ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ತೊಗರಿ ಬೇಳೆ ಮತ್ತೆ ದುಬಾರಿ

ಜೀರಿಗೆ ಕೆ.ಜಿ ₹600ರ ಗಡಿಯತ್ತ; ಅಕ್ಕಿ ಬೆಲೆಯೂ ಏರಿಕೆ
Published 20 ಮೇ 2023, 15:26 IST
Last Updated 20 ಮೇ 2023, 15:26 IST
ಅಕ್ಷರ ಗಾತ್ರ

ತುಮಕೂರು: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ತೊಗರಿ ಬೇಳೆ ಸೇರಿದಂತೆ ಬೇಳೆ ಕಾಳುಗಳು, ಮಸಾಲೆ ಪದಾರ್ಥಗಳ ಬೆಲೆ ಏರಿಕೆಯತ್ತ ಸಾಗಿವೆ. ಕೆಲವು ತರಕಾರಿಗಳ ದರ ಹೆಚ್ಚಳವಾಗಿದ್ದು, ಕೋಳಿ ಮಾಂಸ, ಮೀನು ದುಬಾರಿಯಾಗಿದೆ. ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮಾವಿನ ಹಣ್ಣು ದುಬಾರಿಯಾಗಿಯೇ ಇದೆ.

ಗೆಡ್ಡೆಕೋಸು ದುಬಾರಿ: ಕೆಲವು ತರಕಾರಿಗಳ ಬೆಲೆ ಹೆಚ್ಚಳವಾಗಿದ್ದರೆ, ಮತ್ತೆ ಕೆಲವು ಇಳಿಕೆ ಕಂಡಿವೆ. ಗೆಡ್ಡೆಕೋಸು ಒಮ್ಮೆಲೆ ಎರಡು ಪಟ್ಟು ದುಬಾರಿಯಾಗಿದ್ದು, ಕೆ.ಜಿ ₹50–60ಕ್ಕೆ ಜಿಗಿದಿದೆ. ಕ್ಯಾರೇಟ್, ಬೀಟ್ರೂಟ್, ಮೂಲಂಗಿ, ಎಲೆಕೋಸು, ತೊಂಡೆಕಾಯಿ, ನುಗ್ಗೆಕಾಯಿ ದರ ಏರಿಕೆಯಾಗಿದೆ. ಆಲೂಗಡ್ಡೆ, ಬೆಂಡೆಕಾಯಿ, ಬದನೆಕಾಯಿ, ಹಸಿರು ಮೆಣಸಿನ ಕಾಯಿ ಧಾರಣೆ ಅಲ್ಪ ಇಳಿಕೆಯಾಗಿದೆ.

ಈ ವರ್ಷದ ಆರಂಭದಿಂದಲೂ ಶುಂಠಿ ಬೆಲೆ ಏರುತ್ತಲೇ ಸಾಗಿದ್ದು, ಈಗ ಬಹುತೇಕ ತಪ್ಪಟ್ಟಾಗಿದೆ. ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದು ಕೆ.ಜಿ ₹120– 160ಕ್ಕೆ ಹೆಚ್ಚಳವಾಗಿದೆ. ಈವರೆಗೆ ತೀವ್ರ ಕುಸಿತ ಕಂಡಿದ್ದ ಟೊಮೆಟೊ ಬೆಲೆ ಈ ವಾರ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಂತೆ ಕಾಣುತ್ತಿದೆ.

ಸೊಪ್ಪು ಏರಿಕೆ: ಬೇಸಿಗೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದ್ದು, ಸೊಪ್ಪಿನ ಬೆಲೆಯೂ ಅದೇ ದಾರಿಯಲ್ಲಿ ಸಾಗಿದೆ. ಮೆಂತ್ಯೆ, ಪಾಲಕ್ ಸೊಪ್ಪು ದರ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಸೊಪ್ಪು ಕೆ.ಜಿ ₹60–70, ಮೆಂತ್ಯ ಕೆ.ಜಿ ₹70–80, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಏರಿಕೆಯಾಗಿದೆ.

ಬಾಳೆ ಹಣ್ಣು ಇಳಿಕೆ: ಮಾರುಕಟ್ಟೆಗೆ ಮಾವಿನ ಹಣ್ಣು ಕಾಲಿಡುತ್ತಿದ್ದಂತೆ ಇತರೆ ಹಣ್ಣುಗಳ ಬೆಲೆ ನಿಯಂತ್ರಣಕ್ಕೆ ಬಂದಿದೆ. ಬಾಳೆ ಹಣ್ಣು ಕೆ.ಜಿಗೆ ₹10 ಕಡಿಮೆಯಾಗಿದ್ದರೆ, ಕರಬೂಜ, ಸಪೋಟ ದುಬಾರಿಯಾಗಿದೆ. ದ್ರಾಕ್ಷಿ ದರ ದುಪ್ಪಟ್ಟಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಮಾವಿನ ಹಣ್ಣಿನ ಬೆಲೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ರಸಪುರಿ ಕೆ.ಜಿ ₹100–120, ಬಾದಾಮಿ ಕೆ.ಜಿ ₹140–160, ಸೇಂದೂರ ಕೆ.ಜಿ ₹80, ಮಲಗೂಬ ಕೆ.ಜಿ ₹160–180, ಬೇನಿಷ ಕೆ.ಜಿ ₹80ಕ್ಕೆ ಮಾರಾಟವಾಗುತ್ತಿದೆ.

ಬೇಳೆ ದುಬಾರಿ: ಈವರೆಗೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ನಿಯಂತ್ರಣದಲ್ಲಿ ಇದ್ದ ಬೇಳೆ ಕಾಳುಗಳ ಬೆಲೆ ಈ ವಾರ ಮತ್ತೆ ಹೆಚ್ಚಳವಾಗಿದೆ. ತೊಗರಿ ಬೇಳೆ ಕೆ.ಜಿ ₹120–135ಕ್ಕೆ, ಉದ್ದಿನ ಬೇಳೆ ಕೆ.ಜಿ ₹120–140ಕ್ಕೆ, ಅವರೆ ಕಾಳು ಕೆ.ಜಿ ₹135–140ಕ್ಕೆ ಜಿಗಿದಿದೆ. ಹುರುಳಿ ಕಾಳು, ಕಡಲೇ ಬೀಜ ಸಹ ಅಲ್ಪ ಏರಿಕೆಯಾಗಿದೆ. ಅಕ್ಕಿ ಧಾರಣೆಯೂ ಕೆ.ಜಿಗೆ ₹3ರಿಂದ 5 ಹೆಚ್ಚಳವಾಗಿದೆ.

ಅಡುಗೆ ಎಣ್ಣೆ ಅಗ್ಗ: ಬೇಳೆ ಕಾಳುಗಳು ದುಬಾರಿಯಾಗುತ್ತಿದ್ದರೆ, ಅಡುಗೆ ಎಣ್ಣೆ ಧಾರಣೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗೋಲ್ಡ್‌ ವಿನ್ನರ್ ಕೆ.ಜಿ ₹112, ಪಾಮಾಯಿಲ್ ಕೆ.ಜಿ ₹95, ಕಡಲೆಕಾಯಿ ಎಣ್ಣೆ ಕೆ.ಜಿ ₹157ಕ್ಕೆ ತಗ್ಗಿದೆ.

ಜೀರಿಗೆ, ಲವಂಗ ಏರಿಕೆ: ಕೆಲ ದಿನಗಳಿಂದ ಮಸಾಲೆ ಪದಾರ್ಥಗಳ ಧಾರಣೆ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಜೀರಿಗೆ, ಲವಂಗ ದುಬಾರಿಯಾಗಿದೆ. ಹುಣಸೆ ಹಣ್ಣು ದರ ಸಹ ಏರಿಕೆಯಾಗುತ್ತಿದೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹580–600, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹260–270, ಹುಣಸೆಹಣ್ಣು ₹110–150, ಕರಿಮೆಣಸು ಕೆ.ಜಿ ₹500–580, ಜೀರಿಗೆ ಕೆ.ಜಿ ₹540–560, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹270–290, ಲವಂಗ ಕೆ.ಜಿ ₹850–880, ಗುಣಮಟ್ಟದ ಗಸಗಸೆ ಕೆ.ಜಿ ₹1,200–1350, ಬಾದಾಮಿ ಕೆ.ಜಿ ₹680–700, ಗೋಡಂಬಿ ಕೆ.ಜಿ ₹680–720, ದ್ರಾಕ್ಷಿ ಕೆ.ಜಿ ₹200–210ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ದರ ಹೆಚ್ಚಳ: ಕೋಳಿ ಮಾಂಸದ ಬೆಲೆ ಏರಿಕೆಯತ್ತಲೇ ಸಾಗಿದ್ದು, ಈ ವಾರವೂ ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹140, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್‌ಲೆಸ್ ಕೆ.ಜಿ ₹230, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹90ಕ್ಕೆ ಏರಿಕೆಯಾಗಿದೆ.

ಮೀನು ಮಾರಾಟ: ಬಂಗುಡೆ, ಬೂತಾಯಿ, ಕಪ್ಪುಮಾಂಜಿ, ಏಡಿ ಬೆಲೆ ಇಳಿಕೆಯಾಗಿದ್ದರೆ, ಅಂಜಲ್, ಬೊಳಿಂಜರ್, ಸೀಗಡಿ ದರ ದುಬಾರಿಯಾಗಿದೆ. ಬಂಗುಡೆ ಕೆ.ಜಿ ₹160, ಬೂತಾಯಿ ಕೆ.ಜಿ ₹140, ಅಂಜಲ್ ಕೆ.ಜಿ ₹1,150, ಬೊಳಿಂಜರ್ ₹270, ಬಿಳಿಮಾಂಜಿ ಕೆ.ಜಿ ₹1,500, ಕಪ್ಪುಮಾಂಜಿ ಕೆ.ಜಿ ₹870, ಸೀಗಡಿ ಕೆ.ಜಿ ₹650, ಏಡಿ ಕೆ.ಜಿ ₹370ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT