ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ ಆಗದಂತೆ ನೋಡಿಕೊಳ್ಳಿ

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ
Last Updated 17 ಜೂನ್ 2019, 16:18 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ 28 ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಯಾವುದೇ ಗ್ರಾಮಗಳಿಗೆ ಕೂಡಲೇ ಕೊಳವೆ ಬಾವಿ ಕೊರೆಯಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದಿಂದ ಇಲಾಖೆಗಳಿಗೆ ಬರುವ ಅನುದಾನಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಬೇಕು. ರೈತರು ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಇಲಾಖೆಗಳ ಮುಖ್ಯ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ತಾಲ್ಲೂಕಿನ 343 ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತುರ್ತಾಗಿ ಕೊಳವೆಬಾವಿ ಕೊರೆಯಿಸಿ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕೊಳವೆ ಬಾವಿಗಳಲ್ಲಿ ನೀರು ಸಿಗದ ಕೆಲವು ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಖರೀದಿಸಿ ಸರಬರಾಜು ಮಾಡಲಾಗುತ್ತಿದೆ. ತಾಲ್ಲೂಕಿನ ಅರಳೇರಿ ಗ್ರಾ.ಪಂ.ವ್ಯಾಪ್ತಿಯ ವೀರಾಪುರ ಗ್ರಾಮಕ್ಕೆ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹುಂಗೇನಹಳ್ಳಿ ಗ್ರಾ.ಪಂ.ಯ ಚಿಕ್ಕ ಸಬ್ಬೆನಹಳ್ಳಿ , ಕುಡಿಯನೂರು ಗ್ರಾ.ಪಂ.ವ್ಯಾಪ್ತಿಯ ಅರಣಿಗಟ್ಟ, ಟೇಕಲ್ ಗ್ರಾ.ಪಂ.ವ್ಯಾಪ್ತಿಯ ಸೋಮಸಂದ್ರ , ಮಾಸ್ತಿ ಗ್ರಾ.ಪಂ.ವ್ಯಾಪ್ತಿಯ ಗಂಗಸಂದ್ರ , ಮಾಸ್ತಿ ಗ್ರಾಮದ ರಾಜೀವ ನಗರ 1ನೇ ಬ್ಲಾಕ್, ಅಸಾಂಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕುಪ್ಪೂರು, ರಾಜೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ದೊಡ್ಡ ಇಗ್ಗಲೂರು ಮತ್ತು ತುರಣಿಸಿ ಗ್ರಾ.ಪಂ.ವ್ಯಾಪ್ತಿಯ ದುರಸಾಂಡಹಳ್ಳಿ, ದಿನ್ನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಪಾಳ್ಯ ಮತ್ತು ಲಕ್ಕೂರು ಗ್ರಾ.ಪಂ.ವ್ಯಾಪ್ತಿಯ ಚೂಡುಗೊಂಡನಹಳ್ಳಿ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮುಂಗಾರು ಚುರುಕುಗೊಂಡು ಮಳೆ ಆರಂಭವಾದರೆ ಅಂತರ್ಜಲ ಏರಿಕೆಯಾಗಿ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದು ಹೇಳಿದರು.

ತಾ.ಪಂ.ಅಧ್ಯಕ್ಷೆ ತ್ರಿವರ್ಣ ರವಿ , ಉಪಾಧ್ಯಕ್ಷೆ ನಾಗವೇಣಿ ಚಂದ್ರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್, ಕೃಷ್ಣಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

*

67 ಗ್ರಾಮಗಳಲ್ಲಿ ನೀರಿನ ಅಭಾವ

ತಾಲ್ಲೂಕಿನ 28 ಗ್ರಾ.ಪಂ. ವ್ಯಾಪ್ತಿಯಲ್ಲಿ 67 ಗ್ರಾಮಗಳಲ್ಲಿ ನೀರಿನ ಅಭಾವ ಕಾಣಿಸಿಕೊಂಡಿತ್ತು. 32 ಗ್ರಾಮಗಳಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡಲಾಗಿದೆ. 23 ಗ್ರಾಮಗಳಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಟ್ಯಾಂಕರ್ ಮೂಲಕ ಒಂದು ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. 9 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ 13 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ನಾರಾಯಣಸ್ವಾಮಿ ಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT