ಕೆಲಸ ಮಾಡದವರನ್ನು ಜಿಲ್ಲೆಯಲ್ಲಿ ಇಟ್ಟುಕೊಳ್ಳಲ್ಲ

7
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಎಚ್ಚರಿಕೆ, ಅಭಿವೃದ್ಧಿ ಯೋಜನೆ ಕುಂಠಿತವಾದರೆ ಡಿಸಿ, ಸಿಇಓ ಹೊಣೆ

ಕೆಲಸ ಮಾಡದವರನ್ನು ಜಿಲ್ಲೆಯಲ್ಲಿ ಇಟ್ಟುಕೊಳ್ಳಲ್ಲ

Published:
Updated:
Deccan Herald

ತುಮಕೂರು: ‘ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡದ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ಯೋಜನೆಗಳ ಪ್ರಗತಿ ವಿವರ ವಾಸ್ತವಿಕ ಸ್ಥಿತಿಗತಿಗೆ ಅನುಗುಣವಾಗಿ ಇರಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿದರೆ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಸಭೆ ನಡೆಸಿದ ಬಗ್ಗೆ ತಾಲ್ಲೂಕು ಕಚೇರಿಗಳಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಷರಾ ನಮೂದಿಸಬೇಕು ಎಂದು ಎಚ್ಚರಿಕೆ ನೀಡಿದರು.

ಯೋಜನೆ ಅನುಷ್ಠಾನದಲ್ಲಿ ಕುಂಠಿತವಾದರೆ, ಜನರಿಗೆ ಸರ್ಕಾರದ ಸೌಕರ್ಯಗಳು ಸಕಾಲಕ್ಕೆ ತಲುಪದೇ ಇದ್ದರೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ, ವಸತಿ ಇಲಾಖೆ, ಕೃಷಿ, ಕೈಗಾರಿಕೆ ಇಲಾಖೆ ಸೇರಿದಂತೆ ಅಭಿವೃದ್ಧಿ ಇಲಾಖೆಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ಸರ್ಕಾರಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದರು.

ಬೆಳೆ ನಷ್ಟ ಅಂದಾಜಿಗೆ ಮಾನದಂಡವೇನು?

ಬೆಳೆ ನಷ್ಟವನ್ನು ಅಂದಾಜು ಮಾಡಲು ಯಾವ ಮಾನದಂದಡವನ್ನು ಅನುಸರಿಸಲಾಗಿದೆ? ಉಪಗ್ರಹ ಛಾಯಾಚಿತ್ರ ಆಧಾರದ ಮೇಲೆಯೇ ಅಥವಾ ಗ್ರಾಮಕ್ಕೆ ಭೇಟಿ ನೀಡಿ ಅಂಕಿ ಅಂಶಗಳನ್ನು ತಯಾರಿಸಿ ದಾಖಲೆ ಸೃಷ್ಟಿಸಲಾಗಿದೆಯೇ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸಚಿವರು ಪ್ರಶ್ನಿಸಿದರು.

ಸಭೆಗೆ ನೀಡಿದ ಅಂಕಿ ಅಂಶಗಳು ಕರಾರುವಕ್ಕಾಗಿಲ್ಲ. ಮಳೆಯ ಪ್ರಮಾಣ ಹಾಗೂ ಬೆಳೆಯ ನಷ್ಟವನ್ನು ಹೋಲಿಕೆ ಮಾಡಬೇಕು. ಒಂದು ವಾರದೊಳಗೆ ನಿಖರ ಅಂಕಿ ಅಂಶಗಳನ್ನು ನೀಡಬೇಕು ಎಂದು ಸೂಚಿಸಿದರು.

ಬೆಳೆ ವಿಮೆ ನೋಂದಣಿ ಮಾಡಿಕೊಂಡಿರುವ ರೈತರ ಸಂಖ್ಯೆ ಕಡಿಮೆ ಇದ್ದು, ತುಮಕೂರು, ಗುಬ್ಬಿ, ಕುಣಿಗಲ್ ಹಾಗೂ ತುರುವೇಕೆರೆ ತಾಲ್ಲೂಕಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ, ಬೆಳೆ ವಿಮೆ ಕಡಿಮೆ ನೋಂದಣಿಗೆ ಕಾರಣ ಕೇಳಿ ವರದಿ ತರಿಸಿಕೊಳ್ಳಿ ಎಂದು ಜಂಟಿ ನಿರ್ದೇಶಕರಿಗೆ ಆದೇಶಿಸಿದರು.

ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ವರದಿ ಬರುವುದು ಬಾಕಿ ಇದ್ದರೆ ಶೀಘ್ರವೇ ಕಳುಹಿಸಿಕೊಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರಿಗೆ ಸೂಚಿಸಿದರು.

 ಬರದ ಅಂಚಿನಲ್ಲಿದ್ದೇವೆ ಎಚ್ಚರ: ನಾವು ಈಗ ಬರದ ಅಂಚಿನಲ್ಲಿದ್ದೇವೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ. ಯಾವುದೇ ರೀತಿಯ ಸಬೂಬು ನಾನು ಕೇಳುವುದಿಲ್ಲ ಎಂದು ಹೇಳಿದರು.

ಮಧುಗಿರಿ ಉಪವಿಭಾಗದ ತಾಲ್ಲೂಕು, ತುಮಕೂರು, ಗುಬ್ಬಿ, ತುರುವೇಕೆರೆ ಸೇರಿದಂತೆ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಲಿದೆ. ಸಮಸ್ಯಾತ್ಮಕ ಗ್ರಾಮಗಳನ್ನು ಕೂಡಲೇ ಗುರುತಿಸಿ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಆದೇಶಿಸಿದರು.

ಸಚಿವ ವೆಂಕಟರಮಣಪ್ಪ ಸಿಡಿಮಿಡಿ

ಪಾವಗಡ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆ ನೀರಿನ ಸಮಸ್ಯೆ ಪರಿಹರಿಸಲು ಕೊಳವೆ ಬಾವಿ ಕೊರೆಯಲಾಗಿದೆ. ಆದರೆ, ಪಂಪ್ ಸೆಟ್ ಅಳವಡಿಸಿಲ್ಲ. ಪೈಪ್‌ ಲೈನ್ ಇಲ್ಲ. ನನ್ನ ತಾಲ್ಲೂಕಿನಲ್ಲಿ ಕೇಳಿದರೆ ಬೇಗ ಅಳವಡಿಸುತ್ತೇವೆ ಎಂದು ಹೇಳುತ್ತಾರೆ. ನೀರು ಹೋದ ಮೇಲೆ ಪಂಪ್‌ ಸೆಟ್ ತೆಗೆದುಕೊಂಡು ಏನು ಮಾಡಬೇಕು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.

ಡಾ.ಪರಮೇಶ್ವರ ಮಾತನಾಡಿ, ‘ಸಚಿವರು ತುಂಬಾ ಸಿಟ್ಟಾಗಿದ್ದಾರೆ. ನೀರಿನ ವಿಚಾರದಲ್ಲಿ ಹುಡುಗಾಟಿಕೆ ಬೇಡ. ಬೇಗ ಪಂಪ್‌ ಸೆಟ್ ಅಳವಡಿಸುವ ಕೆಲಸ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ತಾಂತ್ರಿಕ ಸಮಸ್ಯೆ ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕು. ಕೆ.ಡಿ.ಪಿ ಸಭೆ ವೇಳೆಗೆ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕುಟುಂಬಕ್ಕಿಂತ ಕಾರ್ಡ್ ಹೆಚ್ಚು: ಜಿಲ್ಲೆಯಲ್ಲಿ 6.40.81 ಲಕ್ಷ ಕುಟುಂಬಗಳಿವೆ ಎಂದು ದಾಖಲೆ ಕೊಟ್ಟಿದ್ದು, 7.33 ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಕೊಡಲಾಗಿದೆ. ಇದು ಹೇಗೆ ಸಾಧ್ಯ? ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಕುಟುಂಬಗಳಿಗಿಂತ ಕಾರ್ಡ್‌ಗಳ ಸಂಖ್ಯೆಯೇ ಹೆಚ್ಚಾಗಿದೆ. ದಾಖಲಾತಿ ಸರಿ ಇಲ್ಲ. ಎಲ್ಲಿ ಲೋಪವಾಗಿದೆ ಸರಿಪಡಿಸಿಕೊಳ್ಳಿ. ಬೋಗಸ್, ಅಕ್ರಮವಾಗಿರುವ ಕಾರ್ಡ್ ರದ್ದುಪಡಿಸಿ ಎಂದು ಆದೇಶಿಸಿದರು.

ಕೈಗಾರಿಕಾ ಇಲಾಖೆ, ವಸತಿ ಇಲಾಖೆ, ನಗರ ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಉಪಮುಖ್ಯಮಂತ್ರಿ ಕಾರ್ಯದರ್ಶಿ ಡಾ.ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !