ಸೋಮವಾರ, ಮೇ 16, 2022
24 °C

ಮೇಯರ್ ಮೀಸಲು: ಕೋರ್ಟ್‌ನತ್ತ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್– ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ. ಈ ಮೈತ್ರಿ ಕೂಟಕ್ಕೆ ಅಧಿಕಾರ ತಪ್ಪಿಸಿ ಮೂರನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಪಡೆಯಲು ಬಿಜೆಪಿ ರಣತಂತ್ರವನ್ನೇ ಹೆಣೆದಿದೆ. ಮೀಸಲಾತಿ ಅಸ್ತ್ರವನ್ನು ಬಳಸಿಕೊಂಡು ಅಧಿಕಾರದಿಂದ ದೂರ ಇರುವಂತೆ ಬಿಜೆಪಿ ಮುಖಂಡರು ನೋಡಿಕೊಂಡಿದ್ದಾರೆ.

ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಡಗಡ ಹಾಗೂ ಉಪಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ. ಜೆಡಿಎಸ್, ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಪಂಗಡದ ಯಾವ ಸದಸ್ಯರೂ ಇಲ್ಲ. ಪರಿಶಿಷ್ಟ ವರ್ಗದ ಮೀಸಲಾತಿ ಮೇಲೆ ಬಿಜೆಪಿಯಿಂದ 32ನೇ ವಾರ್ಡ್‌ನ ಬಿ.ಜಿ.ಕೃಷ್ಣಪ್ಪ ಅವರೊಬ್ಬರೇ ಆಯ್ಕೆ ಆಗಿದ್ದಾರೆ. ಹಾಗಾಗಿ ಬಹುಮತ ಇಲ್ಲದಿದ್ದರೂ ಅಧಿಕಾರವನ್ನು ಬಿಜೆಪಿ ದಕ್ಕಿಸಿಕೊಳ್ಳಲು ಮುಂದಾಗಿದೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ನಗರದಲ್ಲೂ ತಮ್ಮದೇ ಆಡಳಿತ ಹೊಂದಲು ಮೀಸಲಾತಿ ಅಸ್ತ್ರವನ್ನು ಬಳಸಿಕೊಂಡಿದೆ. ಜೆಡಿಎಸ್– ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಪಂಗಡದ ಸದಸ್ಯರು ಇಲ್ಲ ಎಂಬುದನ್ನು ಗಮನಿಸಿ ಮೀಸಲಾತಿ ನಿಗದಿಪಡಿಸಲಾಗಿದೆ. ಅಧಿಕಾರ ತಪ್ಪಿಸುವ ಸಲುವಾಗಿಯೇ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಡಗಕ್ಕೆ ಮೀಸಲಿರಿಸಲಾಗಿದೆ ಎಂಬ ಆರೋಪ ಎರಡು ಪಕ್ಷಗಳ ಮುಖಂಡರಿಂದ ಕೇಳಿಬಂದಿದೆ.

ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆಗಳು ನಡೆದಿವೆ. ನಿಯಮದ ಪ್ರಕಾರ 8ರಿಂದ 10 ವರ್ಷಗಳಿಗೆ ಒಮ್ಮೆ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕಲ್ಪಿಸಲಾಗುತ್ತದೆ. ಆದರೆ ಕಳೆದ 4 ವರ್ಷಗಳ ಹಿಂದೆಯಷ್ಟೇ ಈ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಲಾಗಿತ್ತು. ಅಲ್ಪ ಸಮಯದಲ್ಲೇ ಮತ್ತೆ ಅದೇ ವರ್ಗಕ್ಕೆ ಮೀಸಲಾತಿ ಒದಗಿಸಲಾಗಿದೆ. ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಹಾಗಾಗಿ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಗಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ಒಪ್ಪಂದದ ಆಡಳಿತ: ಪಾಲಿಕೆಯಲ್ಲಿ ಯಾರಿಗೂ ಬಹುಮತ ಇಲ್ಲದ ಕಾರಣಕ್ಕೆ ಜೆಡಿಎಸ್– ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದಿದ್ದವು. ಒಪ್ಪಂದದಂತೆ ಕಳೆದ ಬಾರಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿತ್ತು. ಜೆಡಿಎಸ್ ಉಪಮೇಯರ್ ಸ್ಥಾನವನ್ನು ಪಡೆದುಕೊಂಡಿತ್ತು. ಈ ಸಲ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಹಾಗೂ ಉಪಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕಿತ್ತು. ಆದರೆ ಮೀಸಲಾತಿ ನಿಗದಿಯಿಂದಾಗಿ ಈ ಹೊಂದಾಣಿಕೆ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಕಾನೂನಾತ್ಮಕ ಹೋರಾಟಕ್ಕೆ ಸಂಬಂಧಿಸಿದಂತೆ ತಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ಜೆಡಿಎಸ್, ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು