ತುಮಕೂರು: ಜಿಲ್ಲಾ ಆಸ್ಪತ್ರೆಗೆ ಮೇಜರ್ ಸರ್ಜರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮುಂದಾಗಿದ್ದು, 5 ವರ್ಷಕ್ಕಿಂತ ಹೆಚ್ಚು ಸಮಯದಿಂದ ತಳವೂರಿರುವ ವೈದ್ಯರು, ನರ್ಸ್, ಇತರೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ನಿರ್ಧರಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಯನ್ನು ಶಾಸಕರು ಬಿಚ್ಚಿಟ್ಟರು. ಇದಕ್ಕೆ ಸ್ಪಂದಿಸಿದ ಸಚಿವರು ಕ್ರಮದ ಭರವಸೆ ನೀಡಿದರು.
‘ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ಶಾಸಕರು ತಿಳಿಸಿದ್ದಾರೆ. ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಆಸ್ಪತ್ರೆಯನ್ನು ಸರಿ ದಾರಿಗೆ ತರದಿದ್ದರೆ ಬಡವರಿಗೆ ಚಿಕಿತ್ಸೆ ಸಿಗುವುದಿಲ್ಲ. ಡಿ ದರ್ಜೆ ನೌಕರರಿಂದ ಹಿಡಿದು ವೈದ್ಯರ ವರೆಗೆ 5 ವರ್ಷಗಳಿಗೂ ಹೆಚ್ಚು ಸಮಯ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಪಟ್ಟಿಯನ್ನು ನೀಡಬೇಕು. ಅಂತಹವರನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಕುಡುಕ ವೈದ್ಯರು, ಜೂಜಿನಲ್ಲಿ ತೊಡಗಿಸಿಕೊಂಡು ಸಿಕ್ಕಿಬಿದ್ದ ವೈದ್ಯರನ್ನು ಅಮಾನತು ಮಾಡಿದರೆ ಸಾಲದು. ಅಂತಹವರನ್ನು ಸೇವೆಯಿಂದ ವಜಾಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಆಸ್ಪತ್ರೆ ಅವ್ಯವಸ್ಥೆಯನ್ನು ಸಭೆಯಲ್ಲಿ ತೆರೆದಿಟ್ಟರು. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಣ್ಣ ಅಪಘಾತವಾಗಿ ಗಾಯಗೊಂಡವರನ್ನೂ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಆಂಬುಲೆನ್ಸ್ ಮಾಫಿಯಾ ಇದರಲ್ಲಿ ಕೆಲಸ ಮಾಡುತ್ತಿದೆ. ಟ್ರಾಮ ಸೆಂಟರ್‌ಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಕರೆಮಾಡಿ ಹೇಳಿದರೂ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಹ ಇದಕ್ಕೆ ಧ್ವನಿಗೂಡಿಸಿದರು. ‘ನಾನು ಸಾಕಷ್ಟು ಸಲ ಭೇಟಿನೀಡಿ ಪರಿಶೀಲಿಸಿ ಎಚ್ಚರಿಕೆ ನೀಡಿದ್ದೇನೆ. ಆದರೂ ಏನೇನೂ ಕೆಲಸ ಮಾಡುತ್ತಿಲ್ಲ’ ಎಂದರು.
ಕೆಲಸದಿಂದ ಬಿಡುಗಡೆ:
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡದ ತಿಪಟೂರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಸಭೆಯಲ್ಲಿ ಸಚಿವರು ಆದೇಶಿಸಿದರು. ಶಾಸಕ ಕೆ.ಷಡಕ್ಷರಿ ಈ ಬಗ್ಗೆ ಪ್ರಸ್ತಾಪಿಸಿದರು.
ನೋಟಿಸ್: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗುರಿಮುಟ್ಟದ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಅವರಿಗೆ ನೋಟಿಸ್ ಜಾರಿಗೆ ಸೂಚಿಸಿದರು. ತಮ್ಮ ಇಲಾಖೆಗಳಲ್ಲಿ ಗುರಿ ಮುಟ್ಟದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ನೋಟಿಸ್ ನೀಡುವಂತೆ ನಿರ್ದೇಶಿಸಿದರು.
ತರಾಟೆಗೆ: ಸಭೆಗೆ ತಡವಾಗಿ ಬಂದ ಅಧಿಕಾರಿಗಳನ್ನು ಪರಮೇಶ್ವರ ತರಾಟೆಗೆ ತೆಗೆದುಕೊಂಡರು. ‘ಸಭೆಗೆ ಯಾವಾಗ ಬೇಕಾದರೂ ಬರಬಹುದು, ಹೋಗಬಹುದು. ಇದೇನು ಗೋಪಾಲಪ್ಪನ ಛತ್ರವೆ’ ಎಂದು ಪ್ರಶ್ನಿಸಿದರು. ಸಭೆಗೆ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು. ಹಿಂದಿನ ಸಭೆಗೆ ಗೈರಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಾಸಕರು ತಡವಾಗಿ ಬಂದಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ತಡವಾಗಿ ಬಂದರೆ ಕ್ರಮ ಕೈಗೊಳ್ಳುತ್ತೇವೆ. ನಿಮ್ಮನ್ನು ಏನು ಮಾಡುವುದು ಎಂದು ಕುಟುಕಿದರು.
ಪೈಪ್ ಕಳವು: ಮಧುಗಿರಿಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ತಂದಿದ್ದ ಪೈಪ್‌ಗಳನ್ನು ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳಿಗೆ ನೋಟಿಸ್ ಜಾರಿಗೆ ಪರಮೇಶ್ವರ ಸೂಚಿಸಿದರು.
‘ಲಾರಿಗೆ ಪೈಪ್ ತುಂಬಿಕೊಂಡು ಹೋಗುವುದನ್ನು ಗಮನಿಸಿ ನಾನು ತಡೆ ಹಿಡಿದಿದ್ದೇನೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಚಿವ ಕೆ.ಎನ್.ರಾಜಣ್ಣ ಸಭೆಯ ಗಮನಕ್ಕೆ ತಂದರು.
ಶಿಕ್ಷಕರಿಗೇ ಪಾಠ ಮಾಡಲು ಬರಲ್ಲ: ರಾಜಣ್ಣ ತುಮಕೂರು: ಶಿಕ್ಷಕರಿಗೆ ವಿಷಯ ಗೊತ್ತಿಲ್ಲ. ಪಾಠ ಮಾಡಲು ಬರುವುದಿಲ್ಲ. ಇನ್ನೂ ಮಕ್ಕಳಿಗೆ ಏನು ಕಲಿಸುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಶಿಕ್ಷಕರ ವಿರುದ್ಧ ಚಾಟಿ ಬೀಸಿದರು. ಮೊದಲು ಶಿಕ್ಷಕರಿಗೆ ಪಾಠಮಾಡಿ ನಂತರ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಮಕ್ಕಳ ಕಲಿಕೆ ಸುಧಾರಿಸುವುದಿಲ್ಲ ಎಂದರು. ‘ಶಿಕ್ಷಕರು ಪಾಠ ಮಾಡುವುದು ಬಿಟ್ಟು ಬೇರೆಲ್ಲ ಮಾಡುತ್ತಿದ್ದಾರೆ. ಶಾಲೆಗೆ ಹೋಗಲ್ಲ ಪಾಠ ಮಾಡುವುದಿಲ್ಲ ಎಂಬ ಧೋರಣೆ ಹೊಂದಿದ್ದಾರೆ. ನಾನು ಗಮನಿಸಿದಂತೆ ಬಹಳಷ್ಟು ಶಿಕ್ಷಕರಿಗೆ ವಿಷಯ ಗೊತ್ತಿಲ್ಲ. ಮಕ್ಕಳಿಗೆ ಯಾವ ರೀತಿ ಪಾಠ ಮಾಡಬೇಕು ಎಂಬುದನ್ನು ಅರಿತುಕೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಆರ್‌ಸಿ ಸಿಆರ್‌ಪಿಗಳಿಗೂ ಪಾಠ ಮಾಡುವುದು ಗೊತ್ತಿಲ್ಲ. ಅವರು ಮೂರು ಕಾಸಿನ ಕೆಲಸ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಸಾಧ್ಯವೆ ಎಂದು ಕೇಳಿದರು. ಸಚಿವ ಜಿ.ಪರಮೇಶ್ವರ ‘ಗುಣಮಟ್ಟ ಇಲ್ಲದ ಶಿಕ್ಷಕರು ಇದ್ದಾರೆ. ಪ್ರತಿ ವರ್ಷವೂ ಶಿಕ್ಷಕರ ಮೌಲ್ಯಮಾಪನ ಮಾಡುವ ವ್ಯವಸ್ಥೆ ಜಾರಿಗೆ ತಂದರೆ ಗುಣಮಟ್ಟ ಸುಧಾರಿಸಲಿದೆ. ಇದನ್ನು ತುರ್ತಾಗಿ ಮಾಡುಬೇಕು’ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ಮಾಡಿದರು. ಶಾಸಕ ಬಿ.ಸುರೇಶ್‌ಗೌಡ ‘ನಾಯಿಕೊಡೆಗಳಂತೆ ಶಾಲೆಗಳನ್ನು ಆರಂಭಿಸುವ ಬದಲು ಗ್ರಾಮ ಪಂಚಾಯಿತಿಗೆ ಒಂದು ಗುಣಮಟ್ಟದ ಶಾಲೆ ತೆರೆದು ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು. ಅನಗತ್ಯ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು’ ಎಂದು ಸಲಹೆ ಮಾಡಿದರು.
ತೆಂಗು ಪಾರ್ಕ್ ತೆಂಗು ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಅವರಿಗೆ ಪರಮೇಶ್ವರ ನಿರ್ದೇಶಿಸಿದರು. ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಯಾವುದೇ ಪ್ರಗತಿಯಾಗಿಲ್ಲ ಎಂದು ಶಾಸಕರು ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಯೋಜನೆ ಸಿದ್ಧಪಡಿಸಲು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.