ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥಿತ ಸಾಂಸ್ಕೃತಿಕ ನೀತಿ ಅಗತ್ಯ

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪ್ರಜಾವಾಣಿ ಕೇಳಿದ ಐದು ಪ್ರಶ್ನೆಗಳು

* ಆರ್ಥಿಕ ನೀತಿ, ಧಾರ್ಮಿಕ ನೀತಿ, ಸಾಮಾಜಿಕ ನೀತಿಗಳನ್ನು ಚುನಾವಣೆ ಸಂದರ್ಭದಲ್ಲಿ ನೋಡುತ್ತಿದ್ದೇವೆ. ಸಾಂಸ್ಕೃತಿಕ ನೀತಿ ಎನ್ನುವುದೊಂದು ಇದೆಯೇ? ಇರಬೇಕೇ?
* ಕರ್ನಾಟಕದಲ್ಲಿರುವ ರಾಜಕೀಯ ಪಕ್ಷಗಳಿಗೆ ಸಾಂಸ್ಕೃತಿಕವಾಗಿ ಒಂದು ಸ್ಪಷ್ಟ ನಿಲುವು ಇದೆ ಎಂದು ನಿಮಗನ್ನಿಸುತ್ತಿದೆಯೇ?
* ಕರ್ನಾಟಕದ ಸಂದರ್ಭದಲ್ಲಿ ಸಂಸ್ಕೃತಿ- ಭಾಷೆಗೆ ಸಂಬಂಧಿಸಿದಂತೆ ಸ್ಪರ್ಧಿಗಳು/ ರಾಜಕೀಯ ಪಕ್ಷಗಳಿಂದ ಮತದಾರರು ಯಾವ ವಿಷಯಗಳನ್ನು ನಿರೀಕ್ಷಿಸಬೇಕು?
* ಸಾಂಸ್ಕೃತಿಕ ನೀತಿ ಎನ್ನುವುದು ಪ್ರಾದೇಶಿಕವಾಗಿ ಮತ್ತು ರಾಷ್ಟ್ರೀಯವಾಗಿ ಬೇರೆ ಬೇರೆ ಇರಬೇಕೇ? ಒಂದೇ ಆಗಿರಬೇಕೇ?
* ಸಾಂಸ್ಕೃತಿಕ ನೀತಿಯನ್ನು ನಿರ್ಧರಿಸುವುದು ಹೇಗೆ? ಯಾರು? ಇದರಲ್ಲಿ ಜನರ ಪಾತ್ರವೆಷ್ಟು? ರಾಜಕೀಯ ಪಕ್ಷಗಳ ಪಾತ್ರವೆಷ್ಟು?

****

ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ನೀತಿಗಳಲ್ಲಿ ಸಾಂಸ್ಕೃತಿಕ ಆಯಾಮ ಇರಲೇಬೇಕು. ಅನುದಾನ ಕೊಡುವುದಷ್ಟೇ ಸರ್ಕಾರದ ಸಾಂಸ್ಕೃತಿಕ ನೀತಿಯಲ್ಲ. ಲೋಕೋಪಯೋಗಿ ಇಲಾಖೆ ನಿರ್ಮಿಸುವ ಪುರಭವನದ ಶೈಲಿ ಹೇಗಿರಬೇಕು ಎನ್ನುವುದಕ್ಕೆ ಸಾಂಸ್ಕೃತಿಕ ನೀತಿ ಸಹಾಯ ಮಾಡಬೇಕು. ಈಗಂತೂ ಯಾವ ಕ್ಷೇತ್ರದಲ್ಲಿಯೂ ಸಾಂಸ್ಕೃತಿಕ ನೋಟವೇ ಇಲ್ಲ. ಎಲ್ಲ ಪುರಭವನಗಳು ಬೆಂಗಳೂರು ಪುರಭವನದ ಪಡಿಯಚ್ಚಿನಂತೆ ಗೋಥಿಕ್‌ ಶೈಲಿಯಲ್ಲಿಯೇ ರಚನೆಯಾಗುತ್ತಿವೆ. ಕರಾವಳಿಯಲ್ಲಾದರೆ ಇಲ್ಲಿನ ಅಸ್ಮಿತೆಯನ್ನು ಹೇಳುವಂತಹ ನಿರ್ಮಾಣ ಶೈಲಿಯನ್ನು ಪೋಷಿಸುವ, ವಿಜಯಪುರದಲ್ಲಾದರೆ ಅಲ್ಲಿನ ಪರಂಪರಾಗತ ನಿರ್ಮಾಣ ಶೈಲಿಗೆ ಆದ್ಯತೆ ನೀಡುವ ಕ್ರಮ ಮುಖ್ಯ. ಸರ್ಕಾರದ ಎಲ್ಲ ಕೆಲಸಗಳಲ್ಲಿಯೂ ಸಾಂಸ್ಕೃತಿಕ ಪ್ರೀತಿ ಅಂತರ್ಗತವಾಗಬೇಕಾದರೆ ನೀತಿ ನಿರೂಪಣೆ ಮಾಡುವುದು ಉತ್ತಮ. ಅದರ ನಡೆಯಲ್ಲಿ ಸಂಸ್ಕೃತಿಯೇ ಇಲ್ಲ ಎನ್ನುವಂತಿಲ್ಲ. ಆದರೆ ಅದು ವ್ಯವಸ್ಥಿತವಾಗಿ ಇರಬೇಕು.

ವಿಧಾನಸಭೆ ಮತ್ತು ರಾಜ್ಯಸಭೆಗೆ ಸಾಂಸ್ಕೃತಿಕ ಕ್ಷೇತ್ರದಿಂದ ಸರ್ಕಾರ ಮಾಡುವ ನಾಮನಿರ್ದೇಶನ ಸಮರ್ಪಕವಾಗಿ ಆಗುತ್ತಿಲ್ಲ. ಸಿನಿಮಾ ಕ್ಷೇತ್ರದಿಂದ ಇಬ್ಬಿಬ್ಬರು ನಾಮ ನಿರ್ದೇಶನಗೊಳ್ಳುತ್ತಾರೆ. ಬುಡಕಟ್ಟು ಜನಾಂಗದ ಕಲಾತಜ್ಞರೊಬ್ಬರಿಗೆ ಅಂತಹ ಒಂದು ಪ್ರಾತಿನಿಧ್ಯ ಎಂದೂ ಸಿಗುವುದಿಲ್ಲ.

ಸಾಂಸ್ಕೃತಿಕ ನೀತಿಯ ಪರಿಣಾಮ ಬಹಳ ನಿಧಾನವಾಗಿ ಮತ್ತು ಆಳವಾದ ರೀತಿಯಲ್ಲಿ ಕಾಣಿಸಿಕೊಳ್ಳುವುದರಿಂದ ಚುನಾವಣೆಗೆ ಅದು ರಂಗಿನ ವಿಷಯ ಆಗಿರುವುದಿಲ್ಲ. ಹೀಗಿದ್ದರೂ, ಕರ್ನಾಟಕ ಸರ್ಕಾರ ನೇಮಿಸಿದ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿ ಒಳ್ಳೆಯ ಕೆಲಸ ಮಾಡಿದೆ. ಭಿನ್ನಾಭಿಪ್ರಾಯಗಳು ಇರಬಹುದು. ಆದರೆ, ಅನೇಕ ಶಿಫಾರಸುಗಳು ಪ್ರಸ್ತುತವೂ ಆಗಿವೆ.

ರಾಜಕೀಯೇತರ ಸಾಂಸ್ಕೃತಿಕ ನೀತಿ ನಿರೂಪಣೆ ಸಾಧ್ಯವಿಲ್ಲ. ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಮೇಲೆ ಅದರ ರಾಜಕೀಯ ನಿಲುವಿನ ಮೇಲೆಯೇ ಸಾಂಸ್ಕೃತಿಕ ನೀತಿ ನಿರೂಪಣೆ ಆಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸಂ ಪರವಾದ ಸಾಂಸ್ಕೃತಿಕ ನೀತಿಯೇ ಇರುವುದು. ನಾಡಿನ ಹಿರಿಮೆಗೆ ಸಂಬಂಧಿಸಿದ ಕೆಲವು ವಿಷಯಗಳಲ್ಲಿ ಸರ್ವಸಮ್ಮತಿ ಇರಬೇಕು. ಕೆಲವು ವಿಷಯಗಳು ವಿವಾದಾತೀತ ಆಗಿದ್ದಾಗ ಘನತೆ- ಗೌರವ ಉಳಿಯುತ್ತದೆ. ಶಿವರಾಮ ಕಾರಂತ, ಕುವೆಂಪು ಅಂತಹವರ ವಿಚಾರವಾಗಿ ಮಾತನಾಡುವಾಗ, ಕಲಾಪ್ರಕಾರ ಗಳಿಗೆ ಗೌರವ ಸಲ್ಲಿಸುವಾಗ ವಿವಾದ ಬರಬಾರದು. ಪ್ರಸ್ತುತ, ಸಾಂಸ್ಕೃತಿಕ ನೀತಿ ಬೇಕು ಎಂದಾಗ ಅನೇಕ ಪಕ್ಷಗಳ ಚಿಂತಕರು ಅದು ಅಧಿಕಾರಿಗಳಿಗೆ ಸಂಬಂಧಿಸಿದ ವಿಷಯ ಎನ್ನುತ್ತಾರೆ.

ಈವರೆಗೆ ನಡೆದು ಬಂದ ಸಾಂಸ್ಕೃತಿಕ ನಿಲುವುಗಳು ಸಮರ್ಪಕವಾಗಿಲ್ಲ ಎನ್ನುವಂತಹ ಅನಿಸಿಕೆಗಳು ಚಳವಳಿಗಳಾಗಿ ರೂಪುಗೊಂಡಿಲ್ಲ. ಚಳವಳಿ, ಆಗ್ರಹಗಳಿಗೆ ರೂಪ ಕೊಡುವುದು ರಾಜಕೀಯ ಪಕ್ಷಗಳ ಕೆಲಸ. ಜನರು ಅವರದ್ದೇ ಆದ ಸಮಸ್ಯೆಗಳಲ್ಲಿ ಮುಳುಗಿರುತ್ತಾರೆ. ರಂಗಾಯಣದಂತಹ ಸಂಸ್ಥೆಗಳು ಜನರಲ್ಲಿ ತಿಳಿವು ಮೂಡಿಸುವ ಕೆಲಸ ಮಾಡಬಹುದೇನೋ. ಸದ್ಯಕ್ಕೆ ಸಾಂಸ್ಕೃತಿಕ ಕ್ಷೇತ್ರದ ಸಿಂಹಪಾಲನ್ನು ಸಿನಿಮಾ ಕ್ಷೇತ್ರವೇ ಕಬಳಿಸುತ್ತಿದೆ. ಅರ್ಧ ಸಿನಿಮಾ ಮಾಡಿದ ವ್ಯಕ್ತಿಗೆ ಸಲ್ಲುವ ಮಾನ್ಯತೆ 50 ವರ್ಷಗಳ ಕಲಾಕ್ಷೇತ್ರದಲ್ಲಿ ಬೆವರು ಹರಿಸಿ ದುಡಿದ ಕಲಾಸಾಧಕನಿಗೆ ಸಲ್ಲುತ್ತಿಲ್ಲ.

ರಾಷ್ಟ್ರೀಯವಾಗಿ ಒಂದು ನೀತಿಯ ಜೊತೆಗೆ, ಪ್ರಾದೇಶಿಕವಾಗಿಯೂ ಇರಬೇಕು. ರಾಜ್ಯ ಮಟ್ಟದ ನೀತಿಯಿದ್ದರೂ, ಮತ್ತೆ ಜಿಲ್ಲಾ ಮಟ್ಟದಲ್ಲಿ ಸ್ಥಳೀಯವಾದ ಸಂಸ್ಕೃತಿಯ ಪ್ರಾತಿನಿಧಿಕತೆಗೂ ಅವಕಾಶ ಇರಬೇಕು. ವೈವಿಧ್ಯವೇ ನಮ್ಮ ಬಲ, ವಿಕೇಂದ್ರೀಕೃತ ನೀತಿ ಅಗತ್ಯ. 

ಬೇಕಿರಲಿ, ಬೇಡದಿರಲಿ, ರಾಜಕಾರಣಿಗಳೇ ಇದನ್ನು ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ಜನರ ಭಾವನೆಗಳಿಗೆ ಆದ್ಯತೆ ಕೊಡಬೇಕು. ಜನರ ಅಪೇಕ್ಷೆಯನ್ನು ಬಲ್ಲ ತಜ್ಞರಿಗೆ ನಿರ್ಣಯ ಮಾಡಲು ಅವಕಾಶ ಕಲ್ಪಿಸಬೇಕು. ಮಹಾರಾಷ್ಟ್ರದಲ್ಲಿ ಸಾಹಿತ್ಯ ಸಮ್ಮೇಳನದ ವೇದಿಕೆಗೆ ರಾಜಕಾರಣಿಗಳು ಬರುವುದಿಲ್ಲ. ಆದರೆ ರಾಜಕಾರಣಿಯೊಬ್ಬರು ಕವಿಯಾಗಿದ್ದರೆ, ಕವಿಗೋಷ್ಠಿಯಲ್ಲಿ ಬಂದು ಕವಿತೆ ಓದುತ್ತಾರೆ. ಇಂತಹ ಗೌರವದ ನಿಲುವನ್ನು ರಾಜಕೀಯ ಕ್ಷೇತ್ರದವರು ತೆಗೆದುಕೊಳ್ಳುವುದು ಸಾಧ್ಯವೇ?

-ಡಾ. ಎಂ. ಪ್ರಭಾಕರ ಜೋಶಿ
ಸಂಸ್ಕೃತಿ ಚಿಂತಕ

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT