ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಕಟ್ಟುನಿಟ್ಟು ಜಾರಿ

Last Updated 29 ಏಪ್ರಿಲ್ 2021, 6:08 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಮಂಗಳವಾರ ರಾತ್ರಿಯಿಂದಲೇ ಲಾಕ್‌ಡೌನ್ ಜಾರಿಮಾಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ನಂತರ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ರಿಯಾಯಿತಿ ಪಡೆದುಕೊಂಡಿರುವ ಕೈಗಾರಿಕೆಗಳು, ಅಗತ್ಯ ಸೇವೆಯಲ್ಲಿ ತೊಡಗಿಸಿಕೊಂಡವರು, ಕಟ್ಟಡ ಕಾರ್ಮಿಕರು ತಮ್ಮ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಿದರು. ಆಸ್ಪತ್ರೆ, ಔಷಧಿ ಅಂಗಡಿಗಳಿಗೆ ತೆರಳುವವರಿಗೆ ಅವಕಾಶ ಮಾಡಿಕೊಡಲಾಯಿತು.

ಬಹುತೇಕ ಕಡೆಗಳಲ್ಲಿ ವಾಣಿಜ್ಯ ವಹಿವಾಟು ಮುಚ್ಚಿತ್ತು. ಕೆಲವು ಕಡೆಗಳಲ್ಲಿ ಹೋಟೆಲ್‌ಗಳು ತೆರೆದಿದ್ದು, ಪಾರ್ಸೆಲ್ ನೀಡಲಾಯಿತು. ಹೋಟೆಲ್‌ಗಳ ಬಳಿಯೂ ಜನಸಂದಣಿ ಕಂಡುಬರಲಿಲ್ಲ. ಪೆಟ್ರೋಲ್ ಬಂಕ್‌ಗಳು ತೆರೆದಿದ್ದರೂ ಹೆಚ್ಚಿನ ವ್ಯವಹಾರ ಕಾಣಿಸಲಿಲ್ಲ. ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಆದರೆ ಜನರೇ ಇರಲಿಲ್ಲ. ಕೋವಿಡ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ಕಚೇರಿಗಳು ಮುಚ್ಚಿದ್ದವು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ನಗರದಲ್ಲಿ ಸುತ್ತಾಡಿ ಪರಿಶೀಲಿಸಿದರು. ನಿಯಮದಂತೆ ನಡೆದುಕೊಳ್ಳುವಂತೆ ಪೊಲೀಸರಿಗೆ ಸಲಹೆ ನೀಡಿದರು.

ಚೆಕ್‌ಪೋಸ್ಟ್: ನಗರ ಸೇರಿದಂತೆ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಜನ, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಂತರ ಜಿಲ್ಲೆ ಹಾಗೂ ಅಂತರರಾಜ್ಯದ ಗಡಿಗಳಲ್ಲೂ ಚೆಕ್‌ಪೋಸ್ಟ್‌ ನಿರ್ಮಿಸಿ ಸಂಚಾರವನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಚುನಾವಣೆ ಸಮಯದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ತಪಾಸಣೆ ಮಾಡುವ ಮಾದರಿಯಲ್ಲಿ ಕಟ್ಟುನಿಟ್ಟು ಮಾಡಲಾಗಿದೆ. ಕೆಲವು
ಕಡೆಗಳಲ್ಲಿ ಕಂದಾಯ ಇಲಾಖೆ ನೆರವು ಪಡೆದು ಪೊಲೀಸರು ತಪಾಸಣೆ ನಡೆಸಿದರು.

ಮೂಡಿದ ಭಯ: ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಸಮಯದಲ್ಲಿ ಜನರಲ್ಲಿ ಅಷ್ಟಾಗಿ ಭಯ, ಆತಂಕ ಇರಲಿಲ್ಲ. ಆದರೆ ಎರಡನೇ ಅಲೆಯ ತೀವ್ರತೆ ಹಾಗೂ ಸಾವಿನ ಸುದ್ದಿಯನ್ನು ಕೇಳಿದವರು ತಾವೇ ಎಚ್ಚರಿಕೆ ವಹಿಸುತ್ತಿದ್ದಾರೆ. ಸಾಕಷ್ಟು ಜನರು ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಇದ್ದಾರೆ. ಅನಗತ್ಯವಾಗಿ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ತೀರ ಅಗತ್ಯ ಇದ್ದವರಷ್ಟೇ ಮನೆಯಿಂದ ಹೊರ ಬರುತ್ತಿದ್ದ ವಾತಾವರಣ ನಗರದಲ್ಲಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT