಡೆಯುತ್ತೇವೆಯೇ ಎನ್ನುವ ಆಸೆಗಣ್ಣಿನಲ್ಲಿ ಇದ್ದಾರೆ.

ಆದರೆ ಉದ್ಯಮ ಚೇತರಿಸಿಕೊಳ್ಳದೆ ಕಾರ್ಮಿಕರ ಆಸೆ ಇನ್ನೂ ಈಡೇರಿಲ್ಲ. ಹೋಟೆಲ್ ಮಾಲೀಕರ ಲಾಭ
ನಷ್ಟದ ಲೆಕ್ಕಗಳನ್ನು ನೋಡಿದರೆ ಸದ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಅನುಮಾನ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಸೇರಿದಂತೆ ಸುಮಾರು 1 ಸಾವಿರ ಹೋಟೆಲ್‌ಗಳಿವೆ. ನಗರದಲ್ಲಿ 400ಕ್ಕೂ ಹೆಚ್ಚು ಹೋಟೆಲ್‌ಗಳು ಇವೆ.

ಮಾರ್ಚ್‌ನಲ್ಲಿ ಲಾಕ್‌ಡೌನ್‌ ಜಾರಿ ಆಯಿತು. ನಗರ ಸೇರಿದಂತೆ ಜಿಲ್ಲೆಯ ಎಲ್ಲ ಹೋಟೆಲ್‌ಗಳು ಮೇ ಅಂತ್ಯದವರೆಗೆ ಬಂದ್ ಆದವು. ಜೂನ್‌ನಿಂದ ಪಾರ್ಸೆಲ್ ಆರಂಭವಾಯಿತು. ಜುಲೈ 2ನೇ ವಾರದಿಂದ ಸರ್ವಿಸ್‌ ನೀಡಲು ಅವಕಾಶ ದೊರೆಯಿತು. ಹೀಗಿದ್ದರೂ ಹೋಟೆಲ್ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ.

ಕೊರೊನಾ ಪೂರ್ವದಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಹೋಟೆಲ್‌ಗಳಿಗೆ ಈಗ ಕಡಿಮೆ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಕಟ್ಟಡದ ಬಾಡಿಗೆ, ಕಾರ್ಮಿಕರ ಸಂಬಳ ಇತ್ಯಾದಿ ಖರ್ಚು ವೆಚ್ಚ ಸರಿದೂಗಿಸುವುದು ಕಷ್ಟವಾಗಿದೆ.

ಬಳಸಿ ಎಸೆಯುವ ವಸ್ತುಗಳ ಬಳಕೆ: ಕಾಫಿ, ಟೀಗಳಿಗೆ ಸ್ಟೀಲ್, ಗಾಜಿನ ಲೋಟಗಳನ್ನು ಬಹುತೇಕ ಹೋಟೆಲ್‌ಗಳಲ್ಲಿ ಇಂದಿಗೂ ಬಳಸುತ್ತಿಲ್ಲ. ಪ್ಲಾಸ್ಟಿಕ್ ಕಪ್‌ಗಳನ್ನು ಬಳಸುತ್ತಿದ್ದಾರೆ. ಕೆಲವರು ಪ್ಲಾಸ್ಟಿಕ್ ತಟ್ಟೆಗಳನ್ನು ಬಳಸುತ್ತಿದ್ದಾರೆ. ಇದರಿಂದ ಸಹಜವಾಗಿ ವೆಚ್ಚವೂ ಅಧಿಕವಾಗುತ್ತದೆ. ಮತ್ತೊಂದು ಕಡೆ ಗ್ರಾಹಕರು ಸಹ ಕಡಿಮೆ. ಈ ಕಾರಣದಿಂದ ನಿರ್ವಹಣಾ ವೆಚ್ಚ ಹೆಚ್ಚಿದೆ ಎಂದು ಹೋಟೆಲ್‌ ಮಾಲೀಕರು ಹೇಳುತ್ತಾರೆ.

ಗುಂಪುಗೂಡುವ ಭಯ: ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಜನಸಂದಣಿ ಹೆಚ್ಚು. ಅಲ್ಲಿ ಜನರು ಗುಂಪುಗುಂಪಾಗಿಯೇ ಇರುವರು. ಹೀಗೆ ಗುಂಪಿದ್ದರೆ ಕೊರೊನಾ ಹರಡುತ್ತದೆ ಎನ್ನುವ ಭಯ ಸಾಮಾನ್ಯವಾಗಿದೆ. ವೈದ್ಯರು ಸಹ ಹೀಗೆ ಗುಂಪುಗೂಡುವ ಕಡೆಗಳಲ್ಲಿ ವ್ಯವಹರಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎನ್ನುವರು. ಈ ಕಾರಣದಿಂದ ಗ್ರಾಹಕರು ಹೋಟೆಲ್‌ಗಳಿಗೆ ಸುಳಿಯುತ್ತಿಲ್ಲ.

ಕೆಲವು ಹೋಟೆಲ್‌ಗಳು ವಿದ್ಯಾರ್ಥಿಗಳನ್ನೇ ಪ್ರಮುಖವಾಗಿಸಿ ಕೊಂಡು ನಡೆಯುತ್ತವೆ. ಕಾಲೇಜುಗಳು ಆರಂಭವಾಗದ ಕಾರಣ ಈ ಹೋಟೆಲ್‌ಗಳ ವ್ಯಾಪಾರ ವಹಿವಾಟು ಸಹ ಸ್ಥಗಿತವಾಗಿವೆ. ಕೆಲವರು ಸಂಜೆ 6ಕ್ಕೆ ಬಾಗಿಲು ಬಂದ್ ಮಾಡುತ್ತಿದ್ದಾರೆ.

ಕಾರ್ಮಿಕರು ಲಾಕ್‌ಡೌನ್ ಸಮಯದಲ್ಲಿ ಸ್ವಗ್ರಾಮಗಳಿಗೆ ತೆರಳಿದರು. ಕೊರೊನಾ ಅನಿಶ್ಚಿತತೆ ಮತ್ತು ಮಾಲೀಕರು ಕೆಲಸಕ್ಕೆ ಬನ್ನಿ ಎಂದು ಕರೆಯದ ಪರಿಣಾಮ ಇನ್ನೂ ಅವರು ಹಳ್ಳಿಗಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

500 ಊಟದ ಜಾಗದಲ್ಲಿ 130

ಈ ಹಿಂದೆ ನಿತ್ಯ ನಮ್ಮ ಹೋಟೆಲ್‌ನಲ್ಲಿ ಮಧ್ಯಾಹ್ನ 450ರಿಂದ 500 ಊಟ ಹೋಗುತ್ತಿತ್ತು. ಆದರೆ ಈಗ ಗರಿಷ್ಠ 130 ಊಟ ಹೋಗುತ್ತಿದೆ. ಸ್ಯಾನಿಟೈಸರ್, ಮಾಸ್ಕ್, ಬಳಸಿ ಎಸೆಯುವ ವಸ್ತುಗಳು ಹೀಗೆ ಹಲವು ಕಾರಣದಿಂದ ನಿರ್ವಹಣೆಯ ವೆಚ್ಚವೂ ಹೆಚ್ಚಿದೆ ಎಂದು ಎಸ್‌ಎಸ್‌ಐಟಿ ಬಳಿಯ ಬಸವೇಶ್ವರ ಹೋಟೆಲ್ ಮಾಲೀಕ ದೇವರಾಜ್ ತಿಳಿಸಿದರು.

ಇಡೀ ಹೋಟೆಲ್ ಉದ್ಯಮವೇ ಹಾಳಾಗಿದೆ. ಚೇತರಿಕೆಗೆ ಕನಿಷ್ಠ ಇನ್ನೂ ಐದಾರು ತಿಂಗಳು ಬೇಕು. ಬಾಡಿಗೆ, ನಿರ್ವಹಣೆ, ಕಾರ್ಮಿಕರಿಗೆ ಸಂಬಳ ಹೀಗೆ ವೆಚ್ಚಗಳೇ ಹೆಚ್ಚುತ್ತಿದೆ. ಈ ಹಿಂದೆ ನಮ್ಮ ಬಳಿ 22 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ ಅರ್ಥಕ್ಕೆ ಇಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT