ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದಿ ಅಖಾಡದಲ್ಲಿ ಅರಳಿದ ‍ಪಟು

ಜೆ.ಸಿ.ಮಾಧುಸ್ವಾಮಿ ರಾಜಕಾರಣ ಹಾದಿ; ವೀರೇಂದ್ರ ಪಾಟೀಲರ ಅಲೆಯ ನಡುವೆಯೂ ಗೆಲುವು
Last Updated 21 ಆಗಸ್ಟ್ 2019, 10:23 IST
ಅಕ್ಷರ ಗಾತ್ರ

ತುಮಕೂರು: ‘ಜೆಸಿಎಂ’ ಎಂದೇ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಜನಜನಿತರಾಗಿರುವ ಮಾಧುಸ್ವಾಮಿ, ಸದನದಲ್ಲಿ ತಮ್ಮ ವಾಕ್ಪಟುತ್ವದಿಂದಲೇ ರಾಜ್ಯದ ಜನರ ಗಮನ ಸೆಳೆದವರು.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಮೂಲಕ ಚಿಕ್ಕನಾಯಕನಹಳ್ಳಿ ಹಾಗೂ ಜಿಲ್ಲೆಯ ಜನರಲ್ಲಿ ಅಭಿವೃದ್ಧಿಯ ಅಪಾರವಾದ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದಾರೆ.

ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್‌.ಆರ್.ಬೊಮ್ಮಾಯಿ, ಜೆ.ಎಚ್‌.‍ಪಟೇಲ್ ಹೀಗೆ ಜನತಾದಳದ ಮುತ್ಸದ್ಧಿಗಳ ಸಂಪರ್ಕದಲ್ಲಿ ಬೆಳೆದವರು ಮಾಧುಸ್ವಾಮಿ. ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭೆಯಲ್ಲಿ ‘ಉತ್ತಮ ಸಂಸದೀಯ ಪಟು’ ಎನಿಸಿಕೊಂಡವರು.

ಕಾನೂನು ಪದವೀಧರರಾದ ಮಾಧುಸ್ವಾಮಿ ಸಮಾಜವಾದಿ ಚಳವಳಿಯಿಂದ ಪ್ರೇರೇಪಿತರಾಗಿ ವಿದ್ಯಾರ್ಥಿ ದಿಸೆಯಲ್ಲಿಯೇ ಹೋರಾಟಗಳಲ್ಲಿ ಪಾಲ್ಗೊಂಡವರು. 1983ರ ಚುನಾವಣೆಯಲ್ಲಿಯೇ ಜನತಾಪಕ್ಷದಿಂದ ಟಿಕೆಟ್ ದೊರೆಯಬೇಕಿತ್ತು. ಆಗ ಸಚಿವರಾಗಿದ್ದ ಎನ್‌.ಬಸವಯ್ಯ ಅವರ ವಿರುದ್ಧ ಸ್ಪರ್ಧಿಸಬೇಕಿತ್ತು. ಜನತಾ ಪಕ್ಷ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿ ಬಿಜೆಪಿಯ ಎಸ್‌.ಜಿ.ರಾಮಲಿಂಗಯ್ಯ ಟಿಕೆಟ್ ಪಡೆದರು. ಗೆಲುವು ಸಾಧಿಸಿದರು.

ಕಾಂಗ್ರೆಸ್ ಪ್ರಾಬಲ್ಯದ ನಡುವೆ 89ರ ಚುನಾವಣೆಯಲ್ಲಿ ಜನತಾ‍ದಳದಿಂದ 24 ಶಾಸಕರು ಆಯ್ಕೆಯಾದರು. ಹಳೇ ಮೈಸೂರಿನಲ್ಲಿ ಏಕಾಂತಯ್ಯ, ಚಂದ್ರೇಗೌಡ ಹೀಗೆ ಬೆರಳಣಿಕೆಯಷ್ಟು ಮಂದಿ ಮಾತ್ರ ಗೆಲುವು ಕಂಡಿದ್ದರು. ಜಿಲ್ಲೆಯಿಂದ ಆಯ್ಕೆ ಆದವರಲ್ಲಿ ಮಾಧುಸ್ವಾಮಿ ಅವರು ಸಹ ಒಬ್ಬರು. ಹೀಗೆ 89ರಲ್ಲಿ ಕಾಂಗ್ರೆಸ್‌ನ ಬಿ.ಲಕ್ಕಪ್ಪ ವಿರುದ್ಧ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು.

1977–78ರಿಂದಲೇ ಚುನಾವಣಾ ಪ್ರಚಾರಗಳಲ್ಲಿ ಸಕ್ರಿಯರಾಗಿದ್ದರು. ಜನತಾಪಕ್ಷದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಕಾರ್ಯದರ್ಶಿ ಸಹ ಆಗಿದ್ದರು. 84ರಲ್ಲಿ ರಾಜ್ಯ ಹಾಲು ಒಕ್ಕೂಟದ (ಕೆಎಂಎಫ್‌) ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.

ಮಾಧುಸ್ವಾಮಿ ತುರ್ತು ಪರಿಸ್ಥಿತಿಯನ್ನು ಪ್ರಬಲವಾಗಿ ವಿರೋಧಿಸಿದ್ದರು. ಆಗ ಮೈಸೂರು ಅವರ ಕಾರ್ಯಕ್ಷೇತ್ರ. ಸುರೇಂದ್ರ ಮೋಹನ್, ಜಾರ್ಜ್ ಫರ್ನಾಂಡಿಸ್, ಮಧುಲಿಮೆ ಅವರಂತಹ ಸಮಾಜವಾದಿ ನಾಯಕರ ಸಂಪರ್ಕ ದೊರೆತಿದ್ದು ಈ ಸಂದರ್ಭದಲ್ಲಿಯೇ.

1989ರ ವಿಧಾನಸಭಾ ಚುನಾವಣೆ. ಜನತಾ ಪರಿವಾರದ ಒಡಕಿನ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಅಂದಿನ ವೀರಶೈವ–ಲಿಂಗಾಯತರ ಪ್ರಬಲ ನಾಯಕ ವೀರೇಂದ್ರ ಪಾಟೀಲ್ ಅವರಿಗೆ ಪಕ್ಷ ಮುನ್ನಡೆಸುವ ಜವಾಬ್ದಾರಿ ನೀಡಿತು. ಕಾಂಗ್ರೆಸ್ 178 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್‌ ಮತ್ತು ಪಾಟೀಲರ ಆ ತೀವ್ರ ಅಲೆಯ ನಡುವೆಯೂ ಜನತಾ ಪಕ್ಷದಿಂದ ಮಾಧುಸ್ವಾಮಿ ಗೆಲುವು ಕಂಡಿದ್ದರು.

2004ರಲ್ಲಿ ವಿಧಾನಸಭೆಯಲ್ಲಿ ಸಂಯುಕ್ತ ಜನತಾದಳದ ನಾಯಕರಾಗಿದ್ದ ಮಾಧುಸ್ವಾಮಿ ತಮ್ಮ ಮಾತುಗಾರಿಕೆಯಿಂದ ಗಮನ ಸೆಳೆದರು. ಹೀಗೆ ತಮ್ಮ ಬಹುತೇಕ ರಾಜಕೀಯ ಬದುಕನ್ನು ಜನತಾದಳದಲ್ಲಿ ಕಳೆದ ಮಾಧುಸ್ವಾಮಿ, ನಂತರ ಬಿ.ಎಸ್.ಯಡಿಯೂರಪ್ಪ ಅವರಿಗ ಆಪ್ತರಾದರು.

ಯಡಿಯೂರಪ್ಪ, ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದಾಗ ಅವರಿಗೆ ಬೆನ್ನೆಲುಬಾದರು. ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ಸೇರಿದ ನಂತರ ಜೆಸಿಎಂ ಸಹ ಅವರನ್ನು ಹಿಂಬಾಲಿಸಿದರು. ಹೀಗೆ ಸಮಾಜವಾದಿ ಹಿನ್ನೆಲೆಯ ಜೆಸಿಎಂ ಕೇಸರಿ ಪಕ್ಷದ ಪ್ರಮುಖ ನಾಯಕರಾದರು.

ಗೆದ್ದ ಬಳಿಕ ಬೆಂಗಳೂರಿನಲ್ಲಿ ಠಿಕಾಣಿ ಹೂಡುವ ಶಾಸಕರೇ ಹೆಚ್ಚು. ಆದರೆ ಮಾಧುಸ್ವಾಮಿ ಸಾಮಾನ್ಯ ಜನರ ಕೈಗೆ ಸಿಗುವರು ಎನ್ನುವುದು ಕ್ಷೇತ್ರ ಜನರ ನುಡಿ.

ಮಾಧುಸ್ವಾಮಿ ಅವರ ಒರಟು ಮತ್ತು ನೇರ ಮಾತುಗಳು, ಗತ್ತು ವಿರೋಧಿಗಳಿಗೂ ಅಸ್ತ್ರವಾಗಿದ್ದು ಇದೆ. ಅದೇನೇ ಇರಲಿ, ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಂತರ್ಜಲ ಕುಸಿದಿರುವ ಎರಡನೇ ತಾಲ್ಲೂಕು ಎನ್ನುವ ಕುಖ್ಯಾತಿಗೆ ತುತ್ತಾಗಿರುವ ಚಿಕ್ಕನಾಯಕನಹಳ್ಳಿ ಜನರಿಗೆ ಮಾಧುಸ್ವಾಮಿ ಸಚಿವರಾಗಿರುವುದು ಹೊಸ ಆಶಾವಾದವನ್ನು ಗರಿಗೆದರಿಸಿದೆ.

ಮಾಧುಸ್ವಾಮಿ ಅವರ ಪುತ್ರ ಅಭಿಜ್ಞ ವೈದ್ಯರಾಗಿದ್ದಾರೆ. ಮಗಳು ಅಪೇಕ್ಷಾ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

*

ಅಭಿವೃದ್ಧಿಯ ನಿರೀಕ್ಷೆ

ಜೆ.ಸಿ.ಮಾಧುಸ್ವಾಮಿ ಮತ್ತು ಸಿ.ಬಿ.ಸುರೇಶ್ ಬಾಬು ಅವರ ನಡುವೆಯೇ ಚಿಕ್ಕನಾಯಕನಹಳ್ಳಿ ತಾಲ್ಲೂಕು ರಾಜಕಾರಣ ಈ ಹಿಂದಿನಿಂದಲೂ ಗಿರಕಿ ಹೊಡೆಯುತ್ತಿದೆ.

ಆದರೆ ಯಾರ ಅವಧಿಯಲ್ಲಿಯೂ ತಾಲ್ಲೂಕಿನಲ್ಲಿ ಮಹತ್ವದ ಅಭಿವೃದ್ಧಿಯ ಯೋಜನೆಗಳು ಸಾಕಾರಗೊಂಡಿಲ್ಲ ಎನ್ನುವ ಆರೋಪ ಬಲವಾಗಿದೆ. ತಾಲ್ಲೂಕು ಹೇಳಿಕೊಳ್ಳುವಂತಹ ಅಭಿವೃದ್ಧಿ ಸಹ ಕಂಡಿಲ್ಲ. ನೀರಾವರಿಗಾಗಿ ಕಾತರಿಸಿರುವ ಇಲ್ಲಿನ ಜನರಲ್ಲಿ ಮಾಧುಸ್ವಾಮಿ ಅವರ ‘ಪದವಿ’ ನಿರೀಕ್ಷೆಗಳನ್ನು ಹುಟ್ಟಿಸಿದೆ.

*

ಮಾಧುಸ್ವಾಮಿ ರಾಜಕೀಯ ಹಾದಿ

1989: ಜನತಾದಳದಿಂದ ಸ್ಪರ್ಧೆ; ಗೆಲುವು

1994: ಜನತಾದಳದಿಂದ ಸ್ಪರ್ಧೆ; ಸೋಲು

1997: (ಉಪಚುನಾವಣೆ) ಜನತಾದಳದಿಂದ ಸ್ಪರ್ಧೆ; ಗೆಲುವು

1999: ಜನತಾದಳ (ಯು) ಸ್ಪರ್ಧೆ; ಸೋಲು

2004: ಜನತಾದಳ (ಯು) ಸ್ಪರ್ಧೆ; ಗೆಲುವು

2008: ಜನತಾದಳ (ಯು) ಸ್ಪರ್ಧೆ; ಸೋಲು

2013: ಕೆಜೆಪಿಯಿಂದ ಸ್ಪರ್ಧೆ; ಸೋಲು

2018: ಬಿಜೆಪಿಯಿಂದ ಸ್ಪರ್ಧೆ; ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT