ಮಂಗಳವಾರ, ಅಕ್ಟೋಬರ್ 20, 2020
22 °C
ಕೆಸರುಗದ್ದೆಯಾದ ರಸ್ತೆಗಳು: ಸಾರ್ವಜನಿಕರ ಸಂಚಾರಕ್ಕೆ ಕಿರಿಕಿರಿ

ಮಧುಗಿರಿ: ಒಳ ಚರಂಡಿ ತಂದ ಅವಾಂತರ

ಟಿ.ಪ್ರಸನ್ನಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ₹48.95 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಈ ಕಾಮಗಾರಿ ಕೆಲಸ ಮಳೆಗಾಲದಲ್ಲಿ ಪ್ರಾರಂಭ ಮಾಡಿರುವುದರಿಂದ ಪಟ್ಟಣದ ಬಹುತೇಕ ರಸ್ತೆಗಳು ಕೆಸರು ಗದ್ದೆಯಾಗಿ ಪರಿವರ್ತನೆಯಾಗಿವೆ. ಹೀಗಾಗಿ, ರಸ್ತೆ ಯಾವುದು? ಗುಂಡಿ ಯಾವುದು? ಎಂಬುದು ಸಾರ್ವಜನಿಕರಿಗೆ ತಿಳಿಯದಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿ 65 ಕಿ.ಮೀ. ಒಳಚರಂಡಿ ಕಾಮಗಾರಿ ಹಾದು ಹೋಗುತ್ತದೆ. ಸುಮಾರು 2,200 ಮ್ಯಾನ್‌ಹೋಲ್‌ಗಳನ್ನು ಅಳವಡಿಸಲಾಗುತ್ತಿದೆ.

ಪಟ್ಟಣದ ಟಿವಿವಿ ಬಡಾವಣೆ, ಪುರಸಭೆ ಮುಂಭಾಗ, ರಾಜರಾಜೇಶ್ವರಿ ಟಾಕಿಸ್ ರಸ್ತೆ, ಕೆ.ಆರ್.ಬಡಾವಣೆ, ವೆಂಕಟರಮಣ ದೇವಾಲಯ ರಸ್ತೆ, ಪಿಎಲ್‌ಡಿ ಬ್ಯಾಂಕ್ ರಸ್ತೆ, ಎಚ್.ಎಸ್.ರಸ್ತೆ, ರಾಘವೇಂದ್ರ ಕಾಲೊನಿ, ಕರಡಿಪುರ ಸೇರಿದಂತೆ ಪಟ್ಟಣದ ಬಹುತೇಕ ರಸ್ತೆ ಹಾಗೂ ಮುಖ್ಯರಸ್ತೆಗಳಲ್ಲಿ ಒಳ ಚರಂಡಿ ಕಾಮಗಾರಿ ಕೆಲಸ ನಡೆಯುತ್ತಿದೆ. ಆದರೆ, ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳಲ್ಲಿ ಜನರು ಸಂಚಾರ ಮಾಡಬೇಕಾದರೆ ಹರಸಾಹಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಒಳ ಚರಂಡಿ ಕಾಮಗಾರಿ ವೇಳೆ ಆ ಸ್ಥಳದಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್‌ಗಳನ್ನು ಕಿತ್ತು ಹಾಕಲಾಗುತ್ತಿದೆ. ಇದರಿಂದ ನಿವಾಸಿಗಳ ಮನೆಗಳಿಗೆ ನೀರು ಸರಬರಾಜು ಆಗದೆ ರಸ್ತೆ ತುಂಬೆಲ್ಲ ವ್ಯರ್ಥವಾಗಿ ನೀರು ಹರಿಯುತ್ತಿದೆ. ಒಡೆದು ಹೋಗಿರುವ ಪೈಪ್‌ಗಳನ್ನು ಸರಿಪಡಿಸುವಂತೆ ಒಳಚರಂಡಿ ಕಾಮಗಾರಿ ಗುತ್ತಿಗೆದಾರರಿಗೆ ಹೇಳಿದರೆ, ಇದೆಲ್ಲ ಪುರಸಭೆ ಅಧಿಕಾರಿಗಳು ಸರಿಪಡಿಸುತ್ತಾರೆ ಎಂದು ಸಬೂಬು ನೀಡುತ್ತಾರೆ. ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಯಾರೂ ಸರಿಪಡಿಸುತ್ತಿಲ್ಲ ಎಂದು ನಿವಾಸಿಗಳು ದೂರುತ್ತಾರೆ.

ಒಳ ಚರಂಡಿ ಕಾಮಗಾರಿ ನಿರ್ಮಾಣಕ್ಕಾಗಿ ರಸ್ತೆ ಮಧ್ಯಭಾಗದಲ್ಲಿ ಜೆಸಿಬಿ ಯಂತ್ರದಿಂದ ಅಗೆದ ಸ್ಥಳಗಳು ದಿನದಿಂದ ದಿನಕ್ಕೆ ಕುಸಿಯುತ್ತಿವೆ. ರಸ್ತೆಯಲ್ಲಿ ವಾಹನಗಳು ಸಿಲುಕಿಕೊಂಡು ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಿಲುಕಿಕೊಂಡ ವಾಹನಗಳನ್ನು ತೆಗೆಯಲು ಸವಾರರು ಹರಸಾಹಸ‌ ಪಡುತ್ತಿದ್ದಾರೆ. ಅಗೆದ ರಸ್ತೆಗಳನ್ನು ಬೇಕಾಬಿಟ್ಟಿ ಮುಚ್ಚುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸವಾರರು ದೂರುತ್ತಾರೆ.

ಮಳೆ ಬಂದಾಗ ರಸ್ತೆಗಳಲ್ಲಿ ಹಾಗೂ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದರಿಂದ ಜನರು ಹಾಗೂ ವಾಹನ ಸವಾರರು ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ವೃದ್ಧರು, ಮಹಿಳೆಯರು ಹಾಗೂ ಮಕ್ಕಳ ಪಾಡಂತೂ ಹೇಳತೀರದು. ಮಳೆಗಾಲದಲ್ಲಿ ಒಳ ಚರಂಡಿ ಕಾಮಗಾರಿ ಪ್ರಾರಂಭ ಮಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ವಾರ್ಡ್‌ನ ರಸ್ತೆಗಳಲ್ಲಿ ಒಳ ಚರಂಡಿ ಕಾಮಗಾರಿ ಕೆಲಸಗಳು ಅವೈಜ್ಞಾನಿಕವಾಗಿ ನಡೆಯುತ್ತಿವೆ. ಕಾಮಗಾರಿಗಳಿಗೆ ಬಳಸುತ್ತಿರುವ ಇಟ್ಟಿಗೆಗಳು ಕಳಪೆಯಿಂದ ಕೂಡಿವೆ ಎಂಬ ನಿವಾಸಿಗಳು ಆರೋಪಿಸುತ್ತಾರೆ.

ರಸ್ತೆಗಳನ್ನು ಅಗೆದ ಸ್ಥಳಗಳನ್ನು ಹಾಗೆಯೇ ಬಿಡಲಾಗಿದ್ದು, ಗುಂಡಿಗಳಲ್ಲಿ ಮಳೆ ನೀರು ನಿಂತುಕೊಳ್ಳುತ್ತದೆ. ಆ ನೀರಿನಲ್ಲಿ ಹಂದಿಗಳು ಒರಳಾಡುತ್ತವೆ. ಜತೆಗೆ ಸೊಳ್ಳೆಗಳ ಆವಾಸ ಕೇಂದ್ರವಾಗಿ ಮಾರ್ಪಟ್ಟಿದ್ದು, ರೋಗಗಳು ಹರಡುವ ಭೀತಿ ಎದುರಾಗಿದೆ.

ಅಲ್ಲದೆ, ಪಟ್ಟಣದ ಬಹುತೇಕ ಪಾದಚಾರಿ ರಸ್ತೆಗಳನ್ನು ಕೆಲ ಅಂಗಡಿ ಹಾಗೂ ಮನೆ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡಲು ತೊಂದರೆಯಾಗಿದೆ.

ಮಳೆಗಾಲದಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭ ಮಾಡಿರುವುದರಿಂದ ಆಯಾ ವಾರ್ಡ್‌ನ ನಿವಾಸಿಗಳಿಂದ ಕೆಲ ಪುರಸಭೆ ಸದಸ್ಯರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಸದಸ್ಯರಿಗೆ ಸರಿಯಾಗಿ ಅಧಿಕಾರ ಸಿಗದೇ ಇರುವುದರಿಂದ ನಿವಾಸಿಗಳ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಹೇಳಲೂ ಆಗದೆ ಸಮಯ ಕಳೆಯುತ್ತಿದ್ದಾರೆ.

ಮಳೆಗಾಲದಲ್ಲಿ ಒಳಚರಂಡಿ ಕಾಮಗಾರಿಗೆ ಪುರಸಭೆ ಸದಸ್ಯರು ಪ್ರಾರಂಭದಲ್ಲೇ ವಿರೋಧ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಒಳ ಚರಂಡಿ ಕಾಮಗಾರಿ ಮಾಡುವಾಗ ಗುತ್ತಿಗೆದಾರರು ನಿವಾಸಿಗಳಿಗೆ ತೊಂದರೆಯಾಗದ ರೀತಿ ಕೆಲಸ- ಕಾರ್ಯಗಳನ್ನು ಮಾಡಬೇಕು. ಈ ಒಳಚರಂಡಿಗೆ ಸಂಬಂಧಿಸಿದ ಎಂಜಿನಿಯರ್‌ಗಳು ಆಗಾಗ್ಗೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸುವ ಜತೆಗೆ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

***

ಅಂಕಿ ಅಂಶ

₹48.95 ಕೋಟಿ ವೆಚ್ಚ

ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಒಳ ಚರಂಡಿ

65 ಕಿ.ಮೀ

ಒಂ ಚರಂಡಿ ನಿರ್ಮಾಣದ ವ್ಯಾಪ್ತಿ

2,200

ಪಟ್ಟಣ ವ್ಯಾಪ್ತಿಯಲ್ಲಿ ಮ್ಯಾನ್‌ಹೋಲ್‌ ಅಳವಡಿಕೆ

***

ಮಳೆಗಾಲ ಮುಗಿಯುವವರೆಗೂ ಕೆಲಸ ಸ್ಥಗಿತ

ಮಳೆಗಾಲದಲ್ಲಿ ಕಾಮಗಾರಿ ಕೆಲಸ ಮಾಡುತ್ತಿರುವುದರಿಂದ ರಸ್ತೆಗಳು ಕೆಸರುಗದ್ದೆಯಾಗಿವೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಳೆಗಾಲ ಮುಗಿಯುವವರೆಗೂ ಕಾಮಗಾರಿ ಮಾಡದಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ತಿಳಿಸಲಾಗಿದೆ.

ಅಮರನಾರಾಯಣ, ಮುಖ್ಯಾಧಿಕಾರಿ, ಪುರಸಭೆ

***

ಮಲೀನ ನೀರು ಶುದ್ಧೀಕರಣ ಘಟಕ

‘ಈಗಾಗಲೇ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 2 ಎಕರೆ ಪ್ರದೇಶದಲ್ಲಿ 4 ಎಂ.ಎಲ್.ಡಿ ಸಾಮರ್ಥ್ಯದ ಮಲೀನ ನೀರು ಶುದ್ಧೀಕರಣ ಘಟಕ, ಲಿಂಗೇನಹಳ್ಳಿಯ ಸರ್ವೆ ನಂಬರ್ 99ರಲ್ಲಿ 25 ಗುಂಟೆ ಪ್ರದೇಶದಲ್ಲಿ 0.6 ಎಂ.ಎಲ್‌.ಡಿ ಸಾಮರ್ಥ್ಯದ ಮಲೀನ ನೀರು ಶುದ್ಧೀಕರಣ ಘಟಕ ಹಾಗೂ ಗುರುವಡೇರಹಳ್ಳಿ ಸರ್ವೆ 59ರಲ್ಲಿ 25 ಗುಂಟೆ ಜಾಗದಲ್ಲಿ ಮಲೀನ ನೀರು ಶುದ್ಧೀಕರಣ ಮಾಡಲು ತೆರೆದ ಬಾವಿ ನಿರ್ಮಿಸಲಾಗುವುದು ಎಂದು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಎಇಇ ಕೆ.ಸಿದ್ದನಂಜಯ್ಯ ತಿಳಿಸಿದರು.

ಒಳ ಚರಂಡಿ ಕಾಮಗಾರಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಬೇಕು‌. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ಕೆಲಸ ಮಾಡಬೇಕು. ಗುಂಡಿ ಬಿದ್ದಿರುವ ಸ್ಥಳಗಳಲ್ಲಿ ಮಣ್ಣು ಹಾಕಬೇಕು ಹಾಗೂ ಸೂಚನ ಫಲಕಗಳನ್ನು ಅಳವಡಿಸಬೇಕು. ಮಳೆಗಾಲ ಮುಗಿಯುವವರೆಗೂ ಜನ ವಸತಿ ಪ್ರದೇಶದಲ್ಲಿ ಕಾಮಗಾರಿ ನಿಲ್ಲಿಸಿ, ಪಟ್ಟಣದ ಹೊರ ಭಾಗದಲ್ಲಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. 

***

ಮಳೆಗಾಲದಲ್ಲಿ ಒಳ ಚರಂಡಿಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿ ಕೆಲಸ ಮಾಡುವಾಗ ನಿವಾಸಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು
ಮಂಜುನಾಥ್, ಶ್ರೀನಿವಾಸ ಬಡಾವಣೆಯ ನಿವಾಸಿ, ಮಧುಗಿರಿ

ಒಳ ಚರಂಡಿ ಕಾಮಗಾರಿಗಾಗಿ ಅಗೆದ ಸ್ಥಳಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಓಡಾಡಲು ತೊಂದರೆ ಆಗಿದೆ. ಆ ಸ್ಥಳಗಳನ್ನು ಆಗಾಗ್ಗೆ ಮಣ್ಣಿನಿಂದ ಮುಚ್ಚಬೇಕು
ಎ.ರಮೇಶ್, ಅಧ್ಯಕ್ಷರು, ವಾಸವಿ ವಿವಿಧೋದ್ದೇಶ ಸಹಕಾರ ಬ್ಯಾಂಕ್, ಮಧುಗಿರಿ

ಒಳ ಚರಂಡಿ ಕಾಮಗಾರಿ ಪ್ರಾರಂಭ ಮಾಡಿರುವುದರಿಂದ ರಸ್ತೆಗಳು ಕೆಸರುಗದ್ದೆಯಾಗಿವೆ. ಕೆಲಸ ಮಾಡುವಾಗ ಕುಡಿಯುವ ನೀರಿನ ಪೈಪ್ ಹೊಡೆದು ಹೋದರೆ ತಕ್ಷಣ ಸರಿ ಪಡಿಸಬೇಕು
ಜಿ.ಗಂಗಾಂಭಿಕೆ, ನಿವಾಸಿ, ರಾಘವೇಂದ್ರ ಕಾಲೊನಿ

ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ಅತಿ ಜರೂರಾಗಿ ಪೂರ್ಣಗೊಳಿಸಬೇಕು
ಚೈತ್ರಾ ಮಂಜುನಾಥ್, ನಿವಾಸಿ, ರಾಘವೇಂದ್ರ ಕಾಲೊನಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು