ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯ ತಗ್ಗಿಸಲು ನೆರವಾದ ಮಾಸ್ಕ್!

Last Updated 18 ಜನವರಿ 2021, 1:51 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕು ಹರಡದಂತೆ ತಡೆಯುವ ಸಲುವಾಗಿ ಮಾಸ್ಕ್‌ ಬಳಸಿದ್ದರಿಂದಾಗಿ ಅದು ನಿಯಂತ್ರಣಕ್ಕೆ ಬರುವುದರ ಜತೆಗೆ ಕ್ಷಯ ರೋಗಕ್ಕೂ ತಡೆಯೊಡ್ಡಿದೆ!

ಮಾಸ್ಕ್ ಬಳಸಿದ್ದರಿಂದಾಗಿ ಒಬ್ಬರಿಂದ ಒಬ್ಬರಿಗೆ ಕ್ಷಯ ಹರಡುವುದು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಕ್ಷಯ ರೋಗಿಗಳ ಸಂಖ್ಯೆ ಇಳಿಕೆಯಾಗಿರುವುದೇ ಇದಕ್ಕೆ ಉದಾಹರಣೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿ ಡಿ.1ರಿಂದ 31ರ ವರೆಗೆ ‘ಸಕ್ರಿಯ ಕ್ಷಯರೋಗ ಪತ್ತೆ’ ಆಂದೋಲನ ನಡೆಯಿತು. ಒಂದು ತಿಂಗಳು ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಕ್ಷಯ ರೋಗಿಗಳ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 5.50 ಲಕ್ಷ ಮನೆಗಳ ಸಮೀಕ್ಷೆ ಮಾಡಿದ್ದು, ಕೇವಲ 65 ಜನರಲ್ಲಿ ಮಾತ್ರ ಕ್ಷಯ ಇರುವುದು ಪತ್ತೆಯಾಗಿದೆ. ಕಳೆದ ಐದು ವರ್ಷಗಳಲ್ಲೇ 2020ರಲ್ಲಿ ಕಡಿಮೆ ಸಂಖ್ಯೆಯ ಕ್ಷಯ ರೋಗಿಗಳು ಪತ್ತೆಯಾಗಿರುವುದು ವಿಶೇಷ.

‘ಮಾಸ್ಕ್ ಧರಿಸಿದ್ದು ಪರಸ್ಪರ ಹರಡದಂತೆ ತಡೆದಿದ್ದರೆ, ಕೋವಿಡ್–19ನಿಂದಾಗಿ ಲಾಕ್‌ಡೌನ್ ಅವಧಿಯಲ್ಲಿ ಜನರ ಓಡಾಟ ತಗ್ಗಿದ್ದರಿಂದಲೂ ರೋಗ ಹರಡುವುದು ನಿಯಂತ್ರಣಕ್ಕೆ ಬಂದಿದೆ. ಮಾಸ್ಕ್ ಕ್ಷಯ ರೋಗನಿಯಂತ್ರಣಕ್ಕೆ ವರದಾನವಾಯಿತು. ಮಾಸ್ಕ್ ಧರಿಸುವುದು ಮುಂದುವರಿದರೆ ಕ್ಷಯರೋಗ ನಿಯಂತ್ರಿಸಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಸನತ್ ಕುಮಾರ್ ತಿಳಿಸಿದರು.

ಸಮೀಕ್ಷೆ ಸಮಯದಲ್ಲಿ ಕೋವಿಡ್–19ನಿಂದ ಬಳಲುತ್ತಿದ್ದ 8 ಜನರಲ್ಲಿ ಹಾಗೂ ಕೋವಿಡ್–19 ಅಲ್ಲದೆ ಇತರೆ ಅನಾರೋಗ್ಯದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಜನರಲ್ಲಿ ರೋಗ ಪತ್ತೆಯಾಗಿದೆ. ನಗರದಲ್ಲಿ ಕೊಳೆಗೇರಿಗಳು, ಜೈಲು, ತೀರಾ ಕಡುಬಡವರಿದ್ದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ಸಮೀಕ್ಷೆ ನಡೆಸಲಾಗಿದೆ.

2018ಕ್ಕೂ ಮುಂಚೆ ಆರೋಗ್ಯ ಇಲಾಖೆ ಕಾರ್ಯಕರ್ತರು, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕ್ಷಯರೋಗ ಪರೀಕ್ಷೆ ಮಾಡಲಾಗುತಿತ್ತು. ಕ್ಷಯ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ಕೊಡುವುದು ಕಷ್ಟವಾಗಿತ್ತು. ಆದರೆ, 2018–19ನೇ ಸಾಲಿನಿಂದ ಖಾಸಗಿ ವೈದ್ಯರು, ಪ್ರಯೋಗಾಲಯಗಳ ಸೇವೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಕ್ಷಯರೋಗಿ ಬಗ್ಗೆ ಖಾಸಗಿ ಕ್ಲಿನಿಕ್‌ಗಳು, ವೈದ್ಯರು, ಪ್ರಯೋಗಾಲಯ ತಜ್ಞರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರೆ ಇಲಾಖೆ ₹ 500 ನೀಡುತ್ತಿದೆ. ಹಾಗಾಗಿ ಕ್ಷಯ ರೋಗಿಗಳ ಪತ್ತೆ ಸುಲಭವಾಗಿದೆ. 2020ರಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT