ಬುಧವಾರ, ಆಗಸ್ಟ್ 21, 2019
27 °C

ಪತ್ನಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

Published:
Updated:

ತುಮಕೂರು: ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ₹ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಶಿರಾನಗರದ ಮೆಹಬೂಬನಗರ ಬಡಾವಣೆ ನಿವಾಸಿ ಅಫ್ಜಲ್ ಶಿಕ್ಷೆಗೆ ಗುರಿಯಾದ ಆರೋಪಿ. ದಂಡ ಕಟ್ಟಲು ಆರೋಪಿ ತಪ್ಪಿದ್ದಲ್ಲಿ 3 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣ ಹಿನ್ನೆಲೆ: ಆರೋಪಿಯು ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ದುಡಿಮೆಯಿಂದ ಬಂದ ಹಣವನ್ನು ಮದ್ಯಪಾನ ಮಾಡಲು ಬಳಸಿಕೊಳ್ಳುತ್ತಿದ್ದ. ಮನೆ ನಿರ್ವಹಣೆ, ಬಾಡಿಗೆಗೆ ಹಣ ಕೊಡಲು ಆತನ ಪತ್ನಿ ಬಲ್ಕಿಸ್ ಬಾನು ಕೇಳಿದಾಗ ಜಗಳ ತೆಗೆದಿದ್ದ. ಮನೆಯಲ್ಲಿದ್ದ ಚಿಕ್ಕಮಕ್ಕಳನ್ನು ಮನೆಯ ಹೊರಗಡೆ ಕಳುಹಿಸಿ ಮನೆ ಬಾಗಿಲು, ಕಿಟಕಿ ಹಾಕಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಹೋಗಿದ್ದ. ಹೋಗುವಾಗ ತನ್ನ 11 ವರ್ಷದ ಮಗಳಿಗೆ ನಿನ್ನ ತಾಯಿ ಕೊಲೆ ಮಾಡಿದ್ದು, ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲೆ ಮಾಡುತ್ತೇನೆ ಎಂದು ಹೆದರಿಸಿದ್ದ.

‍ಪ್ರಕರಣ ಕುರಿತು ತನಿಖೆ ನಡೆಸಿದ ಶಿರಾನಗರ ನಗರ ಪೊಲೀಸ್ ಠಾಣೆ ಸಿಪಿಐ ಲಕ್ಷ್ಮಯ್ಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ಕುರಿತು ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ತಾರಕೇಶ್ವರ ಗೌಡ ಪಾಟೀಲ್ ಅವರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ಆರ್‌.ಟಿ.ಅರುಣಾ ವಾದ ಮಂಡಿಸಿದ್ದರು.

Post Comments (+)