ಮಂಗಳವಾರ, ನವೆಂಬರ್ 12, 2019
27 °C
ಮಡಿವಾಳ ಸಂಘದ ಪ್ರತಿಭಾ ಪುರಸ್ಕಾರ ಪ್ರದಾನ

ಪ್ರಯತ್ನದ ಛಲವೇ ಸಾಧಕರ ಆಸ್ತಿ : ಬಸವ ಸ್ವಾಮೀಜಿ

Published:
Updated:
Prajavani

ತುಮಕೂರು: ಸಾಧಕರಾಗಲು ಹಣ–ಆಸ್ತಿ ಬೇಕಾಗಿಲ್ಲ. ಪ್ರಯತ್ನದ ಛಲವೇ ದೊಡ್ಡ ಆಸ್ತಿ. ಅದಿದ್ದರೆ ಬೇಕಾದುದನ್ನು ಸಾಧಿಸಬಹುದು ಎಂದು ಮಾಚಿದೇವ ಗುರುಪೀಠದ ಬಸವಮಾಚಿದೇವ ಸ್ವಾಮೀಜಿ ಹೇಳಿದರು.

ತುಮಕೂರು ಜಿಲ್ಲಾ ಮಡಿವಾಳ ಸಂಘ ಮತ್ತು ತುಮಕೂರು ಜಿಲ್ಲಾ ಮಡಿವಾಳ ನೌಕರರ ಸಮಾಜ ಸೇವಾ ಸಂಘವು ಭಾನುವಾರ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ ಮತ್ತು ಸಮುದಾಯದ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಪ್ರತಿಭೆಗಳನ್ನು ಮತ್ತು ಸಾಧಕರನ್ನು ಗುರುತಿಸುವ ಅವಶ್ಯಕತೆ ಇದೆ. ಸಮುದಾಯದಲ್ಲಿ ನಮ್ಮ ಸಂಘಕ್ಕಾಗಿ ದುಡಿಯುವವರ ಸಂಖ್ಯೆ ಕಡಿಮೆ ಇದೆ.  ನಮ್ಮವರು ಬೇರೆ–ಬೇರೆ ಸಂಘ, ಪಕ್ಷಗಳ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರನ್ನು ನಮ್ಮೊಡನೆ ಸೇರಿಸಿಕೊಳ್ಳಬೇಕು. ಮಡಿವಾಳ ಮಾಚಿದೇವರ ಪ್ರೇರಣೆಯಿಂದ ನಾವೆಲ್ಲ ಸೇವಕರಾಗಿ ದುಡಿಯಬೇಕು. ನಾಯಕರಾಗಿ ಬೆಳೆಯಬೇಕು ಎಂದರು.

ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ, ಸಮುದಾಯವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಲು ಹೋರಾಟ ನಡೆಯುತ್ತಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾಗ ಸಮುದಾಯದ ಸ್ಥಿತಿಗತಿ ಕುರಿತು ಅಣ್ಣಪೂರ್ಣಮ್ಮ ವರದಿ ಸಿದ್ಧಗೊಂಡಿದೆ. ಅದರ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್‌ನ ಮಾಜಿ ಸದಸ್ಯ ಶಂಕರಪ್ಪ, ಸಮುದಾಯ ಆಯೋಜಿಸುವ ಸಮಾವೇಶಗಳಿಗೆ ಬರುವ ಜನಪ್ರತಿನಿಧಿಗಳು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ. ಭರವಸೆ ನೀಡುತ್ತಾರೆ. ಕೆಲಸಗಳನ್ನು ಮಾಡಿಕೊಡಲು ಬೇರೆ ಸಮುದಾಯದವರ ಮುಖ ನೋಡುತ್ತಾರೆ ಎಂದು ಬೇಸರಿಸಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಮ್ಮ, ಸಮಾಜದಲ್ಲಿನ ಉನ್ನತ ವರ್ಗಗಳ ವಿದ್ಯಾರ್ಥಿಗಳೊಂದಿಗೆ ಕೆಳವರ್ಗದ ಮಕ್ಕಳು ಸ್ಪರ್ಧಿಸಲು ಪ್ರತಿಭೆ, ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿದ್ಯೆಯಿಂದ‌ ಗೌರವ ಸಿಗುತ್ತದೆ. ಪೋಷಕರು ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಬಾಲ್ಯ ವಿವಾಹ ಮಾಡಿಸಬಾರದು ಎಂದು ಸಲಹೆ ನೀಡಿದರು.

ಸಮುದಾಯದ ಮುಖಂಡ ಅಮರನಾಥ್, ಸಂಘದ ಚಟುವಟಿಕೆಗಳಲ್ಲಿ ಸಮುದಾಯದ ಸಾಕ್ಷಕರು ಭಾಗವಹಿಸುತ್ತಿಲ್ಲ. ಸಂಘದ ವಸತಿ ನಿಲಯವನ್ನು ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳಿಂದ ದೇಣಿಗೆ ಸಂಗ್ರಹಿಸಬೇಕಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.‌

ಎಸ್.ಎಸ್‌.ಎಲ್‌.ಸಿ. ಮತ್ತು ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಪುರಸ್ಕಾರ ಲೇಖನ ಸಾಮಗ್ರಿ ಒಳಗೊಂಡಿತ್ತು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯಾಧ್ಯಕ್ಷ ಬಿ.ರಂಗಸ್ವಾಮಯ್ಯ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್‌, ಸಮುದಾಯದ ಮುಖಂಡರಾದ ಮುದಿಮಡು ರಂಗಸ್ವಾಮಯ್ಯ, ರಾಜಣ್ಣ, ಶಾಂತಕುಮಾರ್‌, ಆರ್‌.ಕೃಷ್ಣಮೂರ್ತಿ, ಎಂ.ಎ.ಆನಂದಮೂರ್ತಿ, ವಿಷ್ಣುವರ್ಧನ್‌ ಇದ್ದರು.

‘ಎಸ್‌.ಸಿ.ಗೆ ಸೇರಿಸದವರು ಎಕ್ಸ್‌ ಆಗ್ತಾರೆ’

ನಮ್ಮ ಸಮುದಾಯವನ್ನು ಎಸ್.ಸಿ.(ಪರಿಶಿಷ್ಟ ಜಾತಿ) ಪಟ್ಟಿಗೆ ಸೇರಿಸಲು ಅಡ್ಡಗಾಲು ಹಾಕಿದ ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಈಗ ಎಕ್ಸ್(ಮಾಜಿ ಶಾಸಕ) ಆಗಿದ್ದಾರೆ. ಅವರಿಗೆ ಮಾಚಿದೇವರ ಶಾಪ ತಟ್ಟಿದೆ ಎಂದು ಸಂಘದ ಅಧ್ಯಕ್ಷ ಸಿ.ನಂಜಪ್ಪ ಹೇಳಿದರು.

ನಮ್ಮ ಸಮುದಾಯಕ್ಕೆ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಮಾತ್ರ ಮೀಸಲಾತಿ ನೀಡಿ ಎಂದು ಒತ್ತಾಯಿಸಿದರು.

ಪೋಷಕರು ಒಪ್ಪತ್ತು ಊಟ ಇಲ್ಲದಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸಮುದಾಯದ ಆರ್ಥಿಕ ಅಶಕ್ತರಿಗೆ ಸಂಘದಿಂದ ನೆರವು ನೀಡುತ್ತಿದ್ದೇವೆ. ಅದಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)