ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣವಾಗದ ಮಾರ್ಕೋನಹಳ್ಳಿ ಜಲಾಶಯ

ಅಭಿವೃದ್ಧಿಗಿಲ್ಲ ಆದ್ಯತೆ: ಅಧಿಕಾರಿಗಳಲ್ಲಿ ಸಮನ್ವಯತೆಯ ಕೊರತೆ: ಇಚ್ಛಾಶಕ್ತಿ ತೋರದ ಜನಪ್ರತಿನಿಧಿಗಳು
Last Updated 8 ನವೆಂಬರ್ 2021, 4:34 IST
ಅಕ್ಷರ ಗಾತ್ರ

ಕುಣಿಗಲ್: ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗುವ ಲಕ್ಷಣಗಳಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯ ಪಾಳುಬಿದ್ದ ಕೊಂಪೆಯಾಗಿದೆ.

ಮಾರ್ಕೋನಹಳ್ಳಿ ಜಲಾಶಯ ಅನೇಕ ದಾಖಲೆಗಳನ್ನು ಹೊಂದಿದೆ. ಸರ್.ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಅಮೃತೂರು ಹೋಬಳಿಯ ಮಾರ್ಕೋನಹಳ್ಳಿಯ ಬಳಿ ಶಿಂಷಾ ನದಿಗೆ ಅಡ್ಡಲಾಗಿ ಈ ಜಲಾಶಯವನ್ನು 1942ರಲ್ಲಿ ನಿರ್ಮಿಸಲಾಯಿತು.

ಅಮೃತೂರು ಹೋಬಳಿಯ ಮಾರ್ಕೋನಹಳ್ಳಿ ಜಲಾಶಯ 25 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, 88.5 ಅಡಿ ಆಳವಿದ್ದು, 2 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಜಲಾಶಯಕ್ಕೆ ಹರಿದು ಬರುವ ಹೆಚ್ಚುವರಿ ನೀರನ್ನು ಹೊರಹಾಕಲು ವಿಶ್ವೇಶರಯ್ಯ ಅವರು ರೂಪಿಸಿರುವ ಅಣೆಕಟ್ಟೆಗೆ ಸ್ವಯಂಚಾಲಿತ ಎರಡು ಬಾಗಿಲುಗಳ ವ್ಯವಸ್ಥೆ (ಸೈಫನ್‌ ವರ್ಕ್‌) ಮಾಡಲಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟ ಮುಟ್ಟಿದಾಗ ಸ್ವಯಂ ಚಾಲಿತವಾಗಿ ಜಲಾಶಯದಿಂದ ನೀರು ಹೊರಬರುವಂತೆ ಮಾಡುವುದು ಇದರ ವಿಶೇಷ. ಕೋಡಿ ಭಾಗದಲ್ಲಿ 18 ಚಿಕ್ಕ ಸೈಫನ್‌ ಮತ್ತು 5 ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ.

ಜಲಾಶಯಕ್ಕೆ ಹೊಂದಿಕೊಂಡಂತೆ ಜಲಾಶಯ ನಿರ್ಮಾಣಗೊಂಡ ದಿನಗಳಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿತ್ತು. ಉದ್ಯಾನದಲ್ಲಿ ಅಲಂಕಾರಿಕ ಗಿಡಗಳು, ಕಾರಂಜಿ, ಪಾದಚಾರಿ ಮಾರ್ಗ ನಿರ್ಮಾಣಗೊಂಡು ಜಲಾಶಯ ತುಂಬಿ ಹರಿದಾಗ, ಕೋಡಿಯಾಗಿ ನೀರು ಹರಿದು ಸಾಗುವ ಮಾರ್ಗದ ಸೊಬಗನ್ನು ವೀಕ್ಷಿಸಲು ಜನಸಾಗರ ಹರಿದು ಬರುತ್ತಿತ್ತು.

80ರ ದಶಕದಲ್ಲಿ ಉದ್ಯಾನದಲ್ಲಿ ಮಕ್ಕಳನ್ನು ಆಕರ್ಷಿಸಲು ಜೋಕಾಲಿ, ಜಾರು ಬಂಡಿಗಳು ಸೇರಿದಂತೆ ಆಟಿಕೆಗಳನ್ನು ಅಳವಡಿಸಲಾಯಿತು. ಕಾಲಕ್ರಮೇಣ ನಿರ್ವಹಣೆಯ ಕೊರತೆಯಿಂದಾಗಿ ಎಲ್ಲವೂ ನಾಶವಾಗಿ ಇಂದು ಪಾಳುಬಿದ್ದ
ಕೊಂಪೆಯಾಗಿದೆ.

ಮಕ್ಕಳ ಆಟಕ್ಕಾಗಿ ನಿರ್ಮಿಸಲಾಗಿದ್ದ ಜೋಕಾಲಿಗಳು ಮತ್ತು ಜಾರುಬಂಡಿಗಳು ಅಸ್ತಿತ್ವ ಕಳೆದುಕೊಂಡು ಅಸ್ತಿಪಂಜರವಾಗಿದ್ದರೆ, ಕಾರಂಜಿಗಳು ಕಸ ಸಂಗ್ರಹ ತೊಟ್ಟಿಗಳಾಗಿವೆ. ಉದ್ಯಾನ ಪುನಶ್ಚೇತನಗೊಳಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸದ ಕಾರಣ ಅವ್ಯವಸ್ಥೆಯ ತಾಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಜಲಾಶಯದ ಏರಿ ಭಾಗಕ್ಕೆ ಹೊಂದಿಕೊಂಡಿರುವ ಉದ್ಯಾನ ಸುಮಾರು ಮೂರುವರೆ ಎಕರೆಯಲ್ಲಿದ್ದು, ನಿರ್ವಹಣೆಯ ವಿಚಾರದಲ್ಲಿ ಗೊಂದಲಗಳಿವೆ. ಉದ್ಯಾನ ಮತ್ತು ಜಲಾಶಯವೂ ಹೇಮಾವತಿ ನಾಲಾವಲಯಕ್ಕೆ ಸೇರಿದ್ದರೂ, ನಾಲಾವಲಯದ ಅಧಿಕಾರಿ ವರ್ಗ, ಉದ್ಯಾನದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆಗೆ ವಹಿಸಿರುವುದಾಗಿ ತಿಳಿಸುತ್ತಾರೆ. ಆದರೆ ಇದಕ್ಕೆ ಸ್ಪಷ್ಟ ದಾಖಲೆಗಳು ಇಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಲಾಶಯಕ್ಕೆ ಸೇರಿದ 35 ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳಸಲು ಮಾತ್ರ ನೀಡಲಾಗಿದೆ. ಉದ್ಯಾನ ನಿರ್ವಹಣೆ ಬಗ್ಗೆ ಸ್ಪಷ್ಟವಾಗಿ ಎಲ್ಲೂ ತಿಳಿಸಿಲ್ಲ ಎನ್ನುತ್ತಾರೆ.

ಉದ್ಯಾನ ನಿರ್ವಹಣೆಯ ಗೊಂದಲದಲ್ಲಿರುವ ಅಧಿಕಾರಿಗಳಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಉದ್ಯಾನದ ಪುನಶ್ಚೇತನಕ್ಕೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಪ್ರವಾಸ ಪ್ರಿಯರ ಒತ್ತಾಯ.

ಮೂರು ವರ್ಷದಿಂದ ಜಲಾಶಯ ತುಂಬಿ ಹರಿಯುತ್ತಿದ್ದು, ಈ ಸಮಯದಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿ, ಜಲಧಾರೆಯ ಸೊಬಗನ್ನು ವೀಕ್ಷಿಸುತ್ತಿದ್ದಾರೆ. ಉದ್ಯಾನದ ಮೂಲಕ ಸಾಗುವವರಿಗೆ ಕಿತ್ತು ಹೋದ ಜೋಕಾಲಿ, ಜಾರುಬಂಡಿ ಮತ್ತು ಅಸ್ತಿಪಂಜರದಂತಿರುವ ಕಾರಂಜಿ ಸ್ವಾಗತಿಸುತ್ತಿವೆ.

ಜಲಾಶಯದಲ್ಲಿ 365 ದಿನವೂ ನೀರಿರುವ ಕಾರಣದಿಂದ ಬೋಟಿಂಗ್ ನಡೆಸಲು ಸಹ ಅವಕಾಶವಿದ್ದು, ಪ್ರಯತ್ನಗಳು ಕಾಗದದಲ್ಲಿ
ನಡೆದು, ನಿರ್ದಿಷ್ಟ
ಅಧಿಕಾರಿವರೆಗೂ ತಲುಪಿದ್ದರೂ, ಕಾರ್ಯಗತಗೊಂಡಿಲ್ಲ.

ಜಲಾಶಯ ನಿರ್ಮಾಣಗೊಂಡ ನಂತರದ ದಿನಗಳಿಂದಲೂ ಉದ್ಯಾನದ ಅಭಿವೃದ್ಧಿಗೆ ಪತ್ರ ವ್ಯವಹಾರಗಳು ಮಾತ್ರವೇ ನಡೆದಿದೆ. ಶಾಸಕರಾಗಿದ್ದ ಡಿ.ನಾಗರಾಜಯ್ಯ, ವೈಕೆ. ರಾಮಯ್ಯ, ಮತ್ತು ರಾಮಸ್ವಾಮಿ ಗೌಡರ ಕಾಲದಿಂದಲೂ ಮಾರ್ಕೋನಹಳ್ಳಿ ಜಲಾಶಯವನ್ನು ಪ್ರವಾಸಿ ತಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದಿರುವುದು ತಾಲ್ಲೂಕಿನ ದೌರ್ಭಾಗ್ಯವಾಗಿದೆ.

ಪ್ರಸ್ತುತ ಡಾ.ರಂಗನಾಥ್ ಶಾಸಕರಾಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಸತತವಾಗಿ ಮೂರುವರ್ಷ ಜಲಾಶಯ ಭರ್ತಿಯಾಗಿದೆ. ಪ್ರತಿವರ್ಷವೂ ಗಂಗಾ ಪೂಜೆ ನೆರವೇರಿಸಿದ್ದಾರೆ. ಸರ್ಕಾರದ ಗಮನ ಸೆಳೆಯುತ್ತಿರುವುದಾಗಿ ಹೇಳುತ್ತಿದ್ದಾರೆ ಹೊರತು ಕಾರ್ಯಗತವಾಗಿಲ್ಲ. ಉಳಿದಿರುವ ಅವಧಿಯಲ್ಲಾದರೂ ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT