ತಿಪಟೂರು: ಹೆಂಡತಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದ ಆರೋಪಿ ನಿಂಗಪ್ಪ ಎಂಬಾತನನ್ನು 27 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಕುಡುವನಘಟ್ಟ ಗ್ರಾಮ ನಿಂಗಪ್ಪ 1997ರ ಮೇ 4ರಂದು ಪತ್ನಿ ಗೌರಮ್ಮಗೆ ಬೆಂಕಿ ಹಚ್ಚಿ ತಲೆ ಮರೆಸಿಕೊಂಡಿದ್ದ. ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈಚೆಗೆ ಕುಡುವನಘಟ್ಟ ಗ್ರಾಮಕ್ಕೆ ವಾಪಸ್ ಬಂದಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ತಿಪಟೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಸಿದ್ದರಾಮೇಶ್ವರ, ನೊಣವಿನಕೆರೆ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಆರ್.ಅಭಿಷೇಕ್, ಸಿಬ್ಬಂದಿ ಅಜಿತ್, ಪ್ರಭುಲಿಂಗ ಪೂಜಾರಿ ಮತ್ತು ಗಜೇಂದ್ರ ಅವರ ತಂಡ ಕಾರ್ಯಾಚರಣೆ ನಡೆಸಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.