ಮಧುಗಿರಿ: ಪಟ್ಟಣದಲ್ಲಿ ಬುಧವಾರ ನಡೆಯುವ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲು ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸುಣ್ಣ, ಬಣ್ಣ ಹಾಗೂ ಪ್ಲೆಕ್ಸ್ ರಾರಾಜಿಸುತ್ತಿವೆ. ಭದ್ರತೆಗೆ 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. 70 ಸಾವಿರಕ್ಕೂ ಹೆಚ್ಚು ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಿದ್ದು, ಒಂದು ಲಕ್ಷ ಜನರು ರಾಜ್ಯದ ವಿವಿಧ ಊರುಗಳಿಂದ ಬರುವ ನಿರೀಕ್ಷೆಯಿದೆ. ಬೆಳಿಗ್ಗೆ 8 ಗಂಟೆಯಿಂದಲೇ ತಿಂಡಿಯನ್ನು ನಿರಂತರವಾಗಿ ಮೂರು ಕಡೆಗಳಲ್ಲಿ 45 ಕೌಂಟರ್‌ಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಮೆಂತ್ಯೆ ಬಾತ್, ಪುಳಿಯೊಗರೆ, ಮೈಸೂರ್ ಪಾಕ್, ಎರಡು ಲಕ್ಷ ಮಜ್ಜಿಗೆ ಪಾಕೆಟ್ ಮತ್ತು ಎರಡು ಲಕ್ಷಕ್ಕೂ ಹೆಚ್ಚು ನೀರಿನ ಪಾಕೆಟ್ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯದ ವ್ಯವಸ್ಥೆ ಇರಲಿದೆ.
ತಾಲ್ಲೂಕಿನಲ್ಲಿ ಒಟ್ಟು ₹156 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಗುವುದು.
ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಪಶು ಸಂಗೋಪನಾ ಸಚಿವ ವೆಂಕಟೇಶ್, ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಜೆಲ್ಲೆಯ ಶಾಸಕರು ಸೇರಿದಂತೆ 50ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕ್ಷೀರ ಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಿದ್ದರಿಂದ ಹಾಲು ಒಕ್ಕೂಟಗಳು ಉಳಿಯಲು ಸಾಧ್ಯವಾಯಿತು. ಈ ಯೋಜನೆಯಿಂದ ರಾಜ್ಯದ 62 ಲಕ್ಷ ಮಕ್ಕಳಿಗೂ ಅನುಕೂಲವಾಗಿದೆ.
-ಕೆ.ಎನ್.ರಾಜಣ್ಣ ಸಹಕಾರ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.